ಶನಿವಾರಸಂತೆ, ಸೆ. 10: ಪಟ್ಟಣದ ನಾಡ ಕಚೇರಿಗೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ, ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್, ತಹಶೀಲ್ದಾರ್ ಕೃಷ್ಣ ಅವರು ಭೇಟಿ ನೀಡಿ ಕಚೇರಿ ಪರಿಶೀಲಿಸಿದರು. ಸಾರ್ವಜನಿಕರ ಕುಂದುಕೊರತೆ ಆಲಿಸಿ, ಅಹವಾಲು ಸ್ವೀಕರಿಸಿದರು.ಶನಿವಾರಸಂತೆ ಗ್ರಾಮ ಪಂಚಾಯಿತಿ ವತಿಯಿಂದ ಅಧ್ಯಕ್ಷ ಮಹಮ್ಮದ್ ಗೌಸ್, ಸದಸ್ಯ ಸರ್ದಾರ್ ಹಾಗೂ ಇತರ ಸದಸ್ಯರು ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿದರು. ಪರವಾನಗಿ ನವೀಕರಣಗೊಳ್ಳದ ಪಂಚಾಯಿತಿ ಮಳಿಗೆಗಳಿಗೆ ಕಾನೂನು ಕ್ರಮ ಕೈಗೊಳ್ಳುವಂತೆ, ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೆ ಪಂಚಾಯಿತಿಯ ಪ್ರವಾಸಿ ಮಂದಿರ ಪಕ್ಕದ ಜಾಗ ಮಂಜೂರಾತಿ ಮಾಡುವ ಬಗ್ಗೆ ವ್ಯತ್ಯಾಸಗೊಂಡಿರುವ ಪಟ್ಟಣದ ನಗರ ಮಾಪನಕ್ಕೆ ಸೇರಿದ ನಕಾಶೆ ಮತ್ತು ಸರ್ವೆ ನಂ. ಸರಿಪಡಿಸುವಂತೆ ಕೋರಿ ಮನವಿ ಸಲ್ಲಿಸಿದರು.
ದುಂಡಳ್ಳಿ ಗ್ರಾ.ಪಂ. ವತಿಯಿಂದ ಅಧ್ಯಕ್ಷ ಸಿ.ಜೆ. ಗಿರೀಶ್, ಸದಸ್ಯೆ ಎನ್.ಕೆ. ಸುಮತಿ ಮತ್ತು ಇತರೆ ಸದಸ್ಯರು, ಸರ್ವೆ ನಂ.23/2ರಲ್ಲಿ ಅರಣ್ಯ ಇಲಾಖೆ ಎಂದಿರುವದನ್ನು ಗ್ರಾ.ಪಂ. ಕಟ್ಟಡ ಇರುವದರಿಂದ ಗ್ರಾಮ ಪಂಚಾಯಿತಿ ಹೆಸರಿನೊಂದಿಗೆ ಆರ್ಟಿಸಿ ಕೊಡುವಂತೆ ಹಾಗೂ ಮಾದ್ರೆ ಹೊಸಳ್ಳಿ ಗ್ರಾಮದ ಪೈಸಾರಿ ಜಾಗದಲ್ಲಿ ಕಸ ವಿಲೇವಾರಿ ಮತ್ತು ಆಶ್ರಯ ಮನೆಗೆ ಜಾಗ ಮಂಜೂರಾತಿ ಕೋರಿ ಮನವಿ ಸಲ್ಲಿಸಿದರು. ತಾಲೂಕು ಪಂಚಾಯಿತಿ ಸದಸ್ಯ ಬಿ.ಎಸ್. ಅನಂತಕುಮಾರ್, ಕುಡಿಯುವ ನೀರಿನ ಶುದ್ಧೀಕರಣ ಘಟಕವನ್ನು ಸರಿಪಡಿಸುವಂತೆ ಸಾರ್ವಜನಿಕ ಶೌಚಾಲಯಕ್ಕೆ ಜಾಗ ವ್ಯವಸ್ಥೆ ಮಾಡಿಕೊಡುವಂತೆ ಹಾಗೂ ಆರ್ಟಿಸಿಯಲ್ಲಿ ಬೆಳೆ ಕಲಂ ತಿದ್ದುಪಡಿ ಕೋರಿ ಮನವಿ ಸಲ್ಲಿಸಿದರು. ಪ್ರಗತಿಪರ ರೈತ ಕೆ.ಟಿ. ಹರೀಶ್ 1970ರಿಂದ ಕಂದಾಯ ನಕಾಶೆ ನನೆಗುದಿಗೆ ಬಿದ್ದಿದ್ದು, ಆಕರ ಬಂದಿ ದುರಸ್ತಿಯಾಗದಿರುವ ಬಗ್ಗೆ, ದಿವಾಕರ್ ಹಿಡುವಳಿ ಜಮೀನು ಬಿಡಿಸಿ ಕೊಡುವಂತೆ ಮನವಿ ಸಲ್ಲಿಸಿದರು.
ಕರವೇ ಹೋಬಳಿ ಅಧ್ಯಕ್ಷ ಮೋಹನ್ ಕುಮಾರ್ ನವೀಕರಣಗೊಳ್ಳದ ಪಂಚಾಯಿತಿ ಮಳಿಗೆಗಳ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಮನವಿ ಸಲ್ಲಿಸಿದರು. ನಿಡ್ತ ಗ್ರಾ.ಪಂ. ಅಧ್ಯಕ್ಷರು ಪಂಚಾಯಿತಿ ಕಟ್ಟಡಕ್ಕೆ ನಿವೇಶನ ಮಂಜೂರು ಕೋರಿ, ಆಲೂರು ಪಂಚಾಯಿತಿ ಸದಸ್ಯರು ರಸ್ತೆ ದುರಸ್ತಿಗಾಗಿ ಹಾಗೂ ಇನ್ನಿತರ ಸಾರ್ವಜನಿಕರೂ ತಮ್ಮ ಸಮಸ್ಯೆಗಳಿಗೆ ಪರಿಹಾರ ಕೋರಿ ಮನವಿ ಸಲ್ಲಿಸಿದರು.
ಅಧಿಕಾರಿಗಳು ಬಳಿಕ ಸಮುದಾಯ ಆರೋಗ್ಯ ಕೇಂದ್ರ, ಬಿಸಿಎಂ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ, ಕಚೇರಿ ಸಮೀಪ ಹಾಳು ಬಿದ್ದಿರುವ ಶೌಚಾಲಯ ಕಟ್ಟಡವನ್ನು ವೀಕ್ಷಿಸಿದರು.
ಈ ಸಂದರ್ಭ ನಾಡ ಕಚೇರಿ ಪ್ರಭಾರ ಉಪತಹಶೀಲ್ದಾರ್ ಮಧುಸೂದನ್, ಗ್ರಾಮ ಸಹಾಯಕರಾದ ರುದ್ರಯ್ಯ, ಹೂವಯ್ಯ, ಗ್ರಾಮ ಲೆಕ್ಕಿಗರಾದ ಮನುಕುಮಾರ್, ಸಂತೋಷ್, ಜಟ್ಟಪ್ಪ, ಗೌತಮ್, ಜಿಲ್ಲಾಧಿಕಾರಿ ಕಚೇರಿ ನೌಕರ ಮಹೇಶ್ ಹಾಗೂ ಇತರರು ಹಾಜರಿದ್ದರು.