ಮಡಿಕೇರಿ, ಸೆ. 10: ತಿತಿಮತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಾಡಿಗಳಿರುವ ಪ್ರದೇಶದಲ್ಲಿ ಕಳ್ಳಬಟ್ಟಿ ದಂಧೆ ನಡೆಯುತ್ತಿದೆ ಎಂದು ಆರೋಪಿಸಿ ಅಮಾಯಕರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದ್ದು, ಅಧಿಕಾರಿಗಳು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಗ್ರಾ.ಪಂ. ಸದಸ್ಯರು ಹಾಗೂ ಹಾಡಿಯ ಕೆಲವು ಪ್ರಮುಖರು ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗ್ರಾ.ಪಂ. ಸದಸ್ಯೆ ಪಿ.ಎಂ. ವಿಜಯ ಕಳ್ಳಬಟ್ಟಿ ದಂಧೆಯ ಆರೋಪ ರಾಜಕೀಯ ಪ್ರೇರಿತವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸುಬ್ರು, ರಾಮು, ಶಂಕರ ಹಾಗೂ ಪಾರ್ವತಿ ಎಂಬವರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದ್ದು, ಇವರುಗಳು ಅಮಾಯಕರಾಗಿದ್ದಾರೆ. ಕಳ್ಳಬಟ್ಟಿ ದಂಧೆ ನಡೆಸುತ್ತಿರುವ ನೈಜ ಆರೋಪಿಗಳನ್ನು ಬಂಧಿಸದೆ ರಾಜಕೀಯ ದುರುದ್ದೇಶದಿಂದ ಗ್ರಾ.ಪಂ. ಸದಸ್ಯ ಸುಬ್ರು ವಿರುದ್ಧ ಅಬಕಾರಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಳ ಒಪ್ಪಂದದಂತೆ ಗ್ರಾ.ಪಂ. ಅಧ್ಯಕ್ಷ ಸ್ಥಾನದ ಅಧಿಕಾರ ತಲಾ ಎರಡೂವರೆ ವರ್ಷ ಹಂಚಿಕೆಯಾಗಬೇಕಾಗಿತ್ತು. ಈ ಒಪ್ಪಂದಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ ಹುನ್ನಾರದಿಂದ ಸುಬ್ರು ಅವರನ್ನು ಕಳ್ಳಬಟ್ಟಿ ದಂಧೆಯ ಹೆಸರಿನಲ್ಲಿ ಸಿಲುಕಿಸಲಾಗಿದೆ ಎಂದು ವಿಜಯ ಆರೋಪಿಸಿದರು. ಹಾಡಿ ಭಾಗದಲ್ಲಿ ಕೆಲವರು ಔಷಧಿಗಾಗಿ ಕಳ್ಳಬಟ್ಟಿ ತಯಾರಿಸುವದು ನಮ್ಮ ಗಮನಕ್ಕೆ ಬಂದಿದೆ. ಹಾಡಿ ಮುಖಂಡರೆಲ್ಲಾ ಸೇರಿ ಹಾಡಿ ಜನರ ಸಭೆ ನಡೆಸಿ ಕಳ್ಳಬಟ್ಟಿ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಸಧ್ಯದಲ್ಲಿಯೇ ಮಾಡಲಾಗುವದೆಂದು ಅವರು ತಿಳಿಸಿದರು.

ಪ್ರಮುಖರಾದ ಬೋಜ ಮಾತನಾಡಿ, ಗ್ರಾ.ಪಂ. ಅಧ್ಯಕ್ಷರು ಕಳ್ಳಬಟ್ಟಿ ದಂಧೆ ನಡೆಯುತ್ತಿರುವದಕ್ಕೆ ತಾವೇ ಪ್ರತ್ಯಕ್ಷ ಸಾಕ್ಷಿ ಎಂದು ಹೇಳಿಕೊಂಡಿದ್ದು, ಇದು ಅತ್ಯಂತ ಖಂಡನೀಯವಾಗಿದೆ. ಹಾಡಿ ಪ್ರದೇಶದಲ್ಲೇ ವಾಸವಿಲ್ಲದ ಅಧ್ಯಕ್ಷರು ಕಳ್ಳಬಟ್ಟಿ ತಯಾರಿಕೆಯ ಸ್ಥಳ ಹಾಗೂ ವಸ್ತುಗಳನ್ನು ಸಾಕ್ಷೀಕರಿಸಲಿ ಎಂದು ಸವಾಲು ಹಾಕಿದರು. ರಾಜಕೀಯ ದುರುದ್ದೇಶದಿಂದ ಕಾರ್ಯ ನಿರ್ವಹಿಸುತ್ತಿರುವ ಗ್ರಾ.ಪಂ. ಅಧ್ಯಕ್ಷರು ಹಾಡಿಗಳ ಅಭಿವೃದ್ಧಿಗೆ ಯಾವದೇ ಕಾಳಜಿಯನ್ನು ತೋರುತ್ತಿಲ್ಲವೆಂದು ಆರೋಪಿಸಿದರು. ಈ ಭಾಗದ ಜಿ.ಪಂ. ಸದಸ್ಯರು ಕೂಡ ಕಳೆದ ಹತ್ತು ವರ್ಷಗಳಿಂದ ಗಿರಿಜನರ ಯಾವದೇ ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸಿಲ್ಲ. ಶಾಸಕರಾದ ಕೆ.ಜಿ. ಬೋಪಯ್ಯ ಅವರ ಶಿಫಾರಸ್ಸಿನಿಂದ ತಲಾ ಐವರಿಗೆ ಟಿಲ್ಲರ್ ಹಾಗೂ ಮೋಟರ್ ವಿತರಣೆಯಾಗಿದೆ. ಇದನ್ನು ಸಹಿಸದ ಮಂದಿ ಕಳ್ಳಬಟ್ಟಿ ದಂಧೆಯ ಹಣೆಪಟ್ಟಿ ಕಟ್ಟಿ ಹಾಡಿಯ ಜನರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಕಳ್ಳಬಟ್ಟಿ ಸೇವಿಸಿ ವನ್ಯಜೀವಿಗಳು ಮೃತಪಟ್ಟಿವೆ ಎನ್ನುವ ಆರೋಪ ನಿರಾಧಾರವಾಗಿದ್ದು, ಈ ಬಗ್ಗೆ ಆಧಾರ ಒದಗಿಸಲಿ ಎಂದು ಬೋಜ ಒತ್ತಾಯಿಸಿದರು. ಅಬಕಾರಿ ಅಧಿಕಾರಿಗಳು ಅಮಾಯಕರ ವಿರುದ್ಧ ಕಿರುಕುಳ ಮುಂದುವರೆಸಿದರೆ ಅಬಕಾರಿ ಕಚೇರಿ ಎದುರು ಹಾಡಿ ಜನರೊಂದಿಗೆ ಪ್ರತಿಭಟನೆ ನಡೆಸುವದಾಗಿ ಅವರು ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ಪಿ.ಪಿ. ರಾಜು, ಪಿ.ಸಿ. ರಾಮು, ಪಿ.ಆರ್. ಮಣಿ ಹಾಗೂ ಪೊನ್ನು ಉಪಸ್ಥಿತರಿದ್ದರು.