ಭಾಗಮಂಡಲ, ಮೇ 22: ಕಾವೇರಿ ನದಿ ತೀರದಲ್ಲಿರುವ ದೇವಟ್ ಪರಂಬು ಕೊಡವರಿಗೆ ಅತ್ಯಂತ ಭಾವನಾತ್ಮಕ ಮತ್ತು ಐತಿಹಾಸಿಕವಾದ ಸಂಬಂಧವಿರುತ್ತದೆ. ಡಿ. 13,1785 ರಂದು ಟಿಪ್ಪು ಸುಲ್ತಾನನ್ನು 10 ವರ್ಷದಿಂದ ಕೊಡವರ ವಿರುದ್ಧ ನಡೆಯುತ್ತಿದ್ದ ಯುದ್ಧ ಮತ್ತು ವೈಷಮ್ಯವನ್ನು ಕೊನೆಗೊಳಿಸಲು ಸಂಧಾನದ ಕರೆ ನೀಡಿ, ಸಾವಿರಾರು ಕೊಡವರ ಮಾರಣ ಹೋಮ ಮಾಡಿದ ಸ್ಥಳವಾಗಿದ್ದು, ದುಷ್ಕøತ್ಯದಲ್ಲಿ ಜೀವ ಕಳೆದುಕೊಂಡ ಸಹಸ್ರಾರು ಕೊಡವರ ಕುಟುಂಬಗಳ ನೆನಪಿನಲ್ಲಿ ಕೊಡವ ಕೌನ್ಸಿಲ್ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಮತ್ತು ಜಿಲ್ಲಾಡಳಿತಕ್ಕೆ ಈ ಜಾಗದಲ್ಲಿ ಸ್ಮಾರಕವೊಂದನ್ನು ನಿರ್ಮಿಸಲು ಒತ್ತಾಯಿಸಿತ್ತು. ಅಷ್ಟೆ ಅಲ್ಲದೆ ಈ ಜಾಗದಲ್ಲಿ ಸ್ಮಾರಕದ ಅಡಿಗಲ್ಲು ನಿರ್ಮಿಸಿತ್ತು.

ಕೆಲ ದಿನಗಳ ಹಿಂದೆ ಈ ಜಾಗದಲ್ಲಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು, ಸಮಾಜ ವಿರೋಧಿ ಶಕ್ತಿಗಳು ಮತ್ತು ಕೊಡವರ ಏಳಿಗೆ ಬಯಸದ ಜನರು, ಸ್ಮಾರಕವನ್ನು ವಿರೂಪಗೊಳಿಸಿರುವದನ್ನು ಬೆಂಗಳೂರಿನ ಕೊಡವಾಮೆ ಸಂಘಟನೆ ಖಂಡಿಸಿದೆ. ಶಾಂತಿಯುತವಾಗಿ ನೆಲೆಸುತ್ತಿರುವ ಕೊಡವರನ್ನು ಕೆಣಕಲು ಮತ್ತು ಕೋಮು-ಗಲಭೆಗೆ ಪ್ರಚೋದನೆ ನೀಡುವ ಷಡ್ಯಂತ್ರವಾಗಿರುತ್ತದೆ. ಈ ಕೃತ್ಯ ರಾಜಕೀಯ ಲಾಭಕ್ಕಾಗಿ ಮತ್ತು ಮತ ಓಲೈಕೆಯ ಪ್ರಯತ್ನವಾಗಿರುತ್ತದೆ. ಈ ಕೃತ್ಯದ ಹಿಂದಿರುವರ ವಿರುದ್ಧ ಕಾನೂನು ರೀತಿಯ ಕ್ರಮಕೈಗೊಂಡು, ತನಿಖೆ ಮಾಡಿ ತಪ್ಪಿತಸ್ಥರನ್ನು ಬಂಧಿಸಬೇಕೆಂದು ಆಗ್ರಹಿಸಿದೆ.

ಈ ಸ್ಮಾರಕವನ್ನು ಜಲಿಯನ್ ವಾಲಾ ಬಾಗ್ ಮಾದರಿಯಲ್ಲಿ ಪುನರ್ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದೆ.