ಹೆಬ್ಬಾಲೆ, ಮೇ 22: ಇಲ್ಲಿಗೆ ಸಮೀಪದ ತೊರೆನೂರು ಗ್ರಾಮದ ಗ್ರಾಮ ದೇವತೆ ಶ್ರೀ ದೊಡ್ಡಮ್ಮ-ಚಿಕ್ಕಮ್ಮ ತಾಯಿಯ ಹಬ್ಬ ಹಾಗೂ ಜಾತ್ರೋತ್ಸವ ನಿನ್ನೆ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು.

ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಹಬ್ಬದ ಅಂಗವಾಗಿ ತಾಯಿಯ ಸನ್ನಿಧಿಯಲ್ಲಿ ಬೆಳಿಗ್ಗೆ 7 ಗಂಟೆಗೆ ಗಣಪತಿ ಪೂಜೆ, ದುರ್ಗಾಹೋಮ, ಪೂರ್ಣಾಹುತಿ ಹೋಮ, ನವಗ್ರಹ ಪೂಜೆ ಮಹಾ ಮಂಗಳಾರತಿ ಸೇರಿದಂತೆ ಇನ್ನಿತರ ಪೂಜಾ ಕೈಂಕರ್ಯಗಳು ದೇವಾಲಯದ ಪ್ರಧಾನ ಅರ್ಚಕ ಸೋಮಶೇಖರ ಹಾಗೂ ಬಸವಲಿಂಗಶಾಸ್ತ್ರಿಯವರ ನೇತೃತ್ವದಲ್ಲಿ ನಡೆಯಿತು.

ಗ್ರಾಮದ ವಿರಕ್ತ ಮಠದ ಆವರಣದಲ್ಲಿರುವ ಗ್ರಾಮ ದೇವತೆಯ ದೊಡ್ಡಮ್ಮ-ಚಿಕ್ಕಮ್ಮ ತಾಯಿಯ ದೇವಾಲಯದಲ್ಲಿ ಕಲಶ ಸ್ಥಾಪಿಸುವದರೊಂದಿಗೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು.

ದೇವಿಗೆ ಕ್ಷೀರಾಭಿಷೇಕ ಸೇರಿದಂತೆ ವಿವಿಧ ಅಭಿಷೇಕ ಮಾಡಿ, ವಿವಿಧ ಪುಷ್ಪಗಳಿಂದ ದೇವಿಯನ್ನು ಅಲಂಕರಿಸಿ, ರಾತ್ರಿ 8 ಗಂಟೆಗೆ ಬನದಲ್ಲಿ ಅಗ್ನಿಕುಂಡ ಸ್ಥಾಪಿಸಿ, ಹರಕೆ ಹೊತ್ತ ಭಕ್ತಾದಿಗಳು ಉಪವಾಸ ವ್ರತ ಆಚರಿಸಿ, ಉತ್ಸವಗಳೊಂದಿಗೆ ಮೆರವಣಿಗೆಯಲ್ಲಿ ತಾಯಿಯ ಬನಕ್ಕೆ ಬಂದು ದೇವಸ್ಥಾನದ ಮುಂದೆ ಹಾಕಿರುವ ಅಗ್ನಿಕುಂಡವನ್ನು ಹಾಯ್ದು ದೇವಿಯ ದರ್ಶನ ಪಡೆದು ತಮ್ಮ ಹರಕೆಯನ್ನು ತೀರಿಸಿದರು.

ನಂತರ ರಾತ್ರಿ 10.30 ಗಂಟೆ ವೇಳೆಗೆ ಶ್ರೀ ದೊಡ್ಡಮ್ಮ-ಚಿಕ್ಕಮ್ಮ ತಾಯಿ ದೇವಸ್ಥಾನ ಸಮಿತಿ ವತಿಯಿಂದ ಗ್ರಾಮದ ಶ್ರೀ ಬಸವೇಶ್ವರ ದೇವಾಲಯದ ಬಳಿಯಿಂದ ವಿದ್ಯುತ್ ಅಲಂಕೃತ ಮಂಟಪದಲ್ಲಿ ದೊಡ್ಡಮ್ಮ-ಚಿಕ್ಕಮ್ಮ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿ ನಂತರ ಉತ್ಸವವನ್ನು ಗ್ರಾಮ ಪ್ರಮುಖ ಬೀದಿಗಳಲ್ಲಿ ಮಂಗಳ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಪವಿತ್ರ ಬನಕ್ಕೆ ಕೊಂಡೊಯ್ಯಲಾಯಿತು.

ದೇವಿಯ ಉತ್ಸವದೊಂದಿಗೆ ಗ್ರಾಮದ ಇತರೆ ಭಾಗಗಳಿಂದ ಹೊರಡುವ 2 ಉತ್ಸವ ಮಂಟಪಗಳ ಶೋಭಾಯಾತ್ರೆ ಹಬ್ಬಕ್ಕೆ ಮೆರಗು ನೀಡಿತು.

ಉತ್ಸವಗಳ ಜೊತೆಯಲ್ಲಿಯೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ವೀರಭದ್ರೇಶ್ವರನ ವೀರಗಾಸೆ ನೃತ್ಯ ಹಾಗೂ ಮಂಡ್ಯದ ಬಸವೇಶ್ವರ ಜಾನಪದ ಕಲಾ ಬಳಗ ಡೊಳ್ಳು ಕುಣಿತ, ಬೆಳ್ತಂಗಡಿ ತಾಲೂಕಿನ ಶ್ರೀ ವಂಶಿಕ ಆಟ್ರ್ಸ್ ವತಿಯಿಂದ ಯಕ್ಷಗಾನ ಗೊಂಬೆ ಬಳಗ ಹಾಗೂ ಕೀಲು ಕುದುರೆ ಪ್ರದರ್ಶನ ಭಕ್ತ ಸಮೂಹವನ್ನು ಆಕರ್ಷಿಸಿತು.

ಇಂದು ಬೆಳಗ್ಗೆ ಎತ್ತಿನಗಾಡಿ ಓಟದ ಸ್ಫರ್ಧೆ ಸೇರಿದಂತೆ ವಿವಿಧ ಗ್ರಾಮೀಣ ಕ್ರೀಡೆಗಳು ನಡೆದವು.

- ಹೆಚ್.ಬಿ. ದಿನೇಶಾಚಾರಿ ಹೆಬ್ಬಾಲೆ.