ಸೋಮವಾರಪೇಟೆ, ಜ. 24: ಕರಾವಳಿ ಸೇರಿದಂತೆ ಕರ್ನಾಟಕ ಇತರ ಭಾಗದಲ್ಲಿ ನಡೆಯುತ್ತಿದ್ದ ಸಾಂಪ್ರದಾಯಿಕ ಕ್ರೀಡೆಯಾಗಿರುವ ಕಂಬಳದ ಮೇಲೆ ಹೇರಿರುವ ನಿಷೇಧವನ್ನು ತೆರವುಗೊಳಿಸಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲು ಮುಂದಾಗಬೇಕು. ಈ ವಿಷಯದಲ್ಲಿ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿ ದೂಷಿಸುವದನ್ನು ನಿಲ್ಲಿಸಬೇಕು ಎಂದು ಶಾಸಕ ರಂಜನ್ ಹೇಳಿದ್ದಾರೆ.

ನಗರದಲ್ಲಿರುವ ಶಾಸಕರ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಂಬಳ ಕ್ರೀಡೆ ಈ ಭಾಗದ ಸಂಸ್ಕøತಿಯ ಪ್ರತೀಕವಾಗಿದ್ದು, ಈ ಕ್ರೀಡೆಯಲ್ಲಿ ಯಾವದೇ ಜಾನುವಾರನ್ನು ಹಿಂಸಿಸಲಾಗುವದಿಲ್ಲ. ಆದರೂ ಪೂರ್ವಾಗ್ರಹ ಪೀಡಿತರಾಗಿ ಈ ಕ್ರೀಡೆಯ ಮೇಲೆ ನಿಷೇಧ ಹೇರಲಾಗಿದೆ. ಇದನ್ನು ತೆರವುಗೊಳಿಸುವ ಕಾರ್ಯವನ್ನು ರಾಜ್ಯ ಸರ್ಕಾರ ಮಾಡಬೇಕು ಎಂದರು.

ಜಲ್ಲಿಕಟ್ಟು ಕ್ರೀಡೆಯಲ್ಲಿ ಜನರ ಪ್ರಾಣಕ್ಕೆ ಹಾನಿಯಾಗುವ ಸಂಭವವಿದ್ದರೂ ಸಹ ತಮಿಳುನಾಡಿನ ಜನತೆ ಹಾಗೂ ಸರ್ಕಾರದ ಒಗ್ಗಟ್ಟಿನ ಹೋರಾಟದ ಪ್ರಯತ್ನವಾಗಿ ಸುಗ್ರೀವಾಜ್ಞೆ ಹೊರಡಿಸಲಾಗಿದೆ. ತಮಿಳುನಾಡಿನ ಸರ್ಕಾರ ಹಾಗೂ ಜನತೆಯ ಬೇಡಿಕೆಯನ್ನು ಕೇಂದ್ರ ಸರ್ಕಾರ ಈಡೇರಿಸಿದೆ ಎಂದರು.

ಕಂಬಳದಲ್ಲಿ ಜಾನುವಾರುಗಳನ್ನು ಅತ್ಯಂತ ಪ್ರೀತಿ ಮತ್ತು ಕಾಳಜಿಯಿಂದ ಸಾಕಿ ಕಂಬಳಕ್ಕೆ ಅಣಿಗೊಳಿಸಲಾಗುತ್ತದೆ. ಇಲ್ಲಿ ಜಾನುವಾರಿಗೆ ಯಾವದೇ ಹಿಂಸೆ ನೀಡುವದಿಲ್ಲ. ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಉತ್ತೇಜಿಸುವ ಕಾರ್ಯ ಕಂಬಳದಲ್ಲಿ ಆಗುತ್ತದೆ. ಇಂತಹ ಕ್ರೀಡೆಗೆ ವಿಧಿಸಿರುವ ನಿಷೇಧದ ವಿರುದ್ಧ ಕರ್ನಾಟಕ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕಿದೆ. ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕರ್ನಾಟಕದ ಜನತೆಯ ಸಂಸ್ಕøತಿ, ಆಚಾರ ವಿಚಾರವನ್ನು ಎತ್ತಿಹಿಡಿಯಲು ಬದ್ಧವಾಗಿದ್ದು, ಕಂಬಳ ಹಾಗೂ ಜಲ್ಲಿಕಟ್ಟು ಕ್ರೀಡೆಯನ್ನು ತುಲನೆ ಮಾಡಿ ಮೋದಿ ಸರ್ಕಾರದ ವಿರುದ್ಧ ಅನಗತ್ಯವಾಗಿ ದೂಷಿಸುವ ಕಾರ್ಯವನ್ನು ಕಾಂಗ್ರೆಸ್ ಸರ್ಕಾರ ಕೈಬಿಡಬೇಕಿದೆ ಎಂದರು.

ಸೈನಿಕರ ಪರ ಕಾರ್ಯಕ್ರಮ ತಪ್ಪೇ?: ಚಿಕ್ಕಮಗಳೂರಿನ ಕಾಲೇಜಿನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ ಸೈನಿಕ ನಮನ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದೂ ಅಲ್ಲದೇ, ದೇಶಭಕ್ತ ಯುವಕನನ್ನು ಬೆದರಿಸಿ ಆತ್ಮಹತ್ಯೆಗೆ ಕಾರಣರಾದ ವಿದ್ಯಾರ್ಥಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ರಂಜನ್ ಆಗ್ರಹಿಸಿದರು.

ಕಾಂಗ್ರೆಸ್ ಪಕ್ಷದ ಕೆಲವರು ಎಬಿವಿಪಿಯ ಅಭಿಷೇಕ್‍ನನ್ನು ಬೆದರಿಸಿ, ಕ್ಷುಲ್ಲಕ ವಿಚಾರಕ್ಕೆ ಮೊಕದ್ದಮೆ ದಾಖಲಿಸುವಂತೆ ಪೊಲೀಸರ ಮೇಲೆ ಒತ್ತಡ ಹೇರಿದ್ದಾರೆ. ಇದರಿಂದ ಬೇಸತ್ತ ಅಭಿಷೇಕ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸೈನಿಕರ ಪರವಾಗಿ ಮಾತನಾಡುವ, ಸೈನಿಕರಿಗೆ ನಮಿಸುವ ಕಾರ್ಯಕ್ರಮ ಆಯೋಜಿಸುವದೂ ಸಹ ಈ ಸರ್ಕಾರದಡಿ ತಪ್ಪೇ ಎಂಬ ಪ್ರಶ್ನೆ ಮೂಡಿದೆ ಎಂದ ರಂಜನ್, ದೇಶಭಕ್ತಿಯನ್ನು ಜಾಗೃತಿಗೊಳಿಸುವ ಕಾರ್ಯಕ್ಕೆ ಸರ್ಕಾರ ಪ್ರೋತ್ಸಾಹಿಸುವದನ್ನು ಬಿಟ್ಟು ಬೆದರಿಸುವ ಕಾರ್ಯಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.

ವಿದ್ಯಾರ್ಥಿಯ ಆತ್ಮಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ಸರ್ಕಾರ ಬದ್ಧತೆಯನ್ನು ಪ್ರದರ್ಶಿಸಬೇಕಿದೆ ಎಂದು ರಂಜನ್ ಒತ್ತಾಯಿಸಿದರು.