ನಾಪೋಕ್ಲು, ಜ. 24: ಶನಿಪೂಜೆಗೆ ಪ್ರಖ್ಯಾತಿಯನ್ನು ಪಡೆದ ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನವು 3.50 ಕೋಟಿ ವೆಚ್ಚದಲ್ಲಿ ಊರ ಹಾಗೂ ಪರ ಊರಿನವರ ಸಹಕಾರದೊಂದಿಗೆ ಪುನರ್ ನವೀಕರಣಗೊಂಡಿದ್ದು, ತಾ. 25 ರಿಂದ (ಇಂದಿನಿಂದ) ಫೆ. 3ರ ತನಕ ನವೀಕರಣ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ನಡೆಯಲಿದೆ. ಇಂದು ದೇವರ ಬ್ರಹ್ಮಕಲಶೋತ್ಸವ ಜಾತ್ರೆಯು ಆರಂಭಗೊಳ್ಳಲಿದೆ.

ತಾ. 25 ರಂದು ಸಾಮೂಹಿಕ ಪ್ರಾರ್ಥನೆ, ಹಸಿವಾಣಿ ಮೆರವಣಿಗೆ ಉದ್ಘಾಟನೆ, ಉಗ್ರಾಣ ತುಂಬಿಸುವ ಕಾರ್ಯಕ್ರಮ ನಡೆಯಲಿದೆ. ಸಂಜೆ ತಂತ್ರಿಗಳ ಆಗಮನ ನಡೆದು, ಬಳಿಕ ನಡೆಯುವ ಸಭಾಕಾರ್ಯಕ್ರಮದಲ್ಲಿ ಆಶೀರ್ವಚನವನ್ನು ಸುಬ್ರಹ್ಮಣ್ಯ ಮಠಾಧೀಶ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ವಹಿಸಲಿದ್ದಾರೆ. ಸಭಾಕಾರ್ಯಕ್ರಮವನ್ನು ಎ.ಒ.ಎಲ್.ಇ ಅಧ್ಯಕ್ಷ ಡಾ|ಕೆ.ವಿ.ಚಿದಾನಂದ ಉದ್ಘಾಟಿಸಲಿದ್ದಾರೆ. ಧಾರ್ಮಿಕ ಉಪನ್ಯಾಸವನ್ನು ದಯಾನಂದ ಕತ್ತಲ್ ಸಾರ್ ನೀಡಲಿದ್ದಾರೆ. ಮುಖ್ಯಅಭ್ಯಾಗತರಾಗಿ ವೇದಮೂರ್ತಿ ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು ಭಾಗವಹಿಸಲಿದ್ದಾರೆ. ಮುಖ್ಯತಿಥಿಗಳಾಗಿ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ. ರಾತ್ರಿ ಶ್ರೀಶಾಸ್ತಾವು ಯಕ್ಷಗಾನ ಕಲಾಸಂಘ ಪೆರಾಜೆ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಸುದರ್ಶನ ಗರ್ವಭಂಗ ಯಕ್ಷಗಾನ ನಡೆಯಲಿದೆ.