ಗೋಣಿಕೊಪ್ಪಲು,ಡಿ.21: ದಿನೇ ದಿನೇ ಸಂಘರ್ಷದ ತಾಣವಾಗುತ್ತಿರುವ ದಿಡ್ಡಳ್ಳಿಯಲ್ಲಿ ಆಶ್ರಮ ಶಾಲಾ ಮಕ್ಕಳು ಭಯದಿಂದ ಮನೆಯತ್ತ ಮುಖ ಮಾಡಿದ್ದಾರೆ. ದಿಡ್ಡಳ್ಳಿ ಆದಿವಾಸಿಗಳನ್ನು ತೆರವು ಮಾಡಲಾದ ದಿನ ಸುಮಾರು 70 ರಷ್ಟಿದ್ದ ಮಕ್ಕಳ ಹಾಜರಾತಿ ಇದೀಗ ತಾ.19 ರಿಂದ 23 ಸಂಖ್ಯೆಗೆ ಕುಸಿದಿದೆ. ಒಟ್ಟು 105 ವಿದ್ಯಾರ್ಥಿಗಳು ಪ್ರಸ್ತುತ ಸಾಲಿನಲ್ಲಿ 1 ರಿಂದ 7ನೇ ತರಗತಿವರೆಗೆ ದಾಖಲಾತಿಯಾಗಿದ್ದು, ಇದೀಗ ರಾಜ್ಯ, ರಾಷ್ಟ್ರಮಟ್ಟದಲ್ಲಿ ಸುದ್ದಿಗೆ ಗ್ರಾಸವಾಗಿರುವ ಅರಣ್ಯ-ಪೆÇಲೀಸ್ ಜಂಟಿ ತೆರವು ಕಾರ್ಯಾಚರಣೆ ಯಿಂದಾಗಿ ಆಶ್ರಮ ಶಾಲಾ ಮಕ್ಕಳ ವಿದ್ಯಾಭ್ಯಾಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ಕೆಲವು ಪೆÇೀಷಕರಂತೂ ತಮ್ಮ ಮಕ್ಕಳಿಗೆ ಇಲ್ಲಿ ಸೂಕ್ತ ರಕ್ಷಣೆ ಇಲ್ಲ ಎಂದು ಶಿಕ್ಷಕರಿಗೆ ಬೈಗುಳ ಸುರಿಮಳೆಗೈದು ಶಾಲೆಯಿಂದ ಮನೆಗೆ ಮಕ್ಕಳನ್ನು ಕರೆದೊಯ್ದಿದ್ದಾರೆ. ಲೈನ್‍ಮನೆಯಿಂದ ಕಾಡಿಗೆ ಬಂದಿರುವ ಆದಿವಾಸಿಗಳು ತೆರವು ಕಾರ್ಯಾಚರಣೆ ನಂತರ ಆಶ್ರಮ ಶಾಲಾ ಮುಂಭಾಗವೇ ಠಿಕಾಣಿ ಹೂಡಿದ್ದರಿಂದಾಗಿ ಶಾಲಾ ಮಕ್ಕಳು ಶಾಲೆಯನ್ನು ತ್ಯಜಿಸಿ ಮನೆಯಲ್ಲಿಯೇ ಠಿಕಾಣಿ ಹೂಡ ಬೇಕಾದ ಅನಿವಾರ್ಯತೆ ಎದುರಾಗಿದೆ!. ಇದೀಗ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಸಮುದಾಯ ಭವನದಲ್ಲಿ ನಿರಾಶ್ರಿತರಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಿ ಕೊಡುವದಾಗಿ ಪರಿ ಪರಿಯಾಗಿ ಭಿನ್ನವಿಸಿದರೂ ಕವಡೆ ಕಿಮ್ಮತ್ತೂ ಒಪ್ಪದ ನಿರಾಶ್ರಿತರು, ಬೆಂಗಳೂರು ಇತ್ಯಾದಿ ಹೊರಜಿಲ್ಲೆಯಿಂದ ಬಂದಿರುವ ಹೋರಾಟಗಾರರು ಆಶ್ರಮ ಶಾಲೆಯ ಎದುರಿನ ಬಿಡಾರದಲ್ಲಿಯೇ ವಾಸ್ತವ್ಯ ಹೂಡಿದ್ದು, ಪ್ರತಿಭಟನೆ ಮುಂದುವರಿಸಿದ್ದಾರೆ.
ಒಟ್ಟಾರೆ 105 ವಿದ್ಯಾರ್ಥಿಗಳಲ್ಲಿ ಆಶ್ರಮ ಶಾಲೆಯಲ್ಲಿ ಸುಮಾರು 40 ಮಕ್ಕಳು ರಾತ್ರಿ ತಂಗುತ್ತಿದ್ದರು. ಇದೀಗ 23ಕ್ಕೆ ಕುಸಿದಿದೆ ಎಂದು ಮುಖ್ಯ ಶಿಕ್ಷಕಿ, ಮೇಲ್ವಿಚಾರಕಿ ವಿ.ಆರ್.ರಜನಿ ತಿಳಿಸಿದ್ದಾರೆ. ವಿದ್ಯಾರ್ಥಿಗಳಲ್ಲದೆ 5 ಮಂದಿ ಶಿಕ್ಷಕರು, 4 ಮಂದಿ ಪಾಕ ಪ್ರವೀಣರೂ ಆಶ್ರಮದಲ್ಲಿದ್ದಾರೆ. ಡಿ.7 ರ ತೆರವು ಕಾರ್ಯಾಚರಣೆ ನಂತರ ಇಲ್ಲಿನ ಶಿಕ್ಷಕರು ಒತ್ತಡದಲ್ಲಿಯೇ ಕಾರ್ಯನಿರ್ವಹಿಸುವಂತಾಗಿದೆ. ಐಟಿಡಿಪಿ ಅಧಿಕಾರಿಗಳು, ಸಿಬ್ಬಂದಿಗಳು, ಸುದ್ದಿ ಸಂಗ್ರಹಕ್ಕೆ ತೆರಳಿದ ದೃಶ್ಯಮಾಧ್ಯಮ ಹಾಗೂ ಪತ್ರಕರ್ತರು ಆಶ್ರಮ ಜಗುಲಿಯ ಮೇಲೇ ಒಂದಷ್ಟು ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ಸಾಮಾನ್ಯ. ಉಸ್ತುವಾರಿ ಸಚಿವ ಸೀತಾರಾಮ್, ಶಾಸಕರು, ಸಂಸದರು, ಜನಪ್ರತಿನಿಧಿಗಳು ಇಲ್ಲಿಯೇ ಶಾಲೆಯ ಮುಂಭಾಗವೇ ಪತ್ರಿಕಾಗೋಷ್ಟಿ ನಡೆಸಿದ್ದರು. ಆದಿವಾಸಿ ಮುಖಂಡ ರೊಂದಿಗೆ ಶಾಲಾ ಕೊಠಡಿಯಲ್ಲಿಯೇ ಗುಪ್ತ ಮಾತುಕತೆ ಮಾಡಿದ್ದರು. ಪೆÇಲೀಸರ ಬೂಟು ಕಾಲು ಸಪ್ಪಳ, ವಾಹನಗಳ ಭರಾಟೆಯ ಓಡಾಟ, ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಧಿಕ್ಕಾರ ಕೂಗುವ ಪ್ರತಿಭಟನಾಕಾರರು... ಇವೆಲ್ಲವೂ ಕಲಸುಮೇಲೋಗರವಾಗಿ ಆಶ್ರಮಶಾಲೆಯ ಪುಟ್ಟ ಮಕ್ಕಳ ಮನಸ್ಸಿನಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದರೆ ಅತಿಶಯವಲ್ಲ.
ಇದೀಗ ಉಸ್ತುವಾರಿ ಸಚಿವರು ಪುನರ್ವಸತಿಗೆ 3 ತಿಂಗಳು ಕಾಲಾವಕಾಶವನ್ನು ನೀಡಿರುವ ಹಿನ್ನೆಲೆ ದಿಡ್ಡಳ್ಳಿ ಆಶ್ರಮ ಶಾಲಾ ರಸ್ತೆಯ ಇಕ್ಕೆಲಗಳಲ್ಲಿ ನೂತನ ಬಿಡಾರಗಳು ತಲೆ ಎತ್ತುತ್ತಿವೆ. ಮೂರು ತಿಂಗಳು ಕಾಡಿನ ಮಕ್ಕಳನ್ನು ಸಾಕುವ ಜವಾಬ್ದಾರಿಯನ್ನು ಐಟಿಡಿಪಿ ಇಲಾಖೆಗೆ ಒಪ್ಪಿಸಿದ್ದು, ಆದಿವಾಸಿ ಪ್ರತಿಭಟನಾಕಾರರ ನಿತ್ಯ ಟೀಕೆಗೆ ಅಧಿಕಾರಿಗಳು ಗುರಿ ಯಾಗುತ್ತಿದ್ದಾರೆ. ನೂತನ ಬಿಡಾರ ಕಟ್ಟಿಕೊಳ್ಳಲು ಐಟಿಡಿಪಿ ಇಲಾಖೆ 577 ಫ್ಲಾಸ್ಟಿಕ್ ಹೊದಿಕೆಯನ್ನು ಪಿರಿಯಾಪಟ್ಟಣ, ಮೈಸೂರು ಇತ್ಯಾದಿ ಕಡೆಗಳಿಂದ ತರಿಸಿ ವಿತರಿಸಲು ಮುಂದಾಗಿದೆ. ಆಶ್ರಮ ಶಾಲಾ ಗೋದಾಮಿನಲ್ಲಿ ನಿರಾಶ್ರಿತರಿಗೆ ವಿತರಿಸಲು ಪೌಷ್ಟಿಕ ಆಹಾರವನ್ನು ಸಂಗ್ರಹಿಸಿಟ್ಟಿದೆ. ಆಶ್ರಮ ಶಾಲೆಯ ಮೂರು ಶೌಚಾಲಯ ಹಾಗೂ ಎರಡು ಸ್ನಾನದ ಗ್ರಹವನ್ನು ಇಲಾಖೆ ವ್ಯವಸ್ಥೆ ಮಾಡಿದ್ದು, ಶಾಲಾ ಹೊರಭಾಗ ದಿಂದಲೇ ಬಂದು ಹೋಗಲು ವ್ಯವಸ್ಥೆ ಮಾಡಲಾಗಿದೆ. ನೆರಳು ಛಾವಣಿಯನ್ನು ಅಡ್ಡಲಾಗಿ ಕಟ್ಟಲಾಗಿದೆ. ಇಷ್ಟೇ ಅಲ್ಲದೆ ಮತ್ತಷ್ಟು ಕೃತಕ ‘ಮೊಬೈಲ್’ ಶೌಚಾಲಯವನ್ನು ಇದೀಗ ಆಶ್ರಮ ಮುಂಭಾಗ ಬಿಡಾರದ ಹಿಂದೆ ಅಳವಡಿಸಲು ವ್ಯವಸ್ಥೆ ಮಾಡಲಾಗುತ್ತಿದೆ.
ಕಳೆದ ಮೂರು ದಿನಗಳಿಂದ ಇಲ್ಲಿ ಸಂಚಾರಿ ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿದೆ. ಮಾಲ್ದಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಅನನ್ಯ ಅವರು ಆದಿವಾಸಿ ನಿರಾಶ್ರಿತರ ಆರೋಗ್ಯ ವಿಚಾರಣೆ ಮಾಡಿ ಕೊಳ್ಳುತ್ತಿದ್ದಾರೆ. ಆರೋಗ್ಯ ನಿರೀಕ್ಷಕರಾದ ಸುದರ್ಶನ್, ಅವಿನಾಶ್ ಸಹಕರಿಸುತ್ತಿದ್ದು, ತಾ.19 ರಂದು 40 ಮಂದಿ ಆದಿವಾಸಿಗಳು, ತಾ.20ರಂದು 26 ಮಂದಿ ಹಾಗೂ ಇಂದು ಸುಮಾರು 65 ಮಂದಿ ಆರೋಗ್ಯ ತಪಾಸಣೆ ಮಾಡಿಕೊಂಡಿದ್ದಾರೆ. ಅಧಿಕವಾಗಿ ಶೀತಬಾಧೆ, ಜ್ವರ ಮತ್ತು ಕೆಮ್ಮಲಿನಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.
ಬೆಂಗಳೂರು ಇತ್ಯಾದಿ ಕಡೆ ಗಳಿಂದ ಹೋರಾಟಗಾರರು ಹಾಗೂ ಬೆಂಬಲಿಗರಿಂದ ಅಕ್ಕಿ, ತರಕಾರಿ ಇತ್ಯಾದಿ ಧವಸ ಧಾನ್ಯಗಳೂ ನಿರಾಶ್ರಿತರ ಶಿಬಿರಕ್ಕೆ ಹರಿದು ಬರುತ್ತಿದೆ. ಸಮಾಜವಾದಿ ಪಕ್ಷದ ಮುಖಂಡರೂ ಒಳಗೊಂಡಂತೆ ಹಲವರು ಹಣಕಾಸಿನ ನೆರವು ನೀಡುವದಾಗಿಯೂ ಭರವಸೆ ನೀಡಿದ್ದಾರೆ.
ಅರಣ್ಯ ಇಲಾಖೆಯ ತೆರವು ಕಾರ್ಯಾಚರಣೆ ವೈಫಲ್ಯ ಕಂಡಿದ್ದು ಜಿಲ್ಲಾಡಳಿತ, ಐಟಿಡಿಪಿ ಇಲಾಖೆ , ಪೆÇಲೀಸ್ ಇಲಾಖೆಗೆ ನಿದ್ದೆ ಕೆಡಿಸಿದೆ. ಈ ನಡುವೆ ನಕ್ಸಲ್ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದ್ದ ಕೆಲವು ಮಹಿಳೆ ಯರು, ಪುರುಷರು ಪೆÇಲೀಸರಿಗೆ ಶರಣಾಗತಿಯಾಗಿದ್ದವರು ಇದೀಗ ದಿಡ್ಡಳ್ಳಿಯಲ್ಲಿ ನಿರಾಶ್ರಿತರ ಪರ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿರುವದು ವಿಶೇಷ. ಮಾಜಿ ಜಿ.ಪಂ.ಉಪಾಧ್ಯಕ್ಷೆ ಕುಮಾರಿ ಕಾವೇರಿ ನಿರಾಶ್ರಿತರ ಪರವಾಗಿ ಧ್ವನಿಯಾಗಿ ದಿನವೂ ಕಾಣಿಸಿಕೊಳ್ಳುತ್ತಿದ್ದಾರೆ.
ಸಿದ್ದಾಪುರದ ಬಿದ್ದಂಡ ಗೌರಮ್ಮ ಅವರೂ ದಿಡ್ಡಳ್ಳಿಯಲ್ಲಿ ಪ್ರತ್ಯಕ್ಷವಾಗಿ ತಾನೂ ಈ ಹಿಂದೆ ಮಾನವ ಹಕ್ಕು ಹೋರಾಟಗಾರ್ತಿಯಾಗಿದ್ದೆ. ಈಗಿಲ್ಲ. ಇದೊಂದು ದೊಡ್ಡ ದೌರ್ಜನ್ಯ ಎಂದು ಪ್ರತಿಕ್ರಿಯಿಸಿದ್ದಾರೆ.
ತಾ.24 ರಂದು ಸಮಾಜ ಕಲ್ಯಾಣ ಸಚಿವ ಆಂಜನೇಯ ಭೇಟಿ ಸಾಧ್ಯತೆ ಇದ್ದು, ತಾ.20 ರಂದು ಸಂಜೆ ತಮ್ಮ ಆಪ್ತರನ್ನು ದಿಡ್ಡಳ್ಳಿಗೆ ಕಳುಹಿಸಿ, ಮಾಹಿತಿ ಸಂಗ್ರಹಿಸಿದ್ದಾರೆ. ಈ ನಡುವೆ ಗಿರಿಜನ ಮುಖಂಡರನ್ನು ಬೆಂಗಳೂರಿಗೆ ಕರೆಸಿಕೊಂಡು ಉಸ್ತುವಾರಿ ಸಚಿವರು, ಅರಣ್ಯ ಮತ್ತು ಕಂದಾಯ ಸಚಿವರು ಮಾತೂಕತೆ ನಡೆಸಲೂ ಯತ್ನ ಸಾಗಿದೆ ಎನ್ನಲಾಗುತ್ತಿದೆ.
ಆಶ್ರಮ ಶಾಲಾ ರಸ್ತೆಯಲ್ಲಿಯೇ ಬಟ್ಟೆ ಒಗೆಯುವದು, ಕುಡಿಯುವ ನೀರಿಗಾಗಿ ಏಕೈಕ ಕೊಳವೆ ಬಾವಿ ಮುಂದೆ ಸಾಲುಗಟ್ಟಿ ನಿಂತಿರುವದು ಇಂದು ಕಂಡು ಬಂದ ಚಿತ್ರಣ. ಇದೀಗ ಆಶ್ರಮ ಶಾಲೆಯ ಟ್ಯಾಂಕ್‍ನಿಂದ ನಿರಾಶ್ರಿತರಿಗೆ ಮತ್ತೊಂದು ನಲ್ಲಿ ವ್ಯವಸ್ಥೆಯನ್ನೂ ಕಲ್ಪಿಸಲು ಸಿದ್ಧತೆ ನಡೆದಿದೆ. ದಿಡ್ಡಳ್ಳಿಯ ರಾದ್ಧಾಂತ, ಗದ್ದಲ, ಸಂಘರ್ಷ, ಮಾತಿನ ಚಕಮಕಿಯನ್ನು ನೋಡುತ್ತಿದ್ದರೆ ಇದೆಲ್ಲಾ ಬೇಕಿತ್ತಾ? ಎಂದು ಒಮ್ಮೆ ಅನಿಸದಿರದು.
ದಿಡ್ಡಳ್ಳಿಯ ಚಿತ್ರಣವನ್ನು ಖುದ್ದು ವೀಕ್ಷಣೆ ಮಾಡಿರುವ ಮಾಜಿ ಜಿಲ್ಲಾ ಪರಿಷತ್ ಅಧ್ಯಕ್ಷ ಜೆ.ಎ.ಕರುಂಬಯ್ಯ ಅವರು ತಾನಾಗಿದ್ದರೆ ಇದೊಂದು ಸಮಸ್ಯೆಯೇ ಅಲ್ಲ, ಸಾವದಾನವಾಗಿ ಪರಿಹರಿಸುತ್ತಿದ್ದೆ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ದಿಡ್ಡಳ್ಳಿ ಆಶ್ರಮ ಶಾಲೆ ಮುಂದೆ ನಿತ್ಯ ಜಾತ್ರೆ ಕಂಡು ಬಂದಿದೆ. ಈ ನಡುವೆ ಆಶ್ರಮ ಶಾಲಾ ಮಕ್ಕಳ ಭವಿಷ್ಯ ಆತಂಕಕ್ಕೆ ಕಾರಣವಾಗಿದೆ. ಮೂರು ತಿಂಗಳು ನಿರಾಶ್ರಿತರಿಗೆ ಅಲ್ಲಿಯೇ ತಂಗುವ ವ್ಯವಸ್ಥೆ ಮಾಡಿರುವ ಹಿನ್ನೆಲೆ ಶಾಲಾ ಮಕ್ಕಳ ಮಾರ್ಚ್ ವಾರ್ಷಿಕ ಪರೀಕ್ಷೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ನಿಚ್ಚಳವಾಗಿದೆ.