ವೀರಾಜಪೇಟೆ, ಅ. 23: ವೀರಾಜಪೇಟೆಯ ಕೊಡಗು ದಂತ ವೈದ್ಯಕೀಯ ಕಾಲೇಜಿನಲ್ಲಿ 2016ರ ಪದವಿ ಪ್ರದಾನ ಸಮಾರಂಭ ನಡೆಯಿತು. ವಿದ್ಯಾರ್ಥಿಗಳ ಅತ್ಯಾಕರ್ಷಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಆರಂಭಗೊಂಡು, 44 ಪದವಿಗಳನ್ನು ಹಾಗೂ 39 ಸ್ನಾತಕೋತ್ತರ ಪದವಿಗಳನ್ನು ಪ್ರದಾನ ಮಾಡಲಾಯಿತು. ಕಾಲೇಜಿನ ಡೀನ್ ಪ್ರೊ. ಡಾ. ಸುನಿಲ್ ಮುದ್ದಯ್ಯ ಮಾತನಾಡಿ, ಕಾಲೇಜಿನ ಬಗ್ಗೆ ಮಾಹಿತಿ ನೀಡಿದರು.
ಶ್ರೀಲಂಕಾದ ಫ್ಯಾಕಲ್ಟಿ ಆಫ್ ಡೆಂಟಲ್ ಸೈನ್ಸ್, ಯೂನಿವರ್‍ಸಿಟಿ ಆಫ್ ಪ್ಯಾರಡೇನಿಯ ಸಂಸ್ಥಾಪಕ ಡೀನ್ ಹಾಗೂ ಪ್ರೊ. ಡಬ್ಲೂ.ಎಂ. ತಿಲಕರತ್ನೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಕೊಡಗು ದಂತ ವೈದ್ಯಕೀಯ ಕಾಲೇಜಿನ ಸಾಧನೆಯನ್ನು ಶ್ಲಾಘಿಸಿ, ಪ್ರಪಂಚದ ವಿವಿಧ ದಂತ ವಿಜ್ಞಾನ ಸಂಸ್ಥೆಗಳ ಸಹಯೋಗ ಸಂಶೋಧನೆ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಬಹಳ ಉಪಯುಕ್ತವಾಗಲಿದೆ ಎಂದರು.
ಶ್ರೀಲಂಕಾ ಫ್ಯಾಕಲ್ಟಿ ಆಫ್ ಡೆಂಟಲ್ ಸೈನ್ಸಸ್, ಪೆರಡೀನಿಯ ಯುನಿವರ್‍ಸಿಟಿಯ ಪ್ರೊ. ಅರುಣಿ ತಿಲಕರತ್ನೆ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಕೊಡಗು ದಂತ ವೈದ್ಯಕೀಯ ಸಂಸ್ಥೆ ಅತ್ಯುತ್ತಮ ಸೇವೆಯನ್ನು ಒದಗಿಸುತ್ತಿದೆ ಎಂದು ಶ್ಲಾಘಿಸಿದರು.
ಪ್ರೊ. ಡಾ. ಸುನಿಲ್ ಮುದ್ದಯ್ಯ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಮೀಸಲಿದ್ದ ಚಿನ್ನದ ಪದಕವನ್ನು ಪ್ರೊ. ಡಬ್ಲೂ.ಎಂ. ತಿಲಕರತ್ನೆ, ಕಂಜಿತಂಡ ಎಂ. ಕುಶಾಲಪ್ಪ ಚಿನ್ನದ ಪದಕ ಹಾಗೂ ಎಲ್ಲಾ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗಾಗಿ ಮೀಸಲಿದ್ದ ಕೆ. ಪೊನ್ನಮ್ಮ ಕುಶಾಲಪ್ಪ ಚಿನ್ನದ ಪದಕಗಳನ್ನು ವಿತರಿಸಲಾಯಿತು.