ಪೊನ್ನಂಪೇಟೆ, ಜು. 27: ಜೆ.ಸಿ.ಐ ಪೊನ್ನಂಪೇಟೆ ನಿಸರ್ಗ ಘಟಕದ ಆಶ್ರಯದಲ್ಲಿ ಪ್ರಾಯೋಜಕರ ನೆರವಿನಲ್ಲಿ ಇದೇ ತಿಂಗಳ 31 ರಂದು ಭಾನುವಾರ ಬಿಟ್ಟಂಗಾಲದಲ್ಲಿ ನಡೆಯಲಿರುವ 4ನೇ ವರ್ಷದ ರಾಜ್ಯ ಮಟ್ಟದ “ನಿಸರ್ಗ ಜೇಸಿ ಕೆಸರು ಗದ್ದೆ ಕ್ರೀಡೋತ್ಸವ 2016”ಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಕ್ರೀಡೋತ್ಸವ ಆಯೋಜನೆಗಾಗಿ ಕಳೆದ 1 ತಿಂಗಳಿನಿಂದ ಕಾರ್ಯ ನಿರ್ವಹಿಸುತ್ತಿರುವ ಪೊನ್ನಂಪೇಟೆಯ ನಿಸರ್ಗ ಜೇಸಿಸ್ ತಂಡ, ಇದೀಗ ಕ್ರೀಡಾಕೂಟದ ಅಂತಿಮ ಹಂತದ ಸಿದ್ಧತೆಯಲ್ಲಿ ತೊಡಗಿದೆ ಎಂದು ಜೆ.ಸಿ.ಐ ಪೊನ್ನಂಪೇಟೆ ನಿಸರ್ಗ ಘಟಕದ ಅಧ್ಯಕ್ಷರಾದ ಬಿ.ಈ ಕಿರಣ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕ್ರೀಡೋತ್ಸವ ಜರುಗುವ ವೀರಾಜಪೇಟೆ-ಗೋಣಿಕೊಪ್ಪಲು ಮುಖ್ಯ ರಸ್ತೆ ಬದಿಯಲ್ಲಿರುವ ಬಿಟ್ಟಂಗಾಲದ ನಿವೃತ ಮೇ.ಜ. ಕುಪ್ಪಂಡ ಪಿ.ನಂಜಪ್ಪ ಅವರ ಭತ್ತದ ಗದ್ದೆಯನ್ನು ಇದೀಗ ಸಜ್ಜುಗೊಳಿಸಲಾಗಿದ್ದು, ಅಂತಿಮ ಹಂತದ ಸಿದ್ದತಾ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಬೆಳಿಗ್ಗೆ 10.00 ಗಂಟೆಗೆ ಘಟಕಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಜರುಗುವ ಕ್ರೀಡೋತ್ಸವದ ಉದ್ಘಾಟನೆಯನ್ನು ವಿಧಾನ ಪರಿಷತ್ತಿನ ಸದಸ್ಯ ಎಂ.ಪಿ ಸುನಿಲ್ ಸುಬ್ರಮಣಿ ಅವರು ನೆರವೇರಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ನಿವೃತ ಸೇನಾಧಿಕಾರಿ ಮೇ.ಜ. ಕುಪ್ಪಂಡ ಪಿ. ನಂಜಪ್ಪ, ಬೆಂಗಳೂರಿನ ಉದ್ಯಮಿ ಕಡೇಮಾಡ ಕನಸು ದೇವಯ್ಯ, ಜಿ.ಪಂ ಸದಸ್ಯರಾದ ಅಪ್ಪಂಡೇರಂಡ ಭವ್ಯ ಚಿಟ್ಟಿಯಣ್ಣ, ವೀರಾಜಪೇಟೆ ತಾ.ಪಂ ಅಧ್ಯಕ್ಷ ಸ್ಮಿತಾ ಪ್ರಕಾಶ್, ಬಿಟ್ಟಂಗಾಲ ಗ್ರಾ.ಪಂ ಅಧ್ಯಕ್ಷ ಪುಚ್ಚಿಮಂಡ ಸಾಬ ಬೆಳ್ಳಿಯಪ್ಪ, ಬಿ.ಶೆಟ್ಟಿಗೇರಿ ಗ್ರಾ.ಪಂ ಅಧ್ಯಕ್ಷ ಕಡೇಮಾಡ ಅಶೋಕ್ ಚಿಟ್ಟಿಯಪ್ಪ, ಗೋಣಿಕೊಪ್ಪಲು ಚೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷ ಕೆ.ಕೆ. ಸುನಿಲ್ ಮಾದಪ್ಪ,

(ಮೊದಲ ಪುಟದಿಂದ) ಜೇಸಿಸ್‍ನ ವಲಯ ಉಪಾಧ್ಯಕ್ಷ ನಂದಕುಮಾರ್ ಅವರು ಆಗಮಿಸಲಿದ್ದಾರೆ ಎಂದು ವಿವರಿಸಿದ ಕಿರಣ್ ಅವರು, ಸಂಜೆ 5 ಗಂಟೆಗೆ ಜರುಗುವ ಕ್ರೀಡೋತ್ಸವದ ಸಮಾರೋಪ ಮತ್ತು ಬಹುಮಾನ ವಿತರಣಾ ಸಮಾರಂಭದಲ್ಲಿ ಜೇಸಿಸ್‍ನ ವಲಯ ಅಧ್ಯಕ್ಷ ಸಂದೀಪ್ ವಿಜಯನ್ ಅವರು ಮುಖ್ಯ ಅಥಿತಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಉಳಿದಂತೆ ಬೆಂಗಳೂರು ಬಿ.ಬಿ.ಎಂ.ಪಿ ಯ ಮಾಜಿ ಕಾರ್ಪೋರೇಟರ್ ಕದ್ದಣಿಯಂಡ ಹರೀಶ್ ಬೋಪಣ್ಣ, ವೀರಾಜಪೇಟೆ ತಾ.ಪಂ ಉಪಾಧ್ಯಕ್ಷ ನೆಲ್ಲಿರ ಚಲನ್ ಕುಮಾರ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕಿರಣ್ ರಾಯ್ ಪಡ್ನೇಕರ್ ಮೊದಲಾದವರು ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಕ್ರೀಡೋತ್ಸವದ ಕುರಿತು ಹೇಳಿಕೆ ನೀಡಿರುವ ಯೋಜನಾ ನಿರ್ದೇಶಕ ಕುಪ್ಪಂಡ ದಿಲನ್ ಬೋಪಣ್ಣ ಅವರು, ಕೆಸರು ಗದ್ದೆ ಪುಟ್ಬಾಲ್ ಪಂದ್ಯಾವಳಿಗೆ ಗರಿಷ್ಠ 40 ತಂಡಗಳಿಗೆ ಮಾತ್ರ ಅವಕಾಶವಿರುತ್ತದೆ. ಮೊದಲು ಹೆಸರು ನೋಂದಾಯಿಸಿಕೊಳ್ಳುವ 40 ತಂಡಗಳಿಗೆ ಆದ್ಯತೆ ನೀಡಲಾಗುವದು. ಪಾಲ್ಗೊಳ್ಳುವ ಫುಟ್ಬಾಲ್ ತಂಡಗಳು ಜು. 31ರಂದು ಬೆಳಿಗ್ಗೆ 9 ಗಂಟೆಯ ಒಳಗಾಗಿ ಹೆಸರು ನೋಂದಾಯಿಸಿಕೊಳ್ಳುವದು ಕಡ್ಡಾಯವಾಗಿರುತ್ತದೆ. ಫುಟ್ಬಾಲ್ ವಿನ್ನರ್ಸ್ ತಂಡಕ್ಕೆ ರೂ.15,000 ನಗದು ಬಹುಮಾನದೊಂದಿಗೆ ಆಕರ್ಷಕ ಟ್ರೋಫಿ, ರನ್ನರ್ಸ್ ತಂಡಕ್ಕೆ ರೂ.10,000 ನಗದು ಜೊತೆಗೆ ಟ್ರೋಫಿ ನೀಡಲಾಗುವದು. ಪುಟ್ಬಾಲ್ ಪಂದ್ಯಾವಳಿಯಲ್ಲಿ ಅತ್ಯುತ್ತಮ ಆಟಗಾರರೊಬ್ಬರನ್ನು ಗುರುತಿಸಿ ಅವರಿಗೆ ವಿಶೇಷ ಟ್ರೋಫಿಯನ್ನು ನೀಡಿ ಗೌರವಿಸಲಾಗುವದು. ಅಲ್ಲದೇ ವಿನ್ನರ್ಸ್ ಮತ್ತು ರನ್ನರ್ಸ್ ತಂಡದ ಎಲ್ಲ ಆಟಗಾರರಿಗೂ ವೈಯಕ್ತಿಕ ಟ್ರೋಫಿ ನೀಡಲಾಗುವದು. ಪುರುಷರ ಹಗ್ಗ ಜಗ್ಗಾಟ ಸ್ಪರ್ಧೆಯ ವಿನ್ನರ್ಸ್ ತಂಡಕ್ಕೆ ಆಕರ್ಷಕ ಪಾರಿತೋಷಕದೊಂದಿಗೆ ರೂ.15.000ನಗದು ಬಹುಮಾನ, ರನ್ನರ್ಸ್ ತಂಡಕ್ಕೆ ಪಾರಿತೋಷಕದೊಂದಿಗೆ ರೂ. 8,000 ನಗದು ಬಹುಮಾನ ನೀಡಲಾಗುವದು. ಮಹಿಳೆಯರ ಹಗ್ಗ ಜಗ್ಗಾಟ ಸ್ಪರ್ಧೆಯ ವಿನ್ನರ್ಸ್ ಮತ್ತು ರನ್ನರ್ಸ್ ತಂಡಕ್ಕೆ ಕ್ರಮವಾಗಿ ರೂ.7000 ಮತ್ತು 5000 ನಗದು ಬಹುಮಾನದೊಂದಿಗೆ ಆಕರ್ಷಕ ಪಾರಿತೋಷಕ ನೀಡಲಾಗುವದು. ಫುಟ್ಬಾಲ್ ಮತ್ತು ಹಗ್ಗಜಗ್ಗಾಟ ಸ್ಪರ್ಧೆಗಳಿಗೆ ತಲಾ ರೂ.500ನ್ನು ನೋಂದಣಿ ಶುಲ್ಕವಾಗಿ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕೆಸರು ಗದ್ದೆ ಓಟದ ಸ್ಪರ್ಧೆ ಒಟ್ಟು 8 ವಿಭಾಗಗಳಲ್ಲಿ ನಡೆಯಲಿದೆ. 1ರಿಂದ 5ನೇ ತರಗತಿವರೆಗಿನ ವಿದ್ಯಾರ್ಥಿಗಳ ಸಬ್ ಜುನಿಯರ್ ಬಾಲಕ ಬಾಲಕಿಯರ ತಂಡಗಳಿಗೆ, 6ರಿಂದ9ನೇ ತರಗತಿವರೆಗಿನ ವಿದ್ಯಾರ್ಥಿಗಳ ಜುನಿಯರ್ ಬಾಲಕ ಬಾಲಕಿಯರ ತಂಡಗಳಿಗೆ, 10ರಿಂದ ದ್ವಿತೀಯ ಪಿ.ಯು.ಸಿ ತರಗತಿವರೆಗಿನ ವಿದ್ಯಾರ್ಥಿಗಳ ಸೀನಿಯರ್ ಬಾಲಕ ಬಾಲಕಿಯರ ತಂಡಗಳಿಗೆ ಹಾಗೂ ಪದವಿ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಪುರುಷ ಮತ್ತು ಮಹಿಳೆಯರ ಮುಕ್ತ ತಂಡಗಳಿಗೆ ಪ್ರತ್ಯೇಕವಾಗಿ ಓಟದ ಸ್ಪರ್ಧೆ ಆಯೋಜಿಸಲಾಗಿದೆ. ಎಲ್ಲಾ ವಿಭಾಗದ ವಿಜೇತರಿಗೆ ಪ್ರಥಮ, ದ್ವೀತಿಯ, ಮತ್ತು ತೃತೀಯ ಮಟ್ಟದಲ್ಲಿ ನಗದು ಬಹುಮಾನ, ಪದಕ ಸೇರಿದಂತೆ ಪ್ರಶಸ್ತಿ ಪತ್ರವನ್ನು ನೀಡಲಾಗುವದು. ಪುರುಷ ಮತ್ತು ಮಹಿಳೆಯರ ಮುಕ್ತ ಓಟದ ಸ್ಪರ್ಧೆಯ ವಿಜೇತರಿಗೆ ನಗದು ಬಹುಮಾನ, ಪದಕ ಮತ್ತು ಪ್ರಶಸ್ತಿ ಪತ್ರದೊಂದಿಗೆ ಆಕರ್ಷಕ ಟ್ರೋಫಿ ನೀಡಲಾಗುವದು ಎಂದು ದಿಲನ್ ಬೋಪಣ್ಣ ಮಾಹಿತಿ ನೀಡಿದ್ದಾರೆ.

ನಿಸರ್ಗ ಜೇಸಿಸ್‍ನ ಹಿರಿಯ ಪದಾಧಿಕಾರಿ ಎ.ಎಸ್ ಟಾಟು ಮೊಣ್ಣಪ್ಪ ಹೇಳಿಕೆ ನೀಡಿ, ಕಳೆದ 3 ವರ್ಷಗಳಿಂದ ಘಟಕದ ವತಿಯಿಂದ ಆಯೋಜಿಸುತ್ತಿರುವ ಕೆಸರುಗದ್ದೆ ಕ್ರೀಡೋತ್ಸವ ಪೂರ್ಣವಾಗಿ ಪ್ರಾಯೋಜಕ ದಾನಿಗಳ ನೆರವಿನಿಂದಲೆ ನಡೆಯುತ್ತಿದ್ದು, ಗ್ರಾಮೀಣ ಕ್ರೀಡೆಗೆ ಪ್ರೋತ್ಸಾಹ ನೀಡುವ ಹಿನ್ನಲೆಯಲ್ಲಿ ಆಯೋಜಿಸಲಾಗುವÀ ಈ ಕೆಸರುಗದ್ದೆ ಕ್ರೀಡಾಕೂಟಕ್ಕೆ ಪ್ರಾಯೋಜಕರು ಘಟಕದೊಂದಿಗೆ ಕೈಜೋಡಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕ್ರೀಡೋತ್ಸವದ ಕುರಿತು ಹೆಚ್ಚಿನ ಮಾಹಿತಿಗಾಗಿ ಯೋಜನಾ ನಿರ್ದೇಶಕರನ್ನು ದೂರವಾಣಿ ಸಂಖ್ಯೆಯಾದ 9481883738 ನಲ್ಲಿ ಸಂಪರ್ಕಿಸುವಂತೆ ಅವರು ಕೋರಿದ್ದಾರೆ.