ಮಡಿಕೇರಿ, ಆ. 31: ಅಖಿಲ ಭಾರತ ನೌಕರರ ಕರೆಯ ಮೇರೆಗೆ ಎಲ್.ಐ.ಸಿ ನೌಕರರು ಸೆ. 2 ರಂದು ಒಂದು ದಿನದ ಮುಷ್ಕರ ನಡೆಸಲಿದ್ದಾರೆ ಎಂದು ಇನ್‍ಶೂರೆನ್ಸ್ ಕಾರ್ಪೋರೇಷನ್ ಎಂಪ್ಲಾಯಿಸ್ ಯೂನಿಯನ್ ತಿಳಿಸಿದೆ.

ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆಯ ಮೈಸೂರು ವಿಭಾಗೀಯ ಉಪಾಧ್ಯಕ್ಷ ಬಿ.ಎ. ಜನಾರ್ಧನ್, ಮಡಿಕೇರಿ ಘಟಕದ ಅಧ್ಯಕ್ಷ ಯು.ಆರ್. ಅನಂತೇಶ ಸರಳಾಯ ಹಾಗೂ ಕಾರ್ಯದರ್ಶಿ ಪಿ.ಎಂ. ಉತ್ತಪ್ಪ 12 ಅಂಶಗಳ ಬೇಡಿಕೆಗಳನ್ನು ಮುಂದಿಟ್ಟುಕೊಂಡು ತಾ. 2 ರಂದು ಕೇಂದ್ರ ಕಾರ್ಮಿಕ ಸಂಘಟನೆಗಳು ಮತ್ತು ಔದ್ಯಮಿಕ ಒಕ್ಕೂಟಗಳು ನಡೆಸುತ್ತಿರುವ ಮುಷ್ಕರಕ್ಕೆ ಎಲ್.ಐ.ಸಿ. ನೌಕರರು ಬೆಂಬಲ ಸೂಚಿಸುತ್ತಿರುವದಾಗಿ ತಿಳಿಸಿದ್ದಾರೆ.ಜನವಿರೋಧಿ ಮತ್ತು ಕಾರ್ಮಿಕ ವಿರೋಧಿ ನೀತಿಗಳನ್ನು ಬದಲಾಯಿಸಿಕೊಳ್ಳಬೇಕು ಎನ್ನುವ ಪ್ರಬಲವಾದ ಸಂದೇಶವನ್ನು ಕೇಂದ್ರ ಸರ್ಕಾರಕ್ಕೆ ತಲುಪಿಸಲು ತಾ. 2 ಮುಷ್ಕರ ನಡೆಸುವದು ಅನಿವಾರ್ಯವಾಗಿದೆ. ಎಲ್.ಐ.ಸಿ ನೌಕರರು ಹಾಗೂ ಸಾರ್ವಜನಿಕ ವಿಮಾ ವಲಯ ಸಂಸ್ಥೆಗಳ ನೌಕರರು ಮತ್ತು ಅಧಿಕಾರಿಗಳು ಈ ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಬಿ.ಎ. ಜನಾರ್ಧನ್, ಯು.ಆರ್. ಅನಂತೇಶ ಸರಳಾಯ ಹಾಗೂ ಪಿ.ಎಂ. ಉತ್ತಪ್ಪ ತಿಳಿಸಿದ್ದಾರೆ.

ಬೆಂಬಲ: ಮುಷ್ಕರಕ್ಕೆ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಒಕ್ಕೂಟ ಬೆಂಬಲ ವ್ಯಕ್ತಪಡಿಸಿದೆ. ಆ ದಿನ ಸಂಘದ ಸದಸ್ಯರು ಕೆಲಸಕ್ಕೆ ಹಾಜರಾಗುವದಿಲ್ಲ ಎಂದು ಪ್ರಕಟಣೆ ತಿಳಿಸಿದೆ.