ಮಡಿಕೇರಿ, ಸೆ.13 : ಸಮಾನತೆಯ ಹರಿಕಾರ ನಾರಾಯಣ ಗುರುಗಳ ಜಯಂತಿಯನ್ನು ಆಚರಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿರುವದನ್ನು ಸ್ವಾಗತಿಸಿರುವ ಬಿಲ್ಲವ ಸಮಾಜ ಹಾಗೂ ಎಸ್‍ಎನ್‍ಡಿಪಿ ಸಂಘಟನೆ ಗಳು, ಈ ಬಾರಿ ಜಯಂತಿಯನ್ನು ಸರಳ ರೀತಿಯಲ್ಲಿ ಆಚರಿಸುವದಾಗಿ ತಿಳಿಸಿದವು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಲ್ಲವ ಸಮಾಜದ ಜಿಲ್ಲಾಧ್ಯಕ್ಷ ಆನಂದ ರಘ, ಕಳೆದ ಅನೇಕ ವರ್ಷಗಳ ಬೇಡಿಕೆ ಈಡೇರಿದ್ದು, ನಾರಾಯಣ ಗುರು ಜಯಂತಿಯನ್ನು ಆಚರಿಸಲು ಮುಂದಾಗಿರುವ ಸರ್ಕಾರದ ಕ್ರಮ ಸ್ವಾಗತಾರ್ಹವೆಂದರು. ತಾ. 16 ರಂದು ನಗರದ ಕಾವೇರಿ ಕಲಾ ಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಸಮಾಜದ ಎಲ್ಲಾ ಬಂಧುಗಳು ಪಾಲ್ಗೊಳ್ಳುವಂತೆ ಕರೆ ನೀಡಿದರು.ಈ ಬಾರಿ ಜಯಂತಿಯನ್ನು ಸರಳ ರೀತಿಯಲ್ಲಿ ಆಚರಿಸಿ ಮುಂದಿನ ವರ್ಷ ಅದ್ಧೂರಿಯ ಆಚರಣೆಗೆ ಕ್ರಮ ಕೈಗೊಳ್ಳಲಾಗುವದೆಂದು ತಿಳಿಸಿದರು.

ನಾರಾಯಣ ಗುರುಗಳ ಜಯಂತಿಗೆ ರಜೆ ಘೋಷಣೆ ಮಾಡಬೇಕು ಮತ್ತು ಕಾರ್ಯಕ್ರಮಕ್ಕೆ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಆನಂದ ರಘು ಇದೇ ಸಂದರ್ಭ ಒತ್ತಾಯಿಸಿದರು. ಕೊಡಗು ಜಿಲ್ಲೆಯಲ್ಲಿ ಬಿಲ್ಲವ, ಈಡಿಗ ಮತ್ತು ತೀಯ ಸಮಾಜದ ಸುಮಾರು 1.20 ಲಕ್ಷ ಮಂದಿ ಇದ್ದಾರೆಂದು ಅವರು ಇದೇ ಸಂದರ್ಭ ತಿಳಿಸಿದರು.

ಎಸ್‍ಎನ್‍ಡಿಸಿ ಜಿಲ್ಲಾಧ್ಯಕ್ಷ ಕೆ.ಎನ್. ವಾಸು ಮಾತನಾಡಿ, ಸಮಾಜದ ಬಡ ವರ್ಗಕ್ಕೆ ಹೆಚ್ಚಿನ ಧನ ಸಹಾಯ ಮಾಡುವದರೊಂದಿಗೆ ಶಿಕ್ಷಣಕ್ಕೆ ಒತ್ತು ನೀಡಲು ಸರ್ಕಾರ ಕ್ರಮ ಕೈಗೊಳ್ಳ ಬೇಕೆಂದು ಒತ್ತಾಯಿಸಿದರು. ನಾರಾಯಣ ಗುರುಗಳ ಜಯಂತಿ ಆಚರಣೆಯ ಮೂಲಕ ನಾಡಿನ ಜನತೆ ಶಾಂತಿ ಸೌಹಾರ್ದತೆಗೆ ಒತ್ತು ನಿಡಬೇಕೆಂದು ವಾಸು ಕರೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ಅಧ್ಯಕ್ಷ ವಾಸುದೇವ್, ಮಡಿಕೆÉೀರಿ ತಾಲೂಕು ಅಧ್ಯಕ್ಷ ರಾಜೇಶ್ ಬಿ.ಎಂ. ಪ್ರಮುಖರಾದ ಅರುಣ್ ಕುಮಾರ್ ಹಾಗೂ ಕೆ.ಜಿ. ಬಾಲಕೃಷ್ಣ ಉಪಸ್ಥಿತರಿದ್ದರು.