ಮಡಿಕೇರಿ, ಸೆ. 13 : ಕಾರ್ನಿಯ ಅಂಧತ್ವ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಆರೋಗ್ಯ ಭಾರತಿ ಮತ್ತು ಭಾರತೀಯ ಜನತಾ ಪಕ್ಷದ ವೈದ್ಯಕೀಯ ಪ್ರಕೋಷ್ಠ ಮತ್ತು ಸಕ್ಷಮ ಸಹಯೋಗದಲ್ಲಿ ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲಿ ಕಾರ್ಯಕ್ರಮ, ಜನಜಾಗೃತಿ ಮತ್ತು ನೇತ್ರದಾನ ನೋಂದಣಿಯನ್ನು ಮಾಡಲು ನಿರ್ಧರಿಸಲಾಗಿದ್ದು, ಈಗಾಗಲೇ ಸುಮಾರು ಒಂಭತ್ತು ಕಾರ್ಯಕ್ರಮಗಳನ್ನು ಆಯೋಜಿಸ ಲಾಗಿದೆ. ಇದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಪೂರ್ಣ ಹಾಗೂ ಕನಸಿನ ಯೋಜನೆಗಳಲ್ಲಿ ಒಂದಾಗಿದೆ.

ಕಾರ್ಯಕ್ರಮವನ್ನು ವೀರಾಜಪೇಟೆ ತಾಲೂಕಿನ ಬಿ.ಸಿ.ಎಂ ವಸತಿ ನಿಲಯದಲ್ಲಿ ವಿದ್ಯಾರ್ಥಿ ಗಳಿಂದಲೇ ಜ್ಯೋತಿ ಬೆಳಗಿಸುವದರ ಮೂಲಕ ಉದ್ಘಾಟಿಸಲಾಯಿತು. 100ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಈ ಸಂದರ್ಭ ಕಾರ್ನಿಯ ಅಂಧತ್ವದ ಸಮಸ್ಯೆಯ ಬಗ್ಗೆ ಸವಿವರವಾಗಿ ಚರ್ಚೆಗಳು ನಡೆದವು. ಮುಂದಿನ 2020 ರ ಅವಧಿಯಲ್ಲಿ ಈ ಸಮಸ್ಯೆ ಬಗೆ ಹರಿಸುವಲ್ಲಿ ನಮ್ಮ ಪಾತ್ರವೇನೆಂದು ವಿದ್ಯಾರ್ಥಿಗಳು ವಿವರಿಸಿದರು. ಸ್ಥಳದಲ್ಲಿಯೇ ಸುಮಾರು ಮೂವತ್ತು ವಿದ್ಯಾರ್ಥಿಗಳು ನೇತ್ರದಾನ ಸಂಕಲ್ಪ ಮಾಡಿ ನೋಂದಣಿ ಮಾಡಿದರು.

ಮಡಿಕೇರಿ: ಆಗಸ್ಟ್ 31 ರಂದು ಕಾರ್ನಿಯ ಅಂಧತ್ವ ಮುಕ್ತ ಅಭಿಯಾನದ ವತಿಯಿಂದ ಮಡಿಕೇರಿ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಮಹಿಳಾ ಕಾಲೇಜಿನಲ್ಲಿ ಸುಮಾರು 350 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸುಮಾರು 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೇತ್ರದಾನ ಮಾಡುವ ಸಂಕಲ್ಪ ಮಾಡಿ 2020 ರ ಅವಧಿಯಲ್ಲಿ ಭಾರತವನ್ನು ಕಾರ್ನಿಯ ಅಂಧತ್ವ ಮುಕ್ತ ಭಾರತವನ್ನಾಗಿಸಲು ನಿರ್ಧರಿಸಿದರು.

ಸೋಮವಾರಪೇಟೆ: ಇಲ್ಲಿನ ಕಾರ್ನಿಯ ಅಂಧತ್ವ ಮುಕ್ತ ಭಾರತ ಅಭಿಯಾನದಡಿಯಲ್ಲಿ ಕುಶಾಲನಗರದ ವಿವೇಕಾನಂದ ಕಾಲೇಜು, ಕೊಡ್ಲಿಪೇಟೆಯ ಪ್ರಥಮ ದರ್ಜೆ ಕಾಲೇಜು, ಸೋಮವಾರಪೇಟೆಯ ಬಿಟಿಸಿಜಿ ಕಾಲೇಜು, ಶನಿವಾರ ಸಂತೆಯ ಭಾರತಿ ವಿದ್ಯಾಸಂಸ್ಥೆ, ಆಲೂರು ಸಿದ್ದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.

ಈ ಎಲ್ಲಾ ಕಾರ್ಯಕ್ರಮಗಳಲ್ಲಿ 1200 ರಿಂದ 1500 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇವರಲ್ಲಿ 600ರಷ್ಟು ವಿದ್ಯಾರ್ಥಿಗಳು ನೇತ್ರದಾನಕ್ಕಾಗಿ ನೋಂದಣಿ ಮಾಡಿಕೊಂಡಿದ್ದಾರೆ. ವಿದ್ಯಾಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಕರು ವಿದ್ಯಾರ್ಥಿ ನಾಯಕರು ಹೆಚ್ಚು ಆಸಕ್ತಿ ವಹಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

“ಕಾರ್ನಿಯ ಅಂಧತ್ವ ಮುಕ್ತ ಭಾರತ” ಅಭಿಯಾನವು ಕೊಡಗು ಜಿಲ್ಲೆಯಲ್ಲಿ ಬಹಳಷ್ಟು ಯಶಸ್ವಿಯಾಗಿ ಆರಂಭಗೊಂಡಿದ್ದು, ಸಾಂಕೇತಿಕವಾಗಿ ತಾ. 8 ರಂದು ಸಮಾರೋಪ ಗೊಂಡಿತು.

ಮುಂದಿನ ದಿನಗಳಲ್ಲಿ ಈ ಅಭಿಯಾನವನ್ನು ಆರೋಗ್ಯ ಭಾರತಿ ಹಾಗೂ ಸಕ್ಷಮ ಮತ್ತು ಭಾಜಪ ವೈದ್ಯಕೀಯ ಪ್ರಕೋಷ್ಠ ಇವರ ಸಹಯೋಗದಲ್ಲಿ ಸರ್ವರ ಸಹಕಾರದಿಂದ ವರ್ಷ ಪೂರ್ತಿ ನಡೆಸಲು ನಿಶ್ಚಯಿಸಲಾಯಿತು.