ಮಡಿಕೇರಿ, ಡಿ.2 : ನಾಪೋಕ್ಲು ಠಾಣಾಧಿಕಾರಿ ಬಿ.ಎಸ್.ವೆಂಕಟೇಶ್ ಅವರು ಒಬ್ಬ ದಕ್ಷ ಅಧಿಕಾರಿ ಯಾಗಿದ್ದು, ಇವರ ವಿರುದ್ಧ ಕಲ್ಲುಮೊಟ್ಟೆಯ ನಿವಾಸಿ ಎ.ಮೊೈದು ಎಂಬವರು ಮಾಡಿರುವ ಆರೋಪ ದುರುದ್ದೇಶದಿಂದ ಕೂಡಿದೆ ಎಂದು ಗ್ರಾ.ಪಂ ಸದಸ್ಯರು ಹಾಗೂ ಸ್ಥಳೀಯ ನಿವಾಸಿಗಳು ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಂಜಿಲ ಗ್ರಾಮದ ಪಿ.ಎಂ.ಅಜೀಜ್ ಮಾಸ್ಟರ್, ನಾಪೋಕ್ಲು ಠಾಣಾಧಿಕಾರಿ ವೆಂಕಟೇಶ್ ಅವರು ಜನಸ್ನೇಹಿ ಯಾಗಿದ್ದು, ಕಾನೂನಿನ ಚೌಕಟ್ಟಿನಡಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ವಿರುದ್ಧ ವಿನಾಕಾರಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿರುವದು ಖಂಡನೀಯ ವೆಂದರು.

ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಠಾಣಾಧಿಕಾರಿಗಳು ಎ.ಮೊೈದು ಅವರ ವಿರುದ್ಧ ದೂರು ದಾಖಲಿಸಿಕೊಂಡಿರುವದೇ ಕೊಲೆ ಬೆದರಿಕೆಯ ಆರೋಪಕ್ಕೆ ಕಾರಣವಾಗಿದೆ. ನಾಪೋಕ್ಲುವಿನಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಸಾರ್ವಜನಿಕರ ಸಂಪರ್ಕದೊಂದಿಗೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಾಮಾಣಿಕ ಅಧಿಕಾರಿ ವೆಂಕಟೇಶ್ ಅವರು ಯಾವದೇ ಕಾರಣಕ್ಕೂ ಬೆದರಿಕೆ ಯೊಡ್ಡಲು ಸಾಧ್ಯವಿಲ್ಲವೆಂದು ಪಿ.ಎಂ.ಅಜೀಜ್ ಮಾಸ್ಟರ್ ಅಭಿಪ್ರಾಯಪಟ್ಟರು.

ಕುಂಜಿಲ ಕಕ್ಕಬೆ ಗ್ರಾ.ಪಂ. ಸದಸ್ಯ ಕುಂಡಂಡ ಎ.ರಜಾಕ್ ಮಾತನಾಡಿ ದಕ್ಷ ಅಧಿಕಾರಿಯ ವಿರುದ್ಧ ಮಾಡುತ್ತಿರುವ ದುರುದ್ದೇಶಪೂರಿತ ಆರೋಪಗಳು ಅತ್ಯಂತ ಖಂಡನೀಯ ವಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಸುಳ್ಳು ದೂರಿನ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಗೋಷ್ಠಿಯಲ್ಲಿ ಗ್ರಾ.ಪಂ. ಸದಸ್ಯ ನಾಸಿರ್ ಮಕ್ಕಿ, ಕುಂಜಿಲ ಗ್ರಾಮದ ನಿವಾಸಿಗಳಾದ ಎ.ಇ.ಇರ್ಷಾದ್ ಹಾಗೂ ಪಿ.ಮಜೀದ್ ಉಪಸ್ಥಿತರಿದ್ದರು.