ಮಡಿಕೇರಿ, ನ.8: ರಾಜ್ಯ ಸರ್ಕಾರ ಘೋಷಿಸಿರುವ ಟಿಪ್ಪು ಜಯಂತಿಯನ್ನು ಜಿಲ್ಲಾ ಕಾಂಗ್ರೆಸ್ ಸ್ವಾಗತಿಸುವದಾಗಿ ಕಾಂಗ್ರೆಸ್ ಜಿಲ್ಲಾ ವಕ್ತಾರ ಕೆ.ಕೆ. ಮಂಜುನಾಥ್ ಕುಮಾರ್ ತಿಳಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಗೂಬೆ ಕೂರಿಸಲು ಬಿಜೆಪಿ ಭಾವನಾತ್ಮಕ ವಿಚಾರಗಳನ್ನು ಕೆಣಕಿ ರಾಜ್ಯದಲ್ಲಿ ಪಕ್ಷವನ್ನು ಬೆಳೆಸುವ ಕಾರ್ಯವನ್ನು ಮಾಡುತ್ತಿದೆ. ಟಿಪ್ಪು ಜಯಂತಿ ಸೇರಿದಂತೆ ಕೇವಲ ಜಾತಿ ಮತ್ತು ಕೋಮು ಆಧಾರದ ಮೇಲೆ ಭಾವನಾತ್ಮಕ ರಾಜಕಾರಣವನ್ನು ಮಾಡುತ್ತಿರುವ ಬಿಜೆಪಿಯ ನೀತಿ ಖಂಡನೀಯವಾಗಿದೆ.
ಕೊಡಗಿನ ಬಿಜೆಪಿ ಮಂದಿ ಟಿಪ್ಪು ಜಯಂತಿ ಬೇಡ ಎನ್ನುತ್ತಿದ್ದಾರೆ. ಬಿಜೆಪಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಸಂಸದರು ವಿರೋಧ ವ್ಯಕ್ತಪಡಿಸುವ ನೇತೃತ್ವ ವಹಿಸಿದ್ದಾರೆ. ಇದು ಕಾನೂನು ಬಾಹಿರ ಎನ್ನುವದನ್ನು ಅರಿತುಕೊಳ್ಳದ ಈ ಮಂದಿ ಸಾಮಾನ್ಯ ಜ್ಞಾನವಿಲ್ಲದಂತೆ ವರ್ತಿಸುತ್ತಿದ್ದಾರೆ. ವಿಧಾನಮಂಡಲದಲ್ಲಿ ಕಾನೂನು, ಕಾಯ್ದೆಗಳ ಬಗ್ಗೆ ಚರ್ಚೆ ನಡೆಸದೆ ವಿಫಲರಾಗಿರುವ ಬಿಜೆಪಿ ಶಾಸಕರು ಜನರನ್ನು ತಪ್ಪು ದಾರಿಗೆ ಎಳೆದು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.
ಕೇರಳ ನೋಂದಣಿ ವಾಹನಗಳನ್ನು ತಪಾಸಣೆ ಮಾಡಬೇಕು ಮತ್ತು ಗೇಟ್ಗಳನ್ನು ಸೀಲ್ ಮಾಡಬೇಕು ಎನ್ನುವ ಒತ್ತಾಯ ಸರಿಯಾಗಿದೆ. ಅದೇ ರೀತಿ ಕೊಡಗಿನ ಒಳಗೆ ಇರುವವರನ್ನು ಮೊದಲು ತಪಾಸಣೆ ಮಾಡಬೇಕು ಮತ್ತು ನಿಯಮ ಬಾಹಿರ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕು ಎನ್ನುವದು ಕಾಂಗ್ರೆಸ್ ಒತ್ತಾಯವಾಗಿದೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಯಾವದೇ ಕೊಲೆ ನಡೆದರೂ ಕೋಮು ಬಣ್ಣ ಹಚ್ಚುವ ಬಿಜೆಪಿ ವರ್ತನೆ ಖಂಡನಾರ್ಹವಾಗಿದ್ದು, ಮುಂದೆ ಭಾವನಾತ್ಮಕ ವಿಚಾರಗಳನ್ನು ಕೆಣಕಿ ಅನಾಹುತ ಸಂಭವಿಸಿದರೆ ಅದಕ್ಕೆ ಶಾಸಕರುಗಳೇ ನೇರ ಹೊಣೆಯಾಗಬೇಕಾಗುತ್ತದೆ.
ಬಿಜೆಪಿ ವಕ್ತಾರ ಅಭಿಮನ್ಯು ಕುಮಾರ್ ಹಾಗೂ ಪ್ರಧಾನ ಕಾರ್ಯದರ್ಶಿ ಕಾಂತಿ ಸತೀಶ್ ಅವರುಗಳು ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಪ್ರಚಾರವನ್ನು ಗಿಟ್ಟಿಸಿಕೊಳ್ಳಲು ವಿಧಾನ ಪರಿಷತ್ ಮಾಜಿ ಸದಸ್ಯ ಎ.ಕೆ.ಸುಬ್ಬಯ್ಯ ಅವರ ಹೇಳಿಕೆಯಿಂದ ಬಿಜೆಪಿ ಬಣ್ಣ ಬಯಲಾಗಿದೆ. ಬಿಜೆಪಿ ವÀಕ್ತಾರ ಸುಬ್ರಮಣ್ಯ ಉಪಾಧ್ಯಾಯರು, ಸುಬ್ಬಯ್ಯ ಅವರನ್ನು ದೇಶದಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದ್ದಾರೆ. ಆದರೆ ಸುಬ್ಬಯ್ಯ ಅವರು ಮಾಡಿರುವ ತಪ್ಪಾದರೂ ಏನು ಎನ್ನುವದನ್ನು ಬಿಜೆಪಿ ಸ್ಪಷ್ಟಪಡಿಸಬೇಕಾಗಿದೆ. ಸರಕಾರದ ನಿರ್ಣಯದ ವಿರುದ್ಧ ಕಾರ್ಯಾಚರಿಸುವದು ಕಾನೂನು ಬಾಹಿರ ಕ್ರಮವಾದ್ದರಿಂದ ಉಚ್ಛನ್ಯಾಯಾಲಯ ಜಯಂತಿಯನ್ನು ರದ್ದು ಮಾಡಲು ಮುಂದಾಗಲಿಲ್ಲ. ಆದ್ದರಿಂದ ಸರಕಾರದ ನಿಯಮಕ್ಕೆ ವಿರುದ್ಧವಾಗಿ ಶಾಸಕರುಗಳಾಗಲಿ ಅಥವಾ ಸಂಘ ಸಂಸ್ಥೆಗಳಾಗಲಿ ಅಥವಾ ನ್ಯಾಯಾಲಯವು ವಿರೋಧಿಸುವಂತೆ ಇಲ್ಲ ಎನ್ನುವದು ಸ್ಪಷ್ಟವಾಗಿದೆ.
ಬಿಜೆಪಿ ಇದನ್ನು ಅರಿತುಕೊಳ್ಳಬೇಕಾಗಿದ್ದು, ನಾವೆಲ್ಲರೂ ಭಾರತೀಯರು ಎನ್ನುವ ಭಾವನೆ ಎಲ್ಲಾ ರಾಜಕೀಯ ಪಕ್ಷಗಳಲ್ಲಿದ್ದರೆ ತನ್ನಿಂದ ತಾನೇ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ ಎಂದು ತಿಳಿಸಿದ್ದಾರೆ.