ಗೋಣಿಕೊಪ್ಪಲು, ನ. 8: ರಾಜ್ಯ ಸರ್ಕಾರದ ಜನಪರ ಕಾರ್ಯ ಕ್ರಮಗಳನ್ನು ಜನರಿಗೆ ತಲುಪಿಸುವ ಮೂಲಕ ಗ್ರಾಮ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸ ಬೇಕೆಂದು ಕಾಂಗ್ರೆಸ್ ಹಿರಿಯ ಮುಖಂಡ ಜಮ್ಮಡ ಕರುಂಬಯ್ಯ ಹೇಳಿದರು.
ಇಲ್ಲಿನ ಮಹಿಳಾ ಸಮಾಜ ಸಭಾಂಗಣದಲ್ಲಿ ನಡೆದ ಗೋಣಿಕೊಪ್ಪಲು ವಲಯ ಕಾಂಗ್ರೆಸ್‍ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಕಾಂಗ್ರೆಸ್ ಪಕ್ಷದ ಹಲವು ಯೋಜನೆಗಳ ಬಗ್ಗೆ ಕಾರ್ಯಕರ್ತರು ಪ್ರಚಾರ ಮಾಡಬೇಕಿರುವ ಅನಿವಾರ್ಯತೆ ಇದೆ. ಕಾಂಗ್ರೆಸ್ ಪಕ್ಷ ರೂಪಿಸಿದ ಯೋಜನೆಯ ಲಾಭವನ್ನು ಇದೀಗ ಬಿಜೆಪಿ ಪಕ್ಷದ ಕೇಂದ್ರ ಸರ್ಕಾರ ಉಪಯೋಗಿಸಿಕೊಳ್ಳುತ್ತಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ವಿಜಯ ಸಾಧಿಸಬೇಕಾದರೆ ಗ್ರಾಮ ಮಟ್ಟದಿಂದಲೇ ಸಂಘಟಿಸಬೇಕು ಎಂದು ಕರೆ ನೀಡಿದರು.
ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಟಿಪ್ಪು ಜಯಂತಿಯ ಬಗ್ಗೆ ಕೊಡಗಿನವರಿಗೆ ಭಾವನಾತ್ಮಕವಾಗಿ ವಿರೋಧವಿದೆ. ಜಯಂತಿ ಶಾಂತಿಯುತವಾಗಿ ನಡೆಯಬೇಕಾದರೆ ಪಕ್ಷದ ಕಾರ್ಯಕರ್ತರು ಯಾವದೇ ಪ್ರಚೋದನೆಗೆ ಒಳಗಾಗಬಾರದು. ಪಕ್ಷದ ಸಂಘಟನೆಗೆ ಕಾರ್ಯಕರ್ತರು ಕೈಜೋಡಿಸಬೇಕು ಎಂದರು.
ಕಾಂಗ್ರೆಸ್ ಪಕ್ಷ ಯಾವದೇ ಒಂದು ಕೋಮಿನ ಪಕ್ಷವಲ್ಲ ಬದಲಾಗಿ ಜಾತ್ಯತೀತ ಪಕ್ಷ ಮುಂದಿನ ಚುನಾವಣೆಯಲ್ಲಿ ನಮ್ಮ ಶಕ್ತಿಯನ್ನು ತೋರಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎ.ಜೆ ಬಾಬು ಹೇಳಿದರು.
ಟಿಪ್ಪು ಜಯಂತಿ ಸರ್ಕಾರದ ಕಾರ್ಯಕ್ರಮ. ಇದು ಮುಸ್ಲಿಂ ಜಯಂತಿಯಲ್ಲ. ಇಷ್ಟ ಇರುವವರು ಶಾಂತಿಯುತ ವಾಗಿ ಜಯಂತಿ ಆಚರಿಸಿ ಕೊಡಗಿನ ಕೋಮು ಭಾವನೆ ಕೆರಳಿಸಲು ಅವಕಾಶ ನೀಡಬೇಡಿ ಎಂದು ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಅಬ್ದುಲ್ ಸಲಾಂ ಹೇಳಿದರು.
ನಗರ ಕಾಂಗ್ರೆಸ್ ಅಧ್ಯಕ್ಷ ಮಳವಂಡ ಅರವಿಂದ್ ಕುಟ್ಟಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಕಾಡ್ಯಮಾಡ ಚೇತನ್, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಉಪಸ್ಥಿತರಿದ್ದರು.