ಮಡಿಕೇರಿ, ಆ. 25: ಮುಂಬರುವ ವಿಧಾನಸಭಾ ಚುನಾವಣೆಗೆ ಜಿಲ್ಲೆಯಲ್ಲಿ ಜಾತ್ಯತೀತ ಜನತಾದಳ ಪಕ್ಷವನ್ನು ಸಜ್ಜುಗೊಳಿಸಿ, ಪಕ್ಷದ ವರಿಷ್ಠ ಕುಮಾರ ಸ್ವಾಮಿಯವರ ಕೈ ಬಲಪಡಿಸುವ ಉದ್ದೇಶದಿಂದ ಜೆಡಿಎಸ್ ಪರಿಶಿಷ್ಟ ಜಾತಿ ಘಟಕದಿಂದ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಪಕ್ಷದ ವಿಶೇಷ ಸಭೆÉ ನಡೆಸುವದಾಗಿ ಜೆಡಿಎಸ್ ಪರಿಶಿಷ್ಟ ಜಾತಿ ಘಟಕದ ಜಿಲ್ಲಾಧ್ಯಕ್ಷ ಹೆಚ್.ಎನ್. ಯೋಗೇಶ್ ಕುಮಾರ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶೀಘ್ರದಲ್ಲೆ ತಾಲೂಕುವಾರು ಸಭೆಯ ಸ್ಥಳ ಮತ್ತು ದಿನಾಂಕವನ್ನು ನಿಗದಿಪಡಿಸಲಾಗುತ್ತದೆ ಎಂದರು. ಈ ಸಭೆಗೆ ಪಕ್ಷದಲ್ಲಿರುವ ಎಲ್ಲಾ ದಲಿತ ಮುಖಂಡರು, ಸಕ್ರಿಯ ಕಾರ್ಯಕರ್ತರು, ಈ ಹಿಂದಿನ ಚುನಾವಣೆಗಳಲ್ಲಿ ಪಕ್ಷದ ಮೂಲಕÀ ಸ್ಪರ್ಧಿಸಿ ಗೆಲುವು ಸಾಧಿಸಿದವರು, ಪರಾಭವಗೊಂಡವರು, ಪಕ್ಷದ ದಲಿತ ಮಹಿಳಾ ಮತ್ತು ಪುರುಷರು ಮತ್ತು ಪಕ್ಷದ ಹಿತೈಷಿಗಳನ್ನು ಆಹ್ವಾನಿಸಲಾಗುತ್ತದೆ ಎಂದರು.

ಜೆಡಿಎಸ್ ಪರಿಶಿಷ್ಟ ಜಾತಿ ಘಟಕದಿಂದ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಸದಸ್ಯತ್ವ ನೋಂದಣಿ ಮತ್ತು ಬೂತ್ ಮಟ್ಟದ ಸಮಿತಿಗಳನ್ನು ರಚಿಸುವ ಕಾರ್ಯಗಳು ನಡೆಯುತ್ತಿದ್ದು, ಅಂತಿಮ ಹಂತದ ಚಟುವಟಿಕೆ ನಡೆಯುತ್ತಿದೆ ಎಂದು ಯೋಗೇಶ್ ಕುಮಾರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಪರಿಶಿಷ್ಟ ಜಾತಿ ಘಟಕದ ಉಪಾಧ್ಯಕ್ಷ ಹೆಚ್.ಜಿ. ಗೋಪಾಲ್ ಉಪಸ್ಥಿತರಿದ್ದರು.