ಮಡಿಕೇರಿ, ಆ. 25: ಕೊಡಗು ಜಿಲ್ಲೆಗೆ ಆಗಮಿಸಿರುವ ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳ ಕಾರ್ಮಿಕರನ್ನು ತೋಟಗಳಲ್ಲಿ ದುಡಿಸಿಕೊಂಡು ಇದೀಗ ಅವರನ್ನು ಶಂಕಿತ ವಲಸಿಗರೆಂದು ಪ್ರತಿಬಿಂಬಿಸಿ ಕನಿಷ್ಟ ಸೌಲಭ್ಯವನ್ನೂ ನೀಡದೆ ತಡೆಯೊಡ್ಡುವದು ದಬ್ಬಾಳಿಕೆಯ ಪರಮಾವಧಿಯಾಗಿದೆ ಎಂದು ಸಿಪಿಐಎಂ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಇ.ರ. ದುರ್ಗಾಪ್ರಸಾದ್ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಡಗಿನ ಕಾಫಿ ತೋಟಗಳಲ್ಲಿರುವ ಇತರ ರಾಜ್ಯಗಳ ಕಾರ್ಮಿಕರಿಂದ ಸಾಧ್ಯವಾದಷ್ಟು ದುಡಿಸಿಕೊಂಡು ಇದೀಗ ಅವರಿಗೆ ಪಡಿತರ ಸೇರಿದಂತೆ ಯಾವದೇ ಸೌಲಭ್ಯ ನೀಡಬಾರದೆನ್ನುವ ಶಾಸಕ ಕೆ.ಜಿ. ಬೋಪಯ್ಯ ಅವರ ಧೋರಣೆ ಖಂಡನೀಯವೆಂದರು.
ಅಸ್ಸಾಂ ಮೂಲದ ಕಾರ್ಮಿಕರು ಜಿಲ್ಲೆಯ ತೋಟಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವದರಿಂದ ಕಾರ್ಮಿಕರ ಕೊರತೆಯ ಸಮಸ್ಯೆ ಸಾಕಷ್ಟು ಪ್ರಮಾಣದಲ್ಲಿ ಕಡಿಮೆ ಯಾಗಿದೆ ಎಂದು ಅಭಿಪ್ರಾಯ ಪಟ್ಟರು. ಕೆಲಸ ಅರಸಿ ಬಂದವರಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಇದ್ದಾರೆ ಎಂದು ಹೇಳಲಾಗುತ್ತಿದ್ದು, ಇವರನ್ನು ಪತ್ತೆ ಹಚ್ಚುವ ಕಾರ್ಯ ವನ್ನು ಪೊಲೀಸರು ಮಾಡಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಸಿಪಿಐಎಂ ಜಿಲ್ಲಾ ಸಂಘಟನಾ ಸಮಿತಿ ಸದಸ್ಯ ಎ.ಸಿ. ಸಾಬು ಹಾಗೂ ಪ್ರಮುಖರಾದ ರಮೇಶ್ ಉಪಸ್ಥಿತರಿದ್ದರು.