ಮಡಿಕೇರಿ, ಸೆ. 4: ಚತುರ್ಥಿಯ ಮುನ್ನ ದಿನವಾದ ಇಂದು ಜಿಲ್ಲೆಯಾದ್ಯಂತ ಜನತೆ ಗೌರಿ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.ಸೋಮವಾರಪೇಟೆನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಮಳೆ ಮಾಯವಾಗಿರುವ ಹಿನ್ನೆಲೆ ಹಬ್ಬಾಚರಣೆಗೆ ಪೂರಕ ವಾತಾವರಣ ನಿರ್ಮಾಣವಾಗಿದ್ದು, ಎಲ್ಲೆಡೆ ಸಂಭ್ರಮ-ಸಡಗರದಿಂದ ಗೌರಿ ವಿಗ್ರಹದ ಪ್ರತಿಷ್ಠಾಪನೆ ನೆರವೇರಿದೆ.
ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದು, ನೂರಾರು ಮಂದಿ ಪೂಜಾ ಕೈಂಕರ್ಯದಲ್ಲಿ ಭಾಗವಹಿಸುತ್ತಿದ್ದಾರೆ. ಇದರೊಂದಿಗೆ ನಗರದ ವಿವಿಧ ದೇವಾಲಯಗಳು, ಕಾನ್ವೆಂಟ್ ಬಾಣೆ, ಮಾನಸ ಹಾಲ್ ಸಮೀಪ, ಆಲೇಕಟ್ಟೆ ರಸ್ತೆ, ಕಿಬ್ಬೆಟ್ಟ, ಹಾನಗಲ್ಲು, ಯಡೂರು, ಶಾಂತಳ್ಳಿ, ಹಿರಿಕರ, ಬಜೆಗುಂಡಿ, ಬೇಳೂರು ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲೂ ಹಬ್ಬದ ಸಂಭ್ರಮ ಕಂಡುಬರುತ್ತಿದೆ. ಗ್ರಾಮಸ್ಥರು, ಸಂಘ ಸಂಸ್ಥೆಗಳ ವತಿಯಿಂದ ಗೌರಿ ಗಣೇಶ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಗೌರಿ ಆಗಮನದ ದಿನವಾದ ಇಂದು ಗಂಗೆ ಪೂಜೆಯೊಂದಿಗೆ, ಬಾಗಿನ ಸಹಿತ ಉತ್ಸವ ಮೂರ್ತಿಯ ಮೆರವಣಿಗೆ ನಡೆಸಿ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು.
ವೀರಾಜಪೇಟೆ
ವೀರಾಜಪೇಟೆಯಲ್ಲಿ ಗೌರಿ ಗಣೇಶೋತ್ಸವದ ಅಂಗವಾಗಿ ಇಂದು ಗೌರಿ ವೃತದ ಗೌರಮ್ಮನ ಪಲ್ಲಕ್ಕಿ ಉತ್ಸವದ ಮೆರವಣಿಗೆ ಸಿದ್ದಾಪುರ ರಸ್ತೆಯ ದಿ. ಉತ್ತಪ್ಪ ಅವರ ಕೆರೆಯಿಂದ ಪ್ರಾರಂಭ ಗೊಂಡಿತು.
ನಾದಸ್ವರ ವಾದ್ಯಗೋಷ್ಠಿ ಯೊಂದಿಗೆ ಹೊರಟ ಗೌರಮ್ಮನ ಪಲ್ಲಕ್ಕಿ ಮೆರವಣಿ ಸಿದ್ದಾಪುರ ರಸ್ತೆ, ದಖ್ಖನಿ ಮೊಹಲ್ಲಾ, ತೆಲುಗರ ಬೀದಿ, ಕಾವೇರಿ ಕಲ್ಯಾಣ ಮಂಟಪದ ರಸ್ತೆ. ಜೈನರ ಬೀದಿ, ಮೂರ್ನಾಡು ರಸ್ತೆ, ಚಿಕ್ಕಪೇಟೆ, ದೇವರಕಾಡು, ಅಪ್ಪಯ್ಯ ಸ್ವಾಮಿ ರಸ್ತೆ ಮಾರ್ಗವಾಗಿ ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಬಂದು ರಾತ್ರಿ 8 ಗಂಟೆಗೆ ಬಸವೇಶ್ವರ ದೇವಾಲಯ ತಲಪಿ ಗೌರಮ್ಮನ ಪ್ರತಿಷ್ಠಾಪನೆಯ ಬಳಿಕ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಿತು. ಮೆರವಣಿಗೆಯುದ್ದಕ್ಕೂ ಮುತ್ತೈದೆಯರು ಗೌರಮ್ಮನ ಪಲ್ಲಕ್ಕಿಗೆ ಶ್ರದ್ಧಾ ಭಕ್ತಿಯಿಂದ ಬಾಗಿನ ಅರ್ಪಿಸಿದರು.
ಶನಿವಾರಸಂತೆ
ಪಟ್ಟಣದ ಜನತೆ ಗೌರಿ ವ್ರತಾಚರಣೆಯ ಹಬ್ಬವನ್ನು ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಿದರು.
ಇಲ್ಲಿನ ಗಣಪತಿ - ಪಾರ್ವತಿ- ಚಂದ್ರಮೌಳೇಶ್ವರ ದೇವಾಲಯ ಹಾಗೂ ತ್ಯಾಗರಾಜ ಕಾಲೋನಿಯ ವಿಜಯ ವಿನಾಯಕ ದೇವಾಲಯದಲ್ಲಿ ಸೇವಾ ಸಮಿತಿಗಳ ವತಿಯಿಂದ ಗೌರಿಯನ್ನು ಪ್ರತಿಷ್ಠಾಪಿಸಲಾಗಿದ್ದು, ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಅರ್ಚಕ ಮೂಲಕೇಶ್ ಭಟ್ ಪೂಜಾ ವಿಧಿಗಳನ್ನು ನೆರವೇರಿಸಿದರು. ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನ ದೇವಾಲಯಗಳಿಗೆ ಆಗಮಿಸಿ, ಗೌರಿಯನ್ನು ಪೂಜಿಸಿ, ಬಾಗಿನ ಅರ್ಪಿಸಿದರು.
ಗೌರಿ ಹಬ್ಬ ಹೆಣ್ಣುಮಕ್ಕಳ ಹಬ್ಬವಾಗಿದ್ದು, ಬೆಳಿಗ್ಗೆಯಿಂದಲೇ ನೂತನ ವಸ್ತ್ರಗಳನ್ನು ಧರಿಸಿ ಮನೆಯನ್ನು ತಳಿರು - ತೋರಣಗಳಿಂದ ಅಲಂಕರಿಸಿ, ರಂಗೋಲಿ ಬಿಡಿಸಿ, ಕಳಸವಿಟ್ಟು, ಗೌರಿಯನ್ನು ಭಕ್ತಿಯಿಂದ ಪೂಜಿಸಿದರು. ಅರಸಿನ- ಕುಂಕುಮಕ್ಕೆಂದು ಕರೆದು ಹೆಣ್ಣುಮಕ್ಕಳಿಗೆ, ಮುತ್ತೈದೆಯರಿಗೆ ಬಾಗಿನ ಅರಸಿನ - ಕುಂಕುಮ, ಹೂ, ಗಾಜಿನ ಬಳೆಗಳನ್ನು ನೀಡಿ ಶುಭಾಶಯ ವಿನಿಮಯ ಮಾಡಿ ಸಂಭ್ರಮಿಸಿದರು.
ಹಬ್ಬದ ವಿಶೇಷ ಅಡುಗೆಗಳಾದ ಖಿಚಡಿ, ಕೆಸಸೊಪ್ಪಿನ ಸಾಂಬಾರ್, ಪಾಯಸ, ಹೋಳಿಗೆ ಸವಿದರು. ಸಂಜೆ ದೇವಾಲಯಗಳಿಗೆ ತೆರಳಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.