ಮಡಿಕೇರಿ, ಡಿ.2: ತಾ. 9 ರಿಂದ 22 ರವರೆಗೆ ಜಿಲ್ಲೆಯಲ್ಲಿ ಶಾಲಾ ಮಕ್ಕಳಿಗೆ ಚಲನಚಿತ್ರ ಪ್ರದರ್ಶನ ನಡೆಯಲಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಂ. ಸತೀಶ್ ಕುಮಾರ್ ತಿಳಿಸಿದ್ದಾರೆ.

ಮಕ್ಕಳ ಚಲನ ಚಿತ್ರೋತ್ಸವವನ್ನು ಜಿಲ್ಲೆಯಲ್ಲಿ ನಡೆಸುವ ಕುರಿತು ನಗರದ ಹೆಚ್ಚುವರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

2016-17ನೇ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯಲ್ಲಿ ಮಕ್ಕಳ ಚಲನ ಚಿತ್ರಗಳನ್ನು ಜಿಲ್ಲೆಯ ಮೂರು ಚಿತ್ರ ಮಂದಿರಗಳಲ್ಲಿ ತಾ. 9 ರಿಂದ 22 ರವರೆಗೆ ರಜೆ ದಿನಗಳನ್ನು ಹೊರತುಪಡಿಸಿ ಒಟ್ಟು 11 ದಿನಗಳ ಕಾಲ ನಡೆಯಲಿದ್ದು ಈ ನಿಟ್ಟಿನಲ್ಲಿ ಶಾಲಾ ಮಕ್ಕಳು ಇದರ ಸದುಪಯೋಗ ಪಡೆಯುವಲ್ಲಿ ಅಧಿಕಾರಿಗಳು ಹಾಗೂ ಶಿಕ್ಷಕರು ಸಹಕರಿಸುವಂತೆ ಮನವಿ ಮಾಡಿದರು.

ಚಲನಚಿತ್ರೋತ್ಸವಕ್ಕೆ ತಾ. 9 ರಂದು ನಗರದ ಕಾವೇರಿ ಚಿತ್ರ ಮಂದಿರದಲ್ಲಿ ಬೆಳಗ್ಗೆ ಚಾಲನೆ ನೀಡುವಂತೆ ಸಲಹೆ ಮಾಡಿದರು.

ಜಿಲ್ಲೆಯಲ್ಲಿ ಯು.ಎಫ್.ಓ ತಾಂತ್ರಿಕದೊಂದಿಗೆ ಕಾವೇರಿ ಮಹಲ್ ಚಿತ್ರಮಂದಿರ, ಕುಶಾಲನಗರ ಕೂರ್ಗ್ ಸಿನಿ ಪ್ಲೆಕ್ಸ್ ಚಿತ್ರ ಮಂದಿರ, ಶನಿವಾರಸಂತೆ ಯಶಸ್ವೀ ಚಿತ್ರಮಂದಿರಗಳಲ್ಲಿ ಮಾನಿತ ಚಿತ್ರ ಬೆಳಗ್ಗೆ 8 ರಿಂದ 10 ಗಂಟೆಯವರೆಗೆ ನಡೆಯಲಿದೆ ಈ ಹಿನ್ನೆಲೆ ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕ ರೂ.10 ವಿಧಿಸಲಾಗುವದೆಂದು ಚಿಕ್ಕ ಬಳ್ಳಾಪುರ ಮಕ್ಕಳ ಚಿತ್ರ ಸಂಸ್ಥೆ ವ್ಯವಸ್ಥಾಪಕರು ತಿಳಿಸಿದರು.

ಸಭೆಯಲ್ಲಿ ಮಡಿಕೇರಿ ತಹಶೀಲ್ದಾರ್ ಕುಸುಮ, ಡಿ.ಡಿ.ಪಿ.ಐ ಬಸವರಾಜು, ಮಡಿಕೇರಿ ಬಿ.ಇ.ಓ ಶ್ರೀಧರನ್, ಕಾವೇರಿ ಮಹಲ್ ಚಿತ್ರ ಮಂದಿರದ ಪಾಲಾಕ್ಷ, ಕುಶಾಲನಗರ ಕೂರ್ಗ್ ಸಿನಿ ಪ್ಲೆಕ್ಸ್ ಚಿತ್ರ ಮಂದಿರದ ಸುರೇಶ್, ಶನಿವಾರಸಂತೆ ಯಶಸ್ವೀ ಚಿತ್ರಮಂದಿರದ ಸುಧೀಂದ್ರ ಮತ್ತಿತರರು ಹಲವು ಸಲಹೆ ಮಾಡಿದರು.