ಸೋಮವಾರಪೇಟೆ, ಡಿ. 2: ಶಿರಸಿಯ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾ ಸ್ವಾಮಿಗಳ ಪೀಠಾರೋಹಣದ ರಜತ ಮಹೋತ್ಸವದ ಅಂಗವಾಗಿ ತಾ. 4ರಿಂದ (ನಾಳೆಯಿಂದ) 11ರವರೆಗೆ ಜಿಲ್ಲೆಯಾದ್ಯಂತ ಭಗವದ್ಗೀತಾ ಅಭಿಯಾನ ಹಾಗೂ ಗೀತಾಜಯಂತಿ ಕಾರ್ಯಕ್ರಮ ನಡೆಯಲಿದೆ ಎಂದು ಅಭಿಯಾನದ ತಾಲೂಕು ಗೌರವಾಧ್ಯಕ್ಷ ವಿಶ್ವೇಶ್ವರ ಸಾಮೀಜಿ ಹೇಳಿದರು.

ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಭಗವದ್ಗೀತಾ ಅಭಿಯಾನ ಏಕಕಾಲದಲ್ಲಿ ನಡೆಯಲಿದ್ದು, 2016-17 ಶ್ರೀ ಸೋಂದಾ ಸ್ವರ್ಣವಲ್ಲಿ ಶ್ರೀಗಳು ಯತಿಧರ್ಮವನ್ನು ಸ್ವೀಕರಿಸಿ ಪೀಠಾರೋಹಣಗೈದು 25 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ವಿಶೇಷೋತ್ಸವಗಳನ್ನು ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭ ಭಗವದ್ಗೀತೆ ಅಭಿಯಾನದ ಚಟುವಟಿಕೆಗಳನ್ನು ಸಾರ್ವಜನಿಕರಿಗೆ ತಿಳಿಯಪಡಿಸುವ ಉದ್ದೇಶದಿಂದ ಹಲವಾರು ಕಾರ್ಯಕ್ರಮಗಳನ್ನು ನಡೆಸಲಾಗುವದು ಎಂದರು.

ಗೀತಾ ಪಠಣ ರೂಪವಾದ ಸಪ್ತಾಹ ಗೀತಾಜಯಂತಿಯ ಅಂಗವಾಗಿ ತಾಲೂಕು ಮಟ್ಟದಲ್ಲಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏಳನೇ ಅಧ್ಯಾಯದ ಶ್ಲೋಕವನ್ನು ಪಠಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. 4ರಿಂದ 5ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಏಳನೇ ಅಧ್ಯಾಯದ ಮೊದಲ ಹತ್ತು ಶ್ಲೋಕವನ್ನು ಪಠಿಸುವ ಸ್ಪರ್ಧೆ, 6 ಮತ್ತು 7ನೇತರಗತಿ ವಿದ್ಯಾರ್ಥಿಗಳಿಗೆ ಮೊದಲ 15 ಶ್ಲೋಕ, 8ರಿಂದ ಹತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ 20 ಶ್ಲೋಕವನ್ನು ಪಠಿಸುವ ಸ್ಪರ್ಧೆ ಏರ್ಪಡಿಸಲಾಗಿದೆ. ಕಾಲೇಜು ವಿದ್ಯಾರ್ಥಿಗಳಿಗೆ 7ನೇ ಅಧ್ಯಾಯದ ಕುರಿತು ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಲಾಗುವದು ಎಂದರು.

ಸಾಮಾಜಿಕ ಸಾಮರಸ್ಯ, ವ್ಯಕ್ತಿತ್ವ ವಿಕಸನ, ನೈತಿಕ ಶಿಕ್ಷಣ ಹಾಗೂ ರಾಷ್ಟ್ರೀಯ ಭಾವೈಕ್ಯ ಈ ಕಾರ್ಯಕ್ರಮದ ಉದ್ದೇಶವಾಗಿದ್ದು, ಜಿಲ್ಲೆಯ ಪ್ರತಿಯೊಂದು ಕೇಂದ್ರದಲ್ಲಿ ಏಳು ದಿನಗಳ ಕಾಲ ಗೀತಾ ಪಠಣ, ಏಳನೆಯ ದಿನ ಪಾರಾಯಣ ಸಮಾಪ್ತಿ ಹಾಗೂ ಮಂಗಳೋತ್ಸವದ ಆಚರಣೆ ನಡೆಯಲಿದೆ ಎಂದರು. ಅಭಿಯಾನದ ಬಗೆಗಿನ ಹೆಚ್ಚಿನ ಮಾಹಿತಿಗೆ ಮೊ:9449475632 ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದರು.

ಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಚಿ.ನಾ. ಸೋಮೇಶ್, ಜಿಲ್ಲಾ ಸಂಚಾಲಕರಾದ ಎಸ್. ಮಹೇಶ್, ತಾಲೂಕು ಕಾರ್ಯದರ್ಶಿ ಮೃತ್ಯುಂಜಯ, ಸಂಯೋಜಕರಾದ ಪಂಕಜ ಶ್ಯಾಮ್‍ಸುಂದರ್, ರಾಗಿಣಿ ಉಪಸ್ಥಿತರಿದ್ದರು.