ಮಡಿಕೇರಿ, ಆ. 16: 2016 ರ ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ ಮಾಹೆಯವರೆಗೆ ಅವಧಿ ಮುಕ್ತಾಯವಾಗುವ ಗ್ರಾಮ ಪಂಚಾಯತ್‍ಗಳ ಸದಸ್ಯ ಸ್ಥಾನಗಳಿಗೆ ಸಾರ್ವತ್ರಿಕ ಚುನಾವಣೆಯ ಮೂಲಕ ಭರ್ತಿ ಮಾಡಲು ಹಾಗೂ ಗ್ರಾಮ ಪಂಚಾಯತ್‍ಗಳಲ್ಲಿ ಸದಸ್ಯರ ರಾಜೀನಾಮೆ, ಸದಸ್ಯರ ನಿಧನ ಮತ್ತಿತರ ಕಾರಣಗಳಿಂದ ಆಕಸ್ಮಿಕವಾಗಿ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆಯ ಮೂಲಕ ಭರ್ತಿ ಮಾಡಲು ರಾಜ್ಯ ಚುನಾವಣಾ ಆಯೋಗವು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 308ಎಎ ಮತ್ತು 308ಎಬಿ ಅನ್ವಯ ಚುನಾವಣಾ ವೇಳಾ ಪಟ್ಟಿಯನ್ನು ಪ್ರಕಟಿಸಿದೆ. ವಿವರ ಇಂತಿದೆ.

ತಾ. 16 ರಂದು ಜಿಲ್ಲಾಧಿಕಾರಿ ಅವರು ಚುನಾವಣಾ ಅಧಿಸೂಚನೆ ಹೊರಡಿಸಿದ್ದಾರೆ. ತಾ. 19 ರಂದು ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದೆ. ತಾ. 20 ರಂದು ನಾಮಪತ್ರ ಪರಿಶೀಲನಾ ಕಾರ್ಯ ನಡೆಯಲಿದೆ. ತಾ. 22 ರಂದು ಉಮೇದುವಾರಿಕೆಯನ್ನು ವಾಪಸ್ ಪಡೆಯಲು ಕಡೆ ದಿನವಾಗಿದೆ. ಆ.28 ರಂದು ಮತದಾನ ಅವಶ್ಯವಿದ್ದರೆ, ಮತದಾನವು ಅಂದು (ತಾ. 28) ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ನಡೆಯಲಿದೆ. ತಾ. 30 ರಂದು ಮರು ಮತದಾನ ಅವಶ್ಯವಿದ್ದರೆ ನಡೆಯಲಿದೆ. ತಾ. 31 ರಂದು ಮತಗಳ ಎಣಿಕೆಯು ಬೆಳಗ್ಗೆ 8 ಗಂಟೆಯಿಂದ ಆಯಾಯ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಜಿಲ್ಲೆಯಲ್ಲಿ ಮಡಿಕೇರಿ ತಾಲೂಕಿನ ಎಮ್ಮೆಮಾಡು 2 ಸ್ಥಾನಗಳಿಗೆ, ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ, ವೀರಾಜಪೇಟೆ ತಾಲೂಕಿನ ಕಾನೂರು ಮತ್ತು ಮಾಲ್ದಾರೆ ಗ್ರಾ.ಪಂ.ಗಳಲ್ಲಿನ ತಲಾ ಒಂದು ಸ್ಥಾನಗಳಿಗೆ ಒಟ್ಟು ಖಾಲಿ ಇರುವ 5 ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ.