ವೀರಾಜಪೇಟೆ, ನ. 23: ಸರಕಾರಗಳು ಗೋವು ಸಾಕಾಣೆದಾರರಿಗೆ ಸಹಾಯಧನ ನೀಡುವದರೊಂದಿಗೆ ಗೋಮಾತೆ ಮತ್ತು ನಿಸರ್ಗದ ರಕ್ಷಣೆಗೆ ಮುಂದಾಗ ಬೇಕೆಂದು ರಾಮಚಂದ್ರಾಪುರ ಮಠಾಧೀಶ ರಾಘವೇಶ್ವರ ಸ್ವಾಮೀಜಿ ಸಲಹೆ ನೀಡಿದರು.ಇಲ್ಲಿನ ತಾಲೂಕು ಮೈದಾನದಲ್ಲಿ ಗೋಯಾತ್ರೆ ಅಭಿಯಾನದ ಸುರಭಿ ಸಂತ ಸಮಾಗಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭೂಮಿ ತಾಯಿಗೆ ವಿಷ ಉಣಿಸಬಾರದು, ಗೋಮಾತೆಯನ್ನು ಹತ್ಯೆ ಮಾಡ ಬಾರದು, ಸರಕಾರಗಳು ರಾಸಾಯನಿಕ ವಸ್ತುಗಳಿಗೆ ಸಹಾಯಧನ ನೀಡವದರ ಬದಲಿಗೆ ದೇಶಿ ತಳಿಯ ಗೋ ಸಾಕಾಣೆದಾರರಿಗೆ ಸಹಾಯಧನ ನೀಡಿ ಪ್ರೋತ್ಸಾಹಿಸಿದಲ್ಲಿ ಗೋಮಾತೆ ಯೊಂದಿಗೆ ನಿಸರ್ಗದ ರಕ್ಷಣೆ ಯಾಗಲಿದೆ ಎಂದರು.ಪುಣ್ಯ ಕೋಟಿ, ಕೋಟಿ ದೇವರಿಗೆ ಸಮಾನವಾಗಿದ್ದು, ಕೊಡಗಿನ ತಂಪು ಗೋವು ಮತ್ತು ಭೂಮಿಯ ತಂಪು ಕಡಿಮೆಮಾಡಲಿ ಎಂದು ಹಾರೈಸಿದರು. ವೀರತನಕ್ಕೆ ಹೆಸರಾದ ಕೊಡಗಿನವರ ವೀರತನ ತಾಯಿಯ ಪ್ರಾಣ, ಮಾನಕ್ಕೆ ಅಪಮಾನವಾದಾಗ ಎದ್ದು ಬರಬೇಕು. ಇದೀಗ ಗೋಮಾತೆಗೆ ಸಂಚಕಾರ ಬಂದಾಗ ಕೊಡಗಿನವರ ಕೆಚ್ಚು ಪ್ರದರ್ಶಿತ ಗೊಳ್ಳಬೇಕು ಎಂದು ಸ್ವಾಮೀಜಿಗಳು ಕರೆ ನೀಡಿದರು.

ತ್ರೇತಾಯುಗದಲ್ಲಿ ಭಾರತವ್ಯಾಪಿ ಶ್ರೀ ರಾಮ ಎಲ್ಲೆಲ್ಲಿ ಹೋದನೋ ಅಲ್ಲಲ್ಲಿ ಒಳ್ಳೆಯದಾಗಿದೆ. ಕಲಿಯುಗ ದಲ್ಲಿ ಶಂಕರಾಚಾರ್ಯರೂ ಯಾತ್ರೆ ಮಾಡಿ ಮಠ, ದೇವಾಲಯ ಸ್ಥಾಪನೆ ಮಾಡಿ ಭೂಮಿಯಲ್ಲಿ ಶ್ರೇಯಸ್ಸಿಗೆ ಕಾರಣರಾದರು. ಎಲ್ಲಾ ಮಹಾಸಂತರಿಗಿಂತ ಗೋ ಮಾತೆ ಒಂದು ತೂಕ ಹೆಚ್ಚಿನದ್ದಾಗಿದ್ದಾಳೆ. ಯಾವದೇ ಸಂತರ ಮಲಮೂತ್ರ ಸೇವನೆ ಮಾಡಲಾಗುವದಿಲ್ಲ. ಆದರೆ ಗೋಮಾತೆಯ ತ್ಯಾಜ್ಯ ನಮಗೆಲ್ಲಾ ಪೂಜ್ಯವಾಗಿದೆ. ಗೋಮಯದಿಂದ ನೆಲ ಪವಿತ್ರವಾಗುತ್ತೆ, ಗೋ ಮೂತ್ರದಿಂದ ಶರೀರ ಪವಿತ್ರವಾಗುತ್ತೆ. ಹೀಗಾಗಿ ಗೋಮಾತೆಯ ಪವಿತ್ರತೆಗೆ ಹೋಲಿಕೆಯೇ ಇಲ್ಲ ಎಂದೂ ಅವರು ಹೇಳಿದರು. ಗೋಮಾತೆಯ ಯಾತ್ರೆ ನಾಡಿನಾದ್ಯಂತ ಸಂತರ ಸಮ್ಮುಖದಲ್ಲಿ ಪ್ರಾರಂಭವಾಗಿದೆ. ಈ ಮೂಲಕ ಸತ್ಯಯುಗದ ಆರಂಭಕ್ಕೆ ಕಾರಣವಾಗುತ್ತಿದೆ ಎಂದರು.

ಕೊಡಗು ನಾಡು ಈಶ್ವರನ ಕೊಡುಗೆಯಾಗಿರುವ ನಾಡಿದು. ಪ್ರಕೃತಿಯ ಮುಗುಳ್ನಗು ಕೊಡಗು ಭೂಮಿ. ಎಲ್ಲಿಯೂ ಸಿಗದ ಶಾಂತತೆ ಕೊಡಗಿನಲ್ಲಿದೆ. ಗೋಮಾತೆ ಕೂಡ ಕೊಡಗಿನಂತೇ ಸೃಷ್ಟಿಗೆ ದೇವರ ಕೊಡುಗೆಯಾಗಿದೆ. ಗೋಮಾತೆ ಕೇವಲ ಪ್ರಾಣಿ ಮಾತ್ರವಲ್ಲ ದೇಶಕ್ಕೇ ದೊಡ್ಡ ಕೊಡುಗೆ. ಎಲ್ಲಾ ಕೊಡುಗೆಗಳು ಸೇರಿರುವ ಕೊಡಗುನಾಡೇ ಗೋಮಾತೆ. ಇಂತಿರುವಾಗ ಕೊಡಗಿಗೆ ದೇವರ ದೊಡ್ಡ ಕೊಡುಗೆಯಾಗಿರುವ ಮಂಗಲ ಗೋಯಾತ್ರೆ ಆಗಮಿಸಿದೆ. ಗೋಮಾತೆ ಮತ್ತು ಕೊಡಗು ಎಂದೆಂದಿಗೂ ಒಟ್ಟಿಗೆ ಇರಬೇಕು ಎಂದು ಹಾರೈಸಿದರು.

ಕೊಡಗಿನಲ್ಲಿಯೂ ಗೋಸಂತತಿ ನಶಿಸುತ್ತಿರುವದು ಕಳವಳಕಾರಿ ಎಂದು ವಿಷಾಧಿಸಿದ ರಾಘವೇಶ್ವರ ಸ್ವಾಮೀಜಿ, ಮೇವು, ನೀರಿಲ್ಲ ಎಂಬ ಕೊರಗು ಕೊಡಗಿನಲ್ಲಿ ಇಲ್ಲದಿರುವಾಗ ಗೋಮಾತೆಯನ್ನು ಸಂರಕ್ಷಿಸುವದು ಕಾವೇರಿ ಆಶ್ರಯ ಜಿಲ್ಲೆಯ ಜನರ ಜವಬ್ದಾರಿ ಎಂದೂ ರಾಘವೇಶ್ವರರು ಹೇಳಿದರು. ನೀರಿಲ್ಲ, ಮೇವಿಲ್ಲ ಎಂಬ ಸಮಸ್ಯೆ ಬರುವದೇ ಗೋವಿಲ್ಲದಿರುವಾಗ ಎಂದು ಹೇಳಿದ ಸ್ವಾಮೀಜಿಗಳು, ಪ್ರಕೃತಿಯಲ್ಲಿ ಗೋವುಗಳೇ ಜೀವಾಳ. ಇಂತಿರುವಾಗ ಗೋವುಗಳೇ ಇಲ್ಲದಿದ್ದರೆ ನಿಸರ್ಗದ ಪಾಡೇನು ಎಂದು ಪ್ರಶ್ನಿಸಿದರು..

ರಾತ್ರಿ ಮತ್ತು ಚಂದ್ರ ಹೇಗೆ ಆಗಸಕ್ಕೆ ಭೂಷಣವೋ ಅಂತೆಯೇ ನಿಸರ್ಗದತ್ತ ಕೊಡಗಿನ ಭೂಮಿಯಲ್ಲಿ ಗೋವುಗಳಿದ್ದರೆ ಚಂದ. ಕೊಡಗಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಗೋವುಗಳ ಸಾಕಾಣಿಕೆಗೆ ಮುಂದಾಗಿ ಎಂದು ರಾಘವೇಶ್ವರರು ಕರೆ ನೀಡಿದರು.

ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಬೋದ ಸ್ವರೂಪಾನಂದ ಮಹಾರಾಜ್ ಸ್ವಾಮೀಜಿ ಮಾತನಾಡಿ, ಭಾರತದ ಸಂಸ್ಕøತಿಯಲ್ಲಿ ಗೋವಿಗೆ ಅತ್ಯಂತ ಮಹತ್ವವಿದೆ. ಸನಾತನ ಸಂಸ್ಕøತಿ ನಾಶವಾದಲ್ಲಿ ನಮ್ಮ ಸಂಸ್ಕøತಿಯೇ ನಾಶವಾದಂತೆ ಎಂದು ಎಚ್ಚರಿಸಿದರು. ಗೋ ಸಂರಕ್ಷಣೆ ನಿಟ್ಟಿನಲ್ಲಿ ರಾಘವೇಶ್ವರ ಶ್ರೀಗಳ ಕೈಂಕರ್ಯ ಮಹತ್ವದ್ದು ಎಂದು ಹರ್ಷ ವ್ಯಕ್ತಪಡಿಸಿದರು. ನಾಶದ ಹಂತದಲ್ಲಿನ ಭಾರತೀಯ ಗೋ ತಳಿಗಳ ರಕ್ಷಣೆಗೆ ಪ್ರತಿಯೋರ್ವರಲ್ಲಿಯೂ ಜಾಗೃತಿ ಮೂಡಬೇಕೆಂದೂ ಅವರು ಕರೆ ನೀಡಿದರು. ಆಚರಣೆಯಲ್ಲಿ ಇಲ್ಲದಿದ್ದರೆ ಭಾರತೀಯ ಸಂಸ್ಕøತಿ ಕೂಡ ಅಪಾಯದ ಹಂತ ತಲಪೀತು ಎಂದು ಅವರು ಎಚ್ಚರಿಸಿದರು.

ಶಾರದಾಶ್ರಮದ ಧರ್ಮಾತ್ಮಾನಂದ ಮಹಾಸ್ವಾಮೀಜಿ ಮಾತನಾಡಿ, ರಷ್ಯಾದೇಶದಲ್ಲಿ ಸಿಮೆಂಟ್ ಮತ್ತು ಸಗಣಿ ಹಾಕಿದ ನೆಲದಲ್ಲಿ ಪ್ರಸವದ ಪ್ರಯೋಗ ನಡೆಸಿದಾಗ ಸಗಣಿ ಸಾರಿಸಿದ ನೆಲದಲ್ಲಿ ಯಾವದೇ ಸೋಕು ಕಂಡುಬರಲಿಲ್ಲ ಎಂದು ತಿಳಿದುಬಂದಿದೆ. ಸಗಣಿ ಯಾವದೇ ಸೋಂಕು ನಿವಾರಕ ಶಕ್ತಿ ಹೊಂದಿದೆ. ಭೂಮಿಗೆ ಗೊಬ್ಬರ ಹಾಕುವಾಗ 15 ಅಡಿಯೊಳಗೆ ಇರುವ ಹುಳುಗಳು ಮಣ್ಣಿನ ಮೇಲೆ ಬರುತ್ತವೆ. ಹಳೇ ಕಾಲದಲ್ಲಿ ನಿಸರ್ಗದತ್ತವಾಗಿ ಜೀವಿಸುತ್ತಿದ್ದ ಜನರು ಹೆಚ್ಚು ವರ್ಷ ಬದುಕುತ್ತಿದ್ದರು. ಪ್ರತೀಯೋರ್ವನ ವ್ಯಕ್ತಿತ್ವ ವಿಭಿನ್ನವಾಗಿದ್ದರೂ ಎಲ್ಲರ ಮನದೊಳಗಿರುವ ಭಗವಂತನೋರ್ವನೇ ಎಂದೂ ಸ್ವಾಮೀಜಿ ಹೇಳಿದರು. ಜೀವನ ಪ್ರೀತಿ ಅಳವಡಿಸಿಕೊಂಡರೆ ಅಂಥವರ ಜೀವನ ಸಂತೋಷದಾಯಕವಾಗುತ್ತದೆ ಎಂದರು.

ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅರಮೇರಿ ಕಳಂಚೇರಿ ಮಠಾಧೀಶ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಕೃಷಿ ಪ್ರಧಾನವಾದ ಭಾರತದಲ್ಲಿ ಗೋವಿಗೆ ಅತ್ಯಂತ ಮಹತ್ವವಿದೆ. ಹಿಂದಿನ ಕಾಲದಲ್ಲಿ ಗೋವು ಸಾಕಿದರೆ ಹಾಲಿನ ಜತೆಗೆ ಗೋ ಉತ್ಪನ್ನಗಳ ಲಭ್ಯತೆಯ ಬಗ್ಗೆ ಜನತೆಯಲ್ಲಿ ಅರಿವಿತ್ತು. ಗೋ ಮಾತೆ ಎಂದು ಪೂಜಿಸಲ್ಪಡುತ್ತಿದ್ದ ಹಸುಗಳನ್ನು ಕೃಷಿ ಕ್ರಾಂತಿಯ ನಂತರದ ದಿನಗಳಲ್ಲಿ ನಿರ್ಲಕ್ಷಿಸಲಾಗುತ್ತಿದೆ. ರಾಸಾಯನಿಕ ಬಳಕೆ ಹೆಚ್ಚಾಗಿ ರಾಸಾಯನಿಕಗಳಿಂದ ನಮ್ಮ ಶರೀರವನ್ನೇ ವಿಷಯುಕ್ತವಾಗಿಸಿ ನಮ್ಮನ್ನು ನಾವೇ ಸಾಯಿಸಿಕೊಳ್ಳುತ್ತಿದ್ದೇವೆ ಎಂದು ವಿಷಾದಿಸಿದರು.

ಮಂಗಲ ಗೋ ಯಾತ್ರೆ ಸಮಿತಿಯ ಸಂಚಾಲಕ ಚಿ.ನಾ.ಸೋಮೇಶ್ ಮಾತನಾಡಿ, ದೇಶಿ ಗೋ ಸಂಪತ್ತು ನಶಿಸಿ ಹೋಗುತ್ತಿದೆ. ಜನ ಕೋಟಿ ವೃದ್ಧಿಸುತ್ತಿದೆಯೇ ವಿನಾಃ ಗೋ ಸಂತತಿ ಕ್ಷೀಣಿಸುತ್ತಿರುವ ಕಾಲಘಟ್ಟ ಈಗಿನದ್ದು. ನಮ್ಮತನ ನಾವು ಕಳೆದುಕೊಂಡು ಜನರಿಗೆ ಭವಿಷ್ಯವೇ ಇಲ್ಲದಂಥ ಆತಂಕ ಸೃಷ್ಟಿಯಾದ ಸಂದರ್ಭ ಗೋ ಸಂರಕ್ಷಣೆಯ ಮಹತ್ವ ಸಾರಿದ ಹೊಸನಗರದ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಶ್ರೀಗಳು ದೇಶೀ ತಳಿಯ ರಕ್ಷಣೆಗೆ ಮುಂದಾಗಿ ಜನಮಾನಸದಲ್ಲಿ ಆಶಾಭಾವನೆಗೆ ಕಾರಣರಾದರು ಎಂದು ಶ್ಲಾಘಿಸಿದರು. ಲಕ್ಷೋಪಲಕ್ಷ ಗೋ ಪಾಲಕರು ಗೋಸಂರಕ್ಷಣೆಗೆ ಕಟಿಬದ್ಧರಾಗಬೇಕು ಎಂಬ ಸಂದೇಶವನ್ನು ಮಂಗಲ ಗೋಯಾತ್ರೆ ಸಾರುತ್ತಿದೆ ಎಂದೂ ಸೋಮೇಶ್ ಹೇಳಿದರು.

ವೀರಾಜಪೇಟೆ ತಾಲೂಕು ಮೈದಾನದಲ್ಲಿ ಜರುಗಿದ ಗೋಮಂಗಲ ಯಾತ್ರೆಯಲ್ಲಿ ಈ ವ್ಯಾಪ್ತಿಯ ನೂರಾರು ಭಕ್ತರು ಪಾಲ್ಗೊಂಡಿದ್ದರು. ರಾಮಚಂದ್ರಾಪುರ ಮಠಾಧೀಶ ರಾಘವೇಶ್ವರ ಮಹಾಸ್ವಾಮಿ ಅವರನ್ನು ಸಾಂಪ್ರದಾಯಿಕ ಚಂಡೆವಾದ್ಯದೊಂದಿಗೆ ವೇದಿಕೆಗೆ ಕರೆತರಲಾಯಿತು. ಈ ಸಂದರ್ಭ ಉತ್ತರಕಾಶಿ ಕಪಿಲಾಶ್ರಮದ ರಾಮಚಂದ್ರಗುರೂಜಿ, ತಲಕಾವೇರಿಯ ಆನಂದತೀರ್ಥ ಸ್ವಾಮೀಜಿ ಇದ್ದರು.

ಮೈಥಿಲಿ ರಾವ್, ಸೌಮ್ಯ, ಶೃತಿ, ವಂಶಿಕಾ ಗೋವುಗಳ ಮಹತ್ವ ಸಾರುವ ಮಂಗಳ ಗೋಯಾತ್ರೆ ಎಂಬ ಗೋಗೀತೆ ಹಾಡಿದರು. ಮಾದೇಟಿರ ಬೆಳ್ಯಪ್ಪ, ಸಿಂಧೂರ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭ ರಾಘವೇಶ್ವರರು ಗೋ ಮಾತೆ ಸಂರಕ್ಷಣೆಯ ನಿಟ್ಟಿನಲ್ಲಿ ಜನರಿಗೆ ವಂದೇ ಗೋಮಾತಂ ಎಂಬ ಗೋ ರಕ್ಷಾ ಸಂಕಲ್ಪ ಬೋಧಿಸಿದರು.