ಸೋಮವಾರಪೇಟೆ,ಆ.21: ತಾಲೂಕಿನ ಇತಿಹಾಸ ಪ್ರಸಿದ್ದ ಹೊನ್ನಮ್ಮನಕೆರೆ ಸಂಪರ್ಕಿಸುವ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳಿಮಳ್ತೆ ಗ್ರಾಮದ ರಸ್ತೆ ಗುಂಡಿಮಯವಾಗಿದ್ದು, ದುರಸ್ತಿಗೊಳಿಸಲು ಸಂಬಂಧಿಸಿದವರು ವಿಫಲರಾದ ಹಿನ್ನೆಲೆ ರಸ್ತೆಯ ಗುಂಡಿಗಳಲ್ಲಿ ಬಾಳೆಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಜಾತ್ರೋತ್ಸವದಂದು ರಸ್ತೆ ತಡೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಹೊನವಳ್ಳಿ ಗ್ರಾಮದಿಂದ ಸುಳಿಮಳ್ತೆ ಮಾರ್ಗವಾಗಿ ಅಂಬೇಡ್ಕರ್ ನಗರ, ಹೊನ್ನಮ್ಮನ ಕೆರೆಗೆ ತಲುಪುವ ರಸ್ತೆ ಹಾಳಾಗಿದ್ದು, ಮಳೆಗಾಲದಲ್ಲಂತೂ ರಸ್ತೆಯಲ್ಲಿ ಸಂಚರಿಸುವದು ಕಷ್ಟಸಾಧ್ಯ ಎಂದು ಗ್ರಾಮಸ್ಥರು ದೂರಿದರು. ಕೃಷಿ ಉತ್ಪನ್ನಗಳನ್ನು ವಾಹನದಲ್ಲೇ ಸಾಗಿಸಬೇಕು. ಈ ರಸ್ತೆಯಲ್ಲಿ ವಾಹನಗಳನ್ನು ಚಾಲಿಸಿದರೆ, ಒಂದೆ ವರ್ಷದಲ್ಲಿ ಹಾಳಾಗುತ್ತವೆ. ಕಳೆದ 10 ವರ್ಷಗಳ ಹಿಂದೆ ರಸ್ತೆ ಡಾಮರೀಕರಣ ಗೊಂಡಿದ್ದು ಇದುವರೆಗೆ ರಸ್ತೆ ದುರಸ್ತಿಗೊಳಿಸದೆ ಜನಪ್ರತಿನಿಧಿಗಳು ಹಾಗು ಸರ್ಕಾರ ನಮಗೆ ದ್ರೋಹವೆಸಗಿದೆ ಎಂದು ಹೊನವಳ್ಳಿ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಪಿ.ಚಂದ್ರಶೇಖರ್ ದೂರಿದರು.
ಈ ವ್ಯಾಪ್ತಿಯ ಕೃಷಿಕರು ಸರ್ಕಾರಕ್ಕೆ ತೆರಿಗೆ ಕಟ್ಟುತ್ತೇವೆ, ನಾವು ಕಟ್ಟಿದ್ದ ತೆರಿಗೆ ಹಣದಿಂದ ರಸ್ತೆ ಸರಿಪಡಿಸಬೇಕು. ಒಂದು ವಾರದೊಳಗೆ ರಸ್ತೆ ಕಾಮಗಾರಿ ಪ್ರಾರಂಭಿಸದಿದ್ದರೆ ಸೆ.4ರಂದು ದೊಡ್ಡಮಳ್ತೆಯಲ್ಲಿ ನಡೆಯುವ ಹೊನ್ನಮ್ಮ ಕೆರೆ ಜಾತ್ರೋತ್ಸವಕ್ಕೆ ಸುಳಿಮಳ್ತೆ ಗ್ರಾಮ ಮಾರ್ಗವಾಗಿ ತೆರಳುವ ವಾಹನಗಳನ್ನು ತಡೆದು ಪ್ರತಿಭಟಿಸಲಾಗುವುದು ಎಂದು ಗ್ರಾಮದ ಪ್ರಮುಖರಾದ ಎಸ್.ಕೆ. ಸುದೀಪ್, ಎಚ್.ಈ. ಪುಟ್ಟಸ್ವಾಮಿ, ಎಸ್.ಪಿ. ಲಿಂಗರಾಜ್ ಎಚ್ಚರಿಸಿದರು. ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಗ್ರಾಮೀಣ ರಸ್ತೆಗಳು ಹಾಳಾಗಿದ್ದು, ರಸ್ತೆ ಅಭಿವೃದ್ಧಿಗೆ ಸರ್ಕಾರ ಅನುದಾನ ಒದಗಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಅನುದಾನ ಕಲ್ಪಿಸದಿದ್ದರೆ ಪ್ರತಿ ಗ್ರಾಮಗಳ ರಸ್ತೆಗೆ ಬಾಳೆಗಿಡಗಳನ್ನು ನೆಟ್ಟು ಪ್ರತಿಭಟನೆ ಮಾಡುತ್ತೇವೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಬಿ. ದಿವಾಕರ್ ಎಚ್ಚರಿಸಿದರು. ಪ್ರತಿಭಟನೆ ಯಲ್ಲಿ ಗ್ರಾಮದ ಪ್ರಮುಖರಾದ ಎಸ್.ಪಿ.ಪುಟ್ಟರಾಜ್, ಗಿರೀಶ್, ಮತ್ತಿತರರು ಇದ್ದರು.