ಕುಶಾಲನಗರ, ಆ.21 : ಜಿಲ್ಲೆಯಲ್ಲಿ ಭೂಮಿ ಮಾರಾಟ ದಂಧೆಗೆ ಕಡಿವಾಣ ಹಾಕುವದರೊಂದಿಗೆ ಯುವಪೀಳಿಗೆ ವ್ಯವಸಾಯದ ಕಡೆಗೆ ಆಸಕ್ತಿ ಬೆಳೆಸಿಕೊಳ್ಳಬೇಕೆಂದು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಕರೆನೀಡಿದ್ದಾರೆ. ನಂಜರಾಯಪಟ್ಟಣ ಗ್ರಾಮದಲ್ಲಿ ಸ್ಥಳೀಯ ಯೂತ್ ಕ್ಲಬ್ ಮತ್ತು ಕೊಡಗು ಗೌಡ ಯುವ ವೇದಿಕೆ ಆಶ್ರಯದಲ್ಲಿ ಭಾನುವಾರ ನಡೆದ 2ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಒಕ್ಕಲುತನ ರೈತಾಪಿ ವರ್ಗದ ಸಂಸ್ಕøತಿಯ ಪ್ರತೀಕವಾಗಿದೆ. ಭೂಮಿ ಇದ್ದರೆ ಮಾತ್ರ ಒಕ್ಕಲುತನ ಸಾಧ್ಯ ಎಂದ ಬೋಪಯ್ಯ ಅವರು ಹಣದ ಆಸೆಗೆ ಬಲಿಯಾಗಿ ಇದ್ದ ಜಾಗವನ್ನು ಮಾರಿದಲ್ಲಿ ಸಂಸ್ಕøತಿಯೊಂದಿಗೆ ತಮ್ಮತನವನ್ನೂ ಕಳೆದುಕೊಳ್ಳ ಬೇಕಾಗುತ್ತದೆ ಎಂದರು. ಹಿರಿಯರು ಯುವಪೀಳಿಗೆಗೆ ಸಂಸ್ಕøತಿಯ ಅರಿವು ಮೂಡಿಸಬೇಕಾಗಿದೆ ಎಂದರಲ್ಲದೆ ಕೆಸರು ಗದ್ದೆ ಕ್ರೀಡಾ ಕೂಟದಂತಹ ಜಾನಪದ ಕ್ರೀಡೆಯನ್ನು ಸಂಘಟಿಸುವ ಮೂಲಕ ಒಗ್ಗಟ್ಟು ರೂಪಿಸಲು ಸಾಧ್ಯ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಬಿ. ಭಾರತೀಶ್ ಮಾತನಾಡಿ, ಜನಾಂಗದೊಳಗೆ ಒಗ್ಗಟ್ಟು ಮೂಡಿಸಲು ಈ ಬಗೆಯ ಕ್ರೀಡಾ ಕೂಟಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಹೊಲ ಗದ್ದೆಯಲ್ಲಿ ದುಡಿದು ಸುಸ್ತಾಗಿದ್ದ ರೈತಾಪಿ ವರ್ಗಕ್ಕೆ ಮನರಂಜನೆ ಜೊತೆಗೆ ಜೀವನೋತ್ಸಾಹ ತುಂಬುವ ಕೆಲಸಗಳೂ ಇಂತಹ ಕ್ರೀಡೆಯಿಂದ ಸಾಧ್ಯ ಎಂದರು. ನಂಜರಾಯಪಟ್ಟಣದ ಕೋಟುಮಾಡ ಐನ್ಮನೆಯ ಗದ್ದೆಯಲ್ಲಿ ನಡೆದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಪುರುಷರ ವಾಲಿಬಾಲ್ ಪಂದ್ಯಾಟ, ಹಗ್ಗಜಗ್ಗಾಟ, ಮಹಿಳೆಯರ ಥ್ರೋಬಾಲ್ ಪಂದ್ಯಾಟ, ಹಗ್ಗಜಗ್ಗಾಟ ಹಾಗೂ ಗದ್ದೆ ಓಟ ನಡೆಯಿತು.
ನಂತರ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ನಂಜರಾಯಪಟ್ಟಣ ಗೌಡ ಯೂತ್ ಕ್ಲಬ್ ಅಧ್ಯಕ್ಷ ನಡುಮನೆ ಪವನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ, ನಂಜರಾಯಪಟ್ಟಣ ಗೌಡ ಸಮಾಜದ ಅಧ್ಯಕ್ಷ ಕೆದಂಬಾಡಿ ಚೇತನ್, ಗೌಡ ಮಹಿಳಾ ಸಮಾಜದ ಅಧ್ಯಕ್ಷೆ ಕೇಕಡ ಬೋಜಮ್ಮ, ಗ್ರಾ.ಪಂ. ಸದಸ್ಯ ಅಯ್ಯಂಡ್ರ ಲೋಕನಾಥ್, ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಎಂ.ಡಿ. ಕೃಷ್ಣಪ್ಪ ವೇದಿಕೆಯಲ್ಲಿದ್ದರು.