ಕುಶಾಲನಗರ, ಜ 10: ವೀರಾಜಪೇಟೆ ತಾಲೂಕಿನ ದಿಡ್ಡಳ್ಳಿ ಅರಣ್ಯ ಪ್ರದೇಶದಲ್ಲಿ ವಾಸವಿದ್ದು ತೆರವುಗೊಳಿಸಿರುವ ಗಿರಿಜನ ಕುಟುಂಬಗಳಿಗೆ ಪುನರ್‍ವಸತಿ ಕಲ್ಪಿಸುವ ದೃಷ್ಠಿಯಿಂದ ಕೊಡಗು ಜಿಲ್ಲೆಯ ಸೋಮವಾರಪೇಟೆ ಮತ್ತು ವೀರಾಜಪೇಟೆ ತಾಲೂಕುಗಳ ವ್ಯಾಪ್ತಿಯಲ್ಲಿ ಒಟ್ಟು 25 ಎಕರೆ ವಿಸ್ತೀರ್ಣದಲ್ಲಿ 531 ನಿವೇಶನಗಳನ್ನು ಗುರುತಿಸಲಾಗಿದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್.ಸೀತಾರಾಂ ತಿಳಿಸಿದ್ದಾರೆ. ಅವರು ಕುಶಾಲನಗರದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ದಿಡ್ಡಳ್ಳಿ ಮತ್ತಿತರ ಆದಿವಾಸಿ ಮುಖಂಡರುಗಳ ಸಭೆಯಲ್ಲಿ ಮಾಹಿತಿ ನೀಡಿದರು.

ಪ್ರತೀ ನಿವೇಶನಗಳು 30x30 ಅಳತೆಯ ವಿಸ್ತೀರ್ಣದಲ್ಲಿದ್ದು ಈಗಾಗಲೆ ಸದರಿ ಜಾಗಗಳನ್ನು ಸರ್ವೆ ಮಾಡಿಸಿ ನಕ್ಷೆ ಪಡೆಯಲಾಗಿದೆ. ನಕ್ಷೆಯಂತೆ ಸೋಮವಾರಪೇಟೆ ತಾಲೂಕಿನ ಕುಶಾಲನಗರ ಹೋಬಳಿ ಬಸವನಹಳ್ಳಿ ಗ್ರಾಮದ ಸರ್ವೆ ನಂ 4 ಮತ್ತು 5 ರಲ್ಲಿ 6.70 ಎಕರೆ, ಕುಶಾಲನಗರ ಹೋಬಳಿಯ ಕಣಿವೆ ಸಮೀಪ ರಾಂಪುರ ಗ್ರಾಮದಲ್ಲಿ 1/1 ಸರ್ವೆ ನಂ ಜಾಗದಲ್ಲಿ 10 ಎಕರೆ ಮತ್ತು ವೀರಾಜಪೇಟೆ ತಾಲೂಕಿನ ಕೆದಮಳ್ಳೂರು ಗ್ರಾಮದಲ್ಲಿ ಸರ್ವೆ ನಂ 370/1ರಲ್ಲಿ 7.5 ಎಕರೆ ಸೇರಿದಂತೆ ಒಟ್ಟು 24 ಎಕರೆ ಜಾಗದಲ್ಲಿ 531 ಮಂದಿಗೆ ನಿವೇಶನ ನೀಡಲು ಯೋಜನೆ ರೂಪಿಸಲಾಗಿದೆ ಎಂದರು.

ಹೆಚ್ಚುವರಿ ಫಲಾನುಭವಿಗಳಿದ್ದಲ್ಲಿ ಲಾಟರಿ ಮೂಲಕ ನಿವೇಶನ ನೀಡಲು ಕ್ರಮಕೈಗೊಳ್ಳಲಾಗುವದು ಎಂದು ತಿಳಿಸಿದ ಸಚಿವರು, ಈಗಾಗಲೆ ದಿಡ್ಡಳ್ಳಿಯಲ್ಲಿ

(ಮೊದಲ ಪುಟದಿಂದ) ತೆರವುಗೊಳಿಸಿರುವ ಕುಟುಂಬಗಳ ಸದಸ್ಯರಿಂದ ಸಮರ್ಪಕ ದಾಖಲೆಗಳನ್ನು ಕಲೆಹಾಕುವ ಕಾರ್ಯ ಸಾಗಿದೆ. ಇನ್ನು ಮುಂದಿನ 15 ದಿನಗಳ ಒಳಗಾಗಿ ಈ ಕಾರ್ಯ ಪೂರ್ಣ ಗೊಳ್ಳಲಿದೆ ಎಂದು ತಿಳಿಸಿದರು.

ಈ ಸಂದರ್ಭ ಸಭೆಯಲ್ಲಿ ಹಾಜರಿದ್ದ ಸೋಮವಾರಪೇಟೆ ಬುಡಕಟ್ಟು ಕೃಷಿಕರ ಸಂಘದ ತಾಲೂಕು ಸಂಚಾಲಕ ಆರ್.ಕೆ. ಚಂದ್ರ ಮಾತನಾಡಿ, ಸೋಮವಾರಪೇಟೆ ತಾಲೂಕಿನ ವ್ಯಾಪ್ತಿಯಲ್ಲಿ ಸ್ಥಳೀಯ ಆದಿವಾಸಿಗಳಿಗೆ ಆದ್ಯತೆ ನೀಡುವ ಮೂಲಕ ತಮ್ಮಲ್ಲಿರುವ ಸಮಸ್ಯೆಗಳನ್ನು ಪೂರ್ಣಗೊಳಿಸಿದ ನಂತರ ಉಳಿದವರಿಗೆ ಪುನರ್ ವಸತಿ ಕಲ್ಪಿಸುವದು ಸೂಕ್ತ ಎಂದರು. ತಾಲೂಕಿನಲ್ಲಿ ಹಲವು ವರ್ಷಗಳಿಂದ ನಿವೇಶನರಹಿತರಾಗಿ ಆದಿವಾಸಿಗಳು ಜೀವನ ನಡೆಸುತ್ತಿದ್ದು ಇದೀಗ ಹೊಸ ಸಮಸ್ಯೆ ಸೃಷ್ಠಿಯಾಗುವದು ಬೇಡ ಎಂದರು.

ಈ ಮನವಿಗೆ ಪುಷ್ಠಿ ನೀಡಿದ ಸೋಮವಾರಪೇಟೆ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಭಿಮನ್ಯುಕುಮಾರ್, ಸೋಮವಾರಪೇಟೆ ತಾಲೂಕಿನಲ್ಲಿ ವೀರಾಜಪೇಟೆ ತಾಲೂಕಿನ ಆದಿವಾಸಿ ಗಳಿಗೆ ನಿವೇಶನ ಒದಗಿಸಿದಲ್ಲಿ ಸ್ಥಳೀಯರಿಗೆ ಅನ್ಯಾಯವಾದಂತಾಗು ತ್ತದೆ. ಈ ಬಗ್ಗೆ ಸೋಮವಾರಪೇಟೆ ತಾಲೂಕು ಜನಪ್ರತಿನಿಧಿಗಳ ಗಮನಕ್ಕೆ ಯಾವ ವಿಷಯವೂ ಬರದಿರುವ ಬಗ್ಗೆ ಸಚಿವರಿಗೆ ತಿಳಿಸಿದಾಗ, ಇಬ್ಬರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಸೋಮವಾರಪೇಟೆ ತಾಲೂಕಿನ ಬಸವನಹಳ್ಳಿ ಗ್ರಾಮ ಮತ್ತು ರಾಂಪುರ ಗ್ರಾಮದಲ್ಲಿ ಪುನರ್ ವಸತಿ ಕಲ್ಪಿಸಲು ತಮ್ಮ ಸಂಪೂರ್ಣ ವಿರೋಧವಿದೆ ಎಂದು ಅಭಿಮನ್ಯುಕುಮಾರ್ ಮತ್ತು ಆರ್.ಕೆ. ಚಂದ್ರು ಸಭೆಯಲ್ಲಿ ಘೋಷಣೆ ಮಾಡಿದರು.

ಈ ಸಂದರ್ಭ ಸಭೆಯಲ್ಲಿ ಉಪಸ್ಥಿತರಿದ್ದ ವೀರಾಜಪೇಟೆ ಕ್ಷೇತ್ರ ಶಾಸಕÀ ಕೆ.ಜಿ. ಬೋಪಯ್ಯ, ಜಿಲ್ಲೆಯ ಆದಿವಾಸಿಗಳ ಸಮಸ್ಯೆಯನ್ನು ಬಗೆಹರಿಸುವ ಸರಕಾರದ ಯೋಜನೆಗಳಿಗೆ ಎಲ್ಲರೂ ಸಹಕಾರ ನೀಡಬೇಕೆಂದು ಹೇಳಿದರೂ ಇದಕ್ಕೆ ತಮ್ಮ ಸಮ್ಮತಿ ಇರುವದಿಲ್ಲ. ಸೋಮವಾರಪೇಟೆಯಲ್ಲಿ ಹೊಸ ಸಮಸ್ಯೆ ಹುಟ್ಟುಹಾಕುವ ಅವಕಾಶ ಕೂಡದು ಎಂದು ವಿರೋಧ ಮಾತು ಕೇಳಿಬಂತು.

ಈ ನಡುವೆ ದಿಡ್ಡಳ್ಳಿಯ ಹಾಡಿಯ ಮುಖಂಡ ಅಪ್ಪಾಜಿ ಮಾತನಾಡಿ, ತಮ್ಮ ಸಮಸ್ಯೆಗೆ ಸಂಪೂರ್ಣ ಪರಿಹಾರ ಸರಕಾರ ನೀಡಬೇಕಾಗಿದೆ. ಇಲ್ಲದಿದ್ದಲ್ಲಿ ಈ ತಿಂಗಳ 14 ರಂದು ಸಭೆಯಲ್ಲಿ ಚರ್ಚೆ ನಡೆಯಲಿದೆ. ಈಗಾಗಲೆ ದಿಡ್ಡಳ್ಳಿಯಲ್ಲಿ ತೆರವುಗೊಳಿ ಸುವ ಸಂದರ್ಭ ಹಲವು ದಾಖಲಾತಿ ಗಳು ಕಳೆದುಹೋಗಿರು ವದಾಗಿ ತಿಳಿಸಿದ ಅಪ್ಪಾಜಿ ಮುಂದಿನ ದಿನಗ ಳಲ್ಲಿ ಹೋರಾಟದ ಅನಿವಾರ್ಯ ಉಂಟಾಗಲಿದೆ ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಚಾರುಲತಾ ಸೋಮಲ್, ಅರಣ್ಯ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ಡಿಎಫ್‍ಓ ಸೂರ್ಯಸೇನಾ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ, ಜನಪ್ರತಿನಿಧಿಗಳು, ಅಧಿಕಾರಿಗಳು, ದಿಡ್ಡಳ್ಳಿ ನಿರಾಶ್ರಿತರ ಪ್ರತಿನಿಧಿಗಳು ಇದ್ದರು.