ಮಡಿಕೇರಿ, ಜ.12: ಜಿಲ್ಲಾಡಳಿತ ವತಿಯಿಂದ ವಿಶಿಷ್ಟವಾಗಿ ಮತ್ತು ಅರ್ಥಪೂರ್ಣವಾಗಿ ತಾ. 26ರಂದು ಗಣರಾಜ್ಯೋತ್ಸವ ಆಚರಣೆಗೆ ನಿರ್ಧರಿಸಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗಣರಾಜ್ಯೋತ್ಸವ ಆಚರಣೆ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಎಲ್ಲಾ ಇಲಾಖಾ ಅಧಿಕಾರಿಗಳು ಮತ್ತು ಸಂಘ -ಸಂಸ್ಥೆಗಳು ಕೈಜೋಡಿಸಿ ಗಣರಾಜ್ಯೋತ್ಸವ ಯಶಸ್ಸಿಗೆ ಸಹಕರಿಸುವಂತೆ ಕೋರಿದರು.

ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಕಳೆದ ಬಾರಿಯಂತೆ ಅರ್ಥಪೂರ್ಣವಾಗಿ ಹಾಗೂ ವ್ಯವಸ್ಥಿತವಾಗಿ ನಡೆಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಬೆಳಗ್ಗಿನ ಹಾಗೂ ಸಂಜೆಯ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಅದೇ ರೀತಿ ಸ್ತಬ್ಧ ಚಿತ್ರಗಳನ್ನು ಸಹ ವಿಷಯಾಧಾರಿತವಾಗಿ ಆಕರ್ಷಣೀಯವಾಗಿ ನಿರ್ಮಿಸುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ತಾ. 26ರಂದು ಮಡಿಕೇರಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಅಂಗಡಿ ವಾಣಿಜ್ಯ ಸಂಕೀರ್ಣಗಳಲ್ಲಿ ಅಲಂಕಾರ ಮಾಡುವಂತೆ ಸಲಹೆ ಮಾಡಲಾಯಿತು. ಗಣರಾಜ್ಯೋತ್ಸವ ಆಚರಣೆಗೆ ವಿವಿಧ ಉಪ ಸಮಿತಿಗಳನ್ನು ರಚಿಸಿ ಜವಾಬ್ದಾರಿ ಹಂಚಿಕೆ ಮಾಡಲಾಯಿತು. ವಿವಿಧ ಕಾರ್ಯಕ್ರಮದಲ್ಲಿ ನಾನಾ ಇಲಾಖೆಗಳ ಅಧಿಕಾರಿಗಳು ತೊಡಗಿಸಿಕೊಳ್ಳುವಂತೆ ಅವರು ಸಲಹೆ ಮಾಡಿದರು.

ಮೆರವಣಿಗೆಯನ್ನು ನಗರದ ಕೋಟೆ ಆವರಣದಿಂದ ಪ್ರಾರಂಭಿಸಿ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣಕ್ಕೆ ಸಾಗುವಂತೆ ನೋಡಿಕೊಳ್ಳಲು ಮೆರವಣಿಗೆ ಸಮಿತಿಗೆ ಸೂಚಿಸಲಾಯಿತು. ತಿಂಡಿ, ಲಘು ಉಪಾಹಾರ ಜವಾಬ್ದಾರಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮೇಲುಸ್ತುವಾರಿ ಆಹಾರ ಸಮಿತಿಗೆ ವಹಿಸಲಾಯಿತು. ಎಲ್ಲರ ಸಹಕಾರದೊಂದಿಗೆ ಉತ್ತಮ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಸೂಚಿಸಿದರು.

ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಹಾಜರಾಗಬೇಕು. ಸಂಜೆಯ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಉತ್ತಮ ರೀತಿಯಲ್ಲಿ ಆಯೋಜಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ತಿಳಿಸಿದರು.

ಗಣರಾಜ್ಯೋತ್ಸವ ದಿನದಂದು ಕುಡಿಯುವ ನೀರು ಒದಗಿಸುವದು, ಜತೆಗೆ ಸ್ವಚ್ಛತೆ ಸಂಬಂಧ ಅಗತ್ಯವಿರುವ ಕಡೆ ಕಸದ ಬುಟ್ಟಿ ಇಡುವದು ಮತ್ತಿತರ ಕ್ರಮಗಳನ್ನು ಕೈಗೊಳ್ಳುವಂತೆ ಪೌರಾಯುಕ್ತರಿಗೆ ಸೂಚಿಸಿದರು.

ವೇದಿಕೆಯನ್ನು ಲೋಕೋಪಯೋಗಿ ಹಾಗೂ ಜಿ.ಪಂ. ಇಂಜಿನಿಯರ್ ವಿಭಾಗದವರು ಅಚ್ಚುಕಟ್ಟಾಗಿ ನಿರ್ಮಾಣ ಮಾಡುವಂತೆ ನಿರ್ದೇಶನ ನೀಡಲಾಯಿತು.

ಉಪ ಸಮಿತಿಗಳು ತಮಗೆ ವಹಿಸಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಐತಿಹಾಸಿಕ ಸಂದೇಶವನ್ನು ಒಳಗೊಂಡ ಸ್ತಬ್ಧ ಚಿತ್ರಗಳನ್ನು ನಿರ್ಮಾಣ ಮಾಡುವಂತೆ ಎಲ್ಲಾ ಅಭಿವೃದ್ಧಿ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಜಿ.ಪಂ.ಉಪ ಕಾರ್ಯದರ್ಶಿ ವಿಶ್ವನಾಥ ಪೂಜಾರಿ, ಉಪ ವಿಭಾಗಾಧಿಕಾರಿ ಡಾ.ನಂಜುಂಡೇಗೌಡ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಕೆ.ಎ.ದೇವಯ್ಯ, ಪೌರಾಯುಕ್ತೆ ಬಿ.ಶುಭ, ಜಿಲ್ಲಾಸ್ಪತ್ರೆಯ ಶ್ವಾಸಕೋಶ ತಜ್ಞ ಡಾ. ಸದಾಶಿವಪ್ಪ, ಉಪ ಪೊಲೀಸ್ ವರಿಷ್ಠಾಧಿಕಾರಿ ಛಬ್ಬಿ, ಮೇದಪ್ಪ, ಭರತ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಟಿ.ಸ್ವಾಮಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪ ನಿರ್ದೇಶಕ ಚಂದ್ರಕಾಂತ ನಾಯಕ್, ಜಿಲ್ಲಾ ಖಜಾನಾಧಿಕಾರಿ ಸತೀಶ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬೊಮ್ಮೇಗೌಡ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಸಿ.ಜಗನ್ನಾಥ್, ಸ್ಕೌಟ್ಸ್ ಮತ್ತು ಗೈಡ್ಸ್‍ನ ದಮಯಂತಿ ಇತರರು ಇದ್ದರು.