ಸೋಮವಾರಪೇಟೆ, ಜ. 12: ಯುವ ಜನಾಂಗದಲ್ಲಿ ನೈತಿಕತೆ ಮರೆಯಾಗದಿರಲಿ ಎಂಬ ಘೋಷಣೆಯೊಂದಿಗೆ ಮದ್ರಸಾಗಳ ಅಧ್ಯಾಪಕರ ಒಕ್ಕೂಟವಾದ ಸುನ್ನೀ ಜಂಇಯತುಲ್ ಮುಅಲ್ಲಿಮೀನ್‍ನ ಸೋಮವಾರಪೇಟೆ ರೇಂಜ್ ವತಿಯಿಂದ ಮದ್ರಸಾ ಸಮ್ಮೇಳನ ಮತ್ತು ಕಲೋತ್ಸವ ಕಾರ್ಯಕ್ರಮವನ್ನು ತಾ. 14 ಹಾಗೂ 15 ರಂದು ಗರಗಂದೂರಿನಲ್ಲಿ ಆಯೋಜಿಸಲಾಗಿದೆ ಎಂದು ರೇಂಜ್‍ನ ಉಪಾಧ್ಯಕ್ಷ ಕೆ.ಎಂ. ಅಬೂಬಕರ್ ಸಿದ್ದೀಕ್ ಮುಸ್ಲಿಯಾರ್ ಹೇಳಿದರು.

ಇಲ್ಲಿನ ಪತ್ರಿಕಾ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿನ ಯುವ ಜನಾಂಗ ಧಾರ್ಮಿಕ ಪ್ರಜ್ಞೆ ಹಾಗೂ ನೈತಿಕತೆಯ ಕೊರತೆ, ಇನ್ನೊಂದೆಡೆಯಲ್ಲಿ ಹಲವು ದುಶ್ಚಟಗಳಿಗೆ ದಾಸರಾಗಿ ಯುವಜನತೆಯು ದಾರಿ ತಪ್ಪುತ್ತಿದೆ. ಇದರ ಪರಿಣಾಮವಾಗಿ ಸಮಾಜದಲ್ಲಿ ನಡೆಯುತ್ತಿರುವ ಅಪರಾಧ ಸಂಖ್ಯೆ ದಿನದಿಂದ ದಿನಕ್ಕೆ ಏರುಮುಖವಾಗಿ ಸಾಗುತ್ತಿದೆ ಎಂದರು.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಮದ್ರಸಾ ಅಧ್ಯಾಪಕರ ಒಕ್ಕೂಟವು ಯುವ ಜನಾಂಗಕ್ಕೆ ಉತ್ತಮ ಮಾರ್ಗದರ್ಶನ ಮಾಡುವ ಮೂಲಕ ಪ್ರತಿಯೊಬ್ಬರನ್ನು ಸಜ್ಜನರನ್ನಾಗಿಸುವ ಸದುದ್ಧೇಶದಿಂದ ಮದ್ರಸಾ ಸಮ್ಮೇಳನ ಮತ್ತು ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಹೊರತರಲು ಮದ್ರಸಾ ಕಲೋತ್ಸವವನ್ನು ಹಮ್ಮಿಕೊಂಡಿದೆ ಎಂದರು.

ಸಮ್ಮೇಳನ ಎಸ್‍ಆರ್‍ಎಸ್‍ಜೆಎಂನ ಅಧ್ಯಕ್ಷ ರಫೀಖ್ ಸಹದಿಯವರ ನೇತೃತ್ವದಲ್ಲಿ ಮಾದಾಪುರ ಸಮೀಪದ ಗರಗಂದೂರಿನಲ್ಲಿ ನಡೆಯಲಿದೆ. ತಾ. 14 ರಂದು ಅಪರಾಹ್ನ 2 ಗಂಟೆಗೆ ಆರಂಭವಾಗಲಿದ್ದು 3 ಗಂಟೆಗೆ ಎಸ್ಸೆಸ್ಸೆಫ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಅಬೂಬಕರ್ ಸಿದ್ದೀಕ್ ಮೋಂಟುಗೋಳಿಯವರು ‘ಆಶಯ-ವಿನಿಮಯ’ ವಿಚಾರವಾಗಿ, 4.30 ರಿಂದ ಶಿಕ್ಷಣ ತಜ್ಞ ಬಶೀರ್ ಮುಸ್ಲಿಯಾರ್ ಚೆರೂಪ ‘ನಮ್ಮ ಆದರ್ಶ’ ವಿಷಯವಾಗಿ ಉಪನ್ಯಾಸ ನೀಡಲಿದ್ದಾರೆ. ಸಂಜೆ 6.30ಕ್ಕೆ ನಡೆಯಲಿರುವ ಸಾರ್ವಜನಿಕ ಸಮ್ಮೇಳನವನ್ನುದ್ಧೇಶಿಸಿ ಕೇರಳದ ವೆಳ್ಳಯಾಡ್ ಮಹಮ್ಮದ್ ಆಲೀ ಸಖಾಫಿ ಮುಖ್ಯ ಭಾಷಣ ಮಾಡಲಿದ್ದಾರೆ ಎಂದರು.

ತಾ. 15 ರಂದು ಬೆಳಿಗ್ಗೆ 7 ರಿಂದ ರಾತ್ರಿ 10 ರವರೆಗೆ ಮದ್ರಸಾ ಕಲೋತ್ಸವ ನಡೆಯಲಿದ್ದು ರೇಂಜ್ ವ್ಯಾಪ್ತಿಗೊಳಪಡುವ 18 ಮದ್ರಸಗಳ ಸುಮಾರು 300 ವಿದ್ಯಾರ್ಥಿಗಳು ಭಾಷಣ, ಬರಹ, ಹಾಡು, ಸಾಮಾನ್ಯ ಜ್ಞಾನ ಪರೀಕ್ಷೆ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಲಿದ್ದಾರೆ ಎಂದು ಮಾಹಿತಿ ನೀಡಿದರು.

ಸುನ್ನೀ ಶಿಕ್ಷಣ ಮಂಡಳಿಯು ಸುಮಾರು 10 ರಾಷ್ಟ್ರಗಳು ಸೇರಿದಂತೆ ದೇಶದ ಎಲ್ಲಾ ರಾಜ್ಯಗಳಲ್ಲಿ ಸುಮಾರು 25 ಸಾವಿರ ಮದ್ರಸಗಳನ್ನು ಹೊಂದಿದ್ದು ಕನ್ನಡ, ಉರ್ದು, ಇಂಗ್ಲೀಷ್ ಸೇರಿದಂತೆ 7 ಭಾಷೆಗಳಲ್ಲಿ ಮದ್ರಸ ಪಠ್ಯ ಪುಸ್ತಕಗಳನ್ನು ಹೊರತಂದಿದ್ದು, ಈ ಕ್ರಮ ಅತ್ಯಂತ ಹೆಚ್ಚು ಜನಪ್ರಿಯತೆ ಗಳಿಸಿದೆ ಎಂದರು.

ಗೋಷ್ಠಿಯಲ್ಲಿ ಸೋಮವಾರಪೇಟೆ ಜಲಾಲಿಯಾ ಮಸೀದಿ ಸಮಿತಿ ಅಧ್ಯಕ್ಷ ಕೆ.ಎ. ಆದಂ, ಸುನ್ನೀ ಜಂಇಯತುಲ್ ಮುಅಲ್ಲಿಮೀನ್‍ನ ಸೋಮವಾರಪೇಟೆ ರೇಂಜ್‍ನ ಉಪಾಧ್ಯಕ್ಷ ಕರ್ಕಳ್ಳಿಯ ಆಲೀ ಸಖಾಫಿ, ಕಾರ್ಯದರ್ಶಿ ಹೊಸತೋಟದ ಅಬೂಬಕರ್ ಮದನಿ, ಸಹಕಾರ್ಯದರ್ಶಿ ಕೊಡ್ಲಿಪೇಟೆಯ ಅಬ್ದುಲ್ ಅಝೀಜ್ ಸಖಾಫಿ ಉಪಸ್ಥಿತರಿದ್ದರು.