ಮಡಿಕೇರಿ, ಡಿ. 23: ಕೊಡಗಿನ ಮೂಲಜನಾಂಗವಾದ ಕೊಡವರ ಕುಲಶಾಸ್ತ್ರ ಅಧ್ಯಯನಕ್ಕೆ ತಡೆ ಯೊಡ್ಡಿರುವ ಕ್ರಮವನ್ನು ಕೊಡವ ಮಕ್ಕಡ ಕೂಟ ಖಂಡಿಸುತ್ತದೆ ಎಂದು ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ತಿಳಿಸಿದ್ದಾರೆ.
ಪುರಾತನ ಕಾಲದಿಂದಲೂ ಆಚರಿಸಿ ಕೊಂಡು ಬರುತ್ತಿರುವ ಬುಡಕಟ್ಟು ಜನಾಂಗದ ವಿಶಿಷ್ಟ ಸಂಸ್ಕøತಿ, ಆಚಾರ-ವಿಚಾರವೇ ಸಾಕ್ಷಿಯಾಗಿರುವಂತೆ ಕೊಡವರು ಬುಡಕಟ್ಟು ಜನಾಂಗಕ್ಕೆ ಸೇರಿದವ ರಾಗಿದ್ದು ಪುರಾತನ ಕಾಲದಿಂದಲೂ ತಮ್ಮ ಸೂರನ್ನು ಕಟ್ಟಿಕೊಂಡು ಗುಂಪು-ಗುಂಪಾಗಿ ವಾಸಿಸುತ್ತಿದ್ದರು.
ಇಂತಹ ಜನಾಂಗದ ಬಗ್ಗೆ ಕೇಂದ್ರ ಸರಕಾರ ನಿರ್ದೇಶನ ನೀಡಿದ ಹಿನ್ನೆಲೆ ಕೊಡವರನ್ನು ಬುಡಕಟ್ಟು ಜನಾಂಗಕ್ಕೆ ಸೇರಿಸಲು ಸಮಗ್ರ ಕುಲಶಾಸ್ತ್ರ ಅಧ್ಯಯನ ಮಾಡಲು ಸೂಚನೆ ನೀಡಿದಂತೆ ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಇಲಾಖೆಯಡಿ ಕೊಡಗಿನಲ್ಲಿ ಕೊಡವರ ಆಚಾರ-ವಿಚಾರ, ಜೀವನ ಕ್ರಮ, ಆದಾಯದ ಮೂಲದ ಬಗ್ಗೆ ಅಧ್ಯಯನ ಪ್ರಾರಂಭಿಸಲಾಯಿತು.
ಕೊಡವ ಬುಡಕಟ್ಟು ಜನಾಂಗ ದಂತೆ ಇರುವ ಅದೆಷ್ಟೋ ಬುಡಕಟ್ಟು ಜನಾಂಗಕ್ಕೆ ಸೌಲತ್ತುಗಳು ದೊರೆಯುತ್ತಿವೆ. ಆದರೆ ಕುಲಶಾಸ್ತ್ರ ಅಧ್ಯಯನದಿಂದ ಕೊಡವರಿಗೆ ಒಳ್ಳೆಯದಾಗಿ ಬಿಡಬಹುದೆಂಬ ದುರುದ್ದೇಶದಿಂದ ಕೊಡವರು ಯಾವದೇ ಕಾರ್ಯಕ್ಕೆ ಮುಂದಾದರೆ ಹುಟ್ಟಿಕೊಂಡ ಕೊಡವ ವಿರೋಧಿ ಗುಂಪೊಂದು ನಿರಂತರ ತಡೆಯೊಡ್ಡುತ್ತಿದೆ. ಕೊಡವರು ಏನೇ ಮಾಡಿದರೂ ವಿರೋಧಿಸ ಬೇಕೆನ್ನುವದೇ ಇದರ ಉದ್ದೇಶ. ಅಧಿಕಾರ ಹಾಗೂ ಪ್ರಚಾರದ ಆಸೆಯಿಂದ ಇದರಲ್ಲಿ ಕೊಡವರೆನಿಸಿ ಕೊಂಡವರು ಕೂಡ ಕೊಡವ ದ್ವೇಷಿಗಳಾಗಿ ಹೋರಾಟಕ್ಕೆ ನಿಂತಿರುವದು ವಿಷಾದನೀಯ. ಇವರಿಂದ ಕೊಡವ ಜನಾಂಗಕ್ಕೆ ಪ್ರಯೋಜನವಾಗದಿದ್ದರೂ ಕೊಡವರನ್ನು ವಿರೋಧಿಸುವಲ್ಲಿ ಮುಂಚೂಣಿ. ಕೊಡವ ಜನಾಂಗ ದೊಂದಿಗೆ ನಿರಂತರ ನಾಟಕವಾಡಿ ಸಂಪೂರ್ಣ ಬೆಂಬಲದಿಂದಲೇ ಗೆದ್ದು ನಾಯಕರೆನಿಸಿ ಕೊಂಡವರೂ ಕೊಡವರನ್ನು ಮೂಲೆಗುಂಪಾಗಿಸಲು ಹೊರಟು ಒಳ ಕುತಂತ್ರ ನಡೆಸುತ್ತಿದ್ದಾರೆ.
ಸ್ವಾತಂತ್ರ ಹೋರಾಟದಲ್ಲಿ ಹಾಗೂ ದೇಶ ಪ್ರೇಮದಿಂದ ದೇಶ ರಕ್ಷಣೆಗಾಗಿ ಅತೀ ಹೆಚ್ಚು ಯೋಧರನ್ನು ನೀಡಿದವರೇ ಈ ಕೊಡಗಿನ ಕೊಡವ ಮೂಲ ಬುಡಕಟ್ಟು ಜನಾಂಗ. ಇಂತಹಾ ಜನಾಂಗದವರು ಇಲ್ಲಿಯವರಲ್ಲವೆಂದೆಲ್ಲ ಹೇಳಿಕೊಂಡು ಕೊಡವರನ್ನು ದಾರಿತಪ್ಪಿಸುವ ಹಾಗೂ ವಿರೋಧಿಸುವ ಕಾಯಕದಲ್ಲಿ ತೊಡಗಿಸಿ ಕೊಂಡವರೂ ಕೊಡಗಿನಲ್ಲಿ ಹುಟ್ಟಿಕೊಂಡಿದ್ದಾರೆ. ಕೊಡವರಿಗೆ ಬುಡಕಟ್ಟು ಜನಾಂಗೀಯ ಸವಲತ್ತು ದೊರೆತರೆ ಇತರರಿಗೆ ತೊಂದರೆ ಏನು? ಹಾಗಾದರೆ ವಿರೋಧಿಸುವ ಉದ್ದೇಶವೇನು? ಎಂದು ಅವರು ಪ್ರಶ್ನಿಸಿದ್ದಾರೆ.
ಕೊಡವರ ಸಮಗ್ರ ಕುಲಶಾಸ್ತ್ರ ಅಧ್ಯಯನ ಆಗಲೇ ಬೇಕು. ಬುಡಕಟ್ಟು ಜನಾಂಗದ ಸವಲತ್ತು ದೊರೆಯಲೇ ಬೇಕು ಇದಕ್ಕೆ ಎಲ್ಲ ಕೊಡವ ಸಮಾಜ, ಸಂಘ-ಸಂಸ್ಥೆಗಳು, ಅಧಿಕಾರಿಗಳು ಕೆÉೈಜೋಡಿಸಬೇಕಿದೆ ಎಂದು ಕೊಡವ ಮಕ್ಕಡ ಕೂಟದ ಪದಾಧಿಕಾರಿಗಳಾದ ಬಾಳೆಯಡ ಪ್ರತೀಶ್ ಪೂವಯ್ಯ, ಪುತ್ತರಿರ ಕಾಳಯ್ಯ, ಅಮ್ಮಾಟಂಡ ಮೇದಪ್ಪ, ಪುತ್ತರಿರ ಶಿವು ನಂಜಪ್ಪ, ಪೊನ್ನೋಲತಂಡ ವಿನೋದ್, ಮಡ್ಲಂಡ ಮೋನಿಶ್, ಕೇಲೇಟಿರ ದೇವಯ್ಯ, ಪುತ್ತರಿರ ಗಗನ್ ಮಂದಣ್ಣ ಮೂವೆರ ಹರೀಶ್ ಮೂವೆರ ಸರಿತ, ಬಾಳೆಯಡ ದಿವ್ಯ ಮಂದಪ್ಪ, ಉದಿಯಂಡ ಜಯಂತಿ ಹಾಗೂ ಸದಸ್ಯರು ಒತ್ತಾಯಿಸಿದ್ದಾರೆ.