ವೀರಾಜಪೇಟೆ, ಡಿ, 23: ಚೆನ್ನನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿಡ್ಡಳ್ಳಿ ನಿರಾಶ್ರಿತರ ಪ್ರದೇಶಕ್ಕೆ ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರೊಂದಿಗೆ ಭೇಟಿ ನೀಡಿದ ರಾಜ್ಯ ಪರಿಶಿಷ್ಟ ಜಾತಿ-ಪಂಗಡದ ಶಾಸನ ಸಮಿತಿಯ ಅಧ್ಯಕ್ಷ ಶಿವಮೂರ್ತಿ ಅವರು ವೀರಾಜಪೇಟೆಯಲ್ಲಿ ಮಾಧ್ಯಮದವರನ್ನು ಭೇಟಿ ಮಾಡಿ ದಿಡ್ಡಳ್ಳಿ ನಿರಾಶ್ರಿತರಿಗೆ ತುರ್ತು ಪರಿಹಾರ ಒದಗಿಸಲು ಸಮಿತಿ ನಿರ್ಧಾರ ಕೈಗೊಂಡಿರುವದಾಗಿ ತಿಳಿಸಿದರು.

ಸಮೀಕ್ಷೆಯ ಪ್ರಕಾರ ಕೊಡಗಿನಲ್ಲಿ ಸುಮಾರು 667 ಹಾಡಿಗಳಿದ್ದು ಎಲ್ಲಾ ಹಾಡಿಗಳಿಗೂ ಮೂಲ ಸೌಲಭ್ಯ ಕಲ್ಪಿಸಲು ಸಮಿತಿ ಚಿಂತನೆ ನಡೆಸಿದೆ. ದಿಡ್ಡಳ್ಳಿ ನಿರಾಶ್ರಿತರಿಗೂ ಈಗ ತುರ್ತು ಮೂಲ ಸೌಲಭ್ಯಗಳನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ. ಹಂತ ಹಂತವಾಗಿ ಅಗತ್ಯ ದಾಖಲೆಗಳನ್ನು ಹೊಂದಿರುವ ನಿರಾಶ್ರಿಸಿತರಿಗೆ ಅಗತ್ಯ ಭೂಮಿಯನ್ನು ವಿತರಿಸಲಾಗುವದು ಎಂದು ಶಿವಮೂರ್ತಿ ಹೇಳಿದರು.

ಶಿವಮೂರ್ತಿ ಅವರೊಂದಿಗೆ ಸಮಿತಿಯ ಇನ್ನು 7 ಸದಸ್ಯರುಗಳು ದಿಡ್ಡಳ್ಳಿಗೆ ಭೇಟಿ ನೀಡಿ ಪರಿಸ್ಥಿಯನ್ನು ಅವಲೋಕಿಸಿದರು.

ಸಚಿವರಿಗೆ ಸ್ವಾಗತ : ದಿಡ್ಡಳಿಯಿಂದ ಅಪರಾಹ್ನ 1.45ಕ್ಕೆ ವೀರಾಜಪೇಟೆ ಪ್ರವಾಸಿ ಮಂದಿರಕ್ಕೆ ಆಗಮಿಸಿದ ಸಚಿವ ಆಂಜನೇಯ ಅವರನ್ನು ರಾಜ್ಯ ರೇಷ್ಮೆ ಮಂಡಳಿಯ ಅಧ್ಯಕ್ಷ ಟಿ.ಪಿ.ರಮೇಶ್ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸ್ವಾಗತಿಸಿದರು.

ಸಚಿವರೊಂದಿಗೆ ಎಂ.ಎಲ್.ಸಿ. ವೀಣಾ ಅಚ್ಚಯ್ಯ ಆಗಮಿಸಿದ್ದರು. ಜಿಲ್ಲಾಧಿಕಾರಿ ವಿನ್ಸೆಂಟ್ ಡಿಸೋಜ, ತಾಲೂಕು ತಹಶೀಲ್ದಾರ್ ಮಹದೇವ ಸ್ವಾಮಿ, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಚಿತ್ರ ನಟ ಚೇತನ್ ಹಾಜರಿದ್ದರು.

ವೀರಾಜಪೇಟೆ ಪಟ್ಟಣ ಪಂಚಾಯಿತಿಯಲ್ಲಿ 12.45ಕ್ಕೆ ಸಚಿವರಿಂದ ಸಾರ್ವಜನಿಕ ಸಂದರ್ಶನ ಕಾರ್ಯಕ್ರಮವನ್ನು ಮಡಿಕೇರಿಯಲ್ಲಿ ಸಚಿವರ ಸಮ್ಮುಖದಲ್ಲಿ ಅಧಿಕಾರಿಗಳ ತುರ್ತು ಸಭೆ ಇದ್ದುದರಿಂದ ರದ್ದು ಪಡಿಸಲಾಯಿತು. ಸಾರ್ವಜನಿಕರ ಸಚಿವರ ಸಂದರ್ಶನಕ್ಕಾಗಿ ಪಟ್ಟಣ ಪಂಚಾಯಿತಿಯಿಂದ ಕಟ್ಟಡದ ಸಭಾಂಗಣದಲ್ಲಿ ವ್ಯವಸ್ಥೆ ಗೊಳಿಸಲಾಗಿತ್ತು.

ಸಚಿವ ಆಂಜನೇಯ ಅವರು ಸಾರ್ವಜನಿಕರಿಂದ ಅಹವಾಲುಗಳನ್ನು ಪ್ರವಾಸಿ ಮಂದಿರದಲ್ಲೆ ಸ್ವೀಕರಿಸಿ ಮಡಿಕೇರಿಗೆ ತೆರಳಿದರು.