ಹುಣಸೂರು, ಡಿ. 29: ಪೊನ್ನಂಪೇಟೆ ಬಳಿಯ ಕೊಂಗಣ ಹೊಳೆಯ ವ್ಯರ್ಥ ನೀರು ಸಮುದ್ರ ಪಾಲಾಗುವದನ್ನು ತಪ್ಪಿಸಿ ಕೊಡಗು ಹಾಗೂ ಹುಣಸೂರು ತಾಲೂಕಿಗೂ ಅನುಕೂಲವಾಗುವ ಯೋಜನೆ ಬಗ್ಗೆ ಕೊಡಗಿನಲ್ಲಿ ವಿರೋಧ ವ್ಯಕ್ತಪಡಿಸುತ್ತಿರುವದನ್ನು ತಾವು ಗಮನಿಸಿದ್ದು, ವ್ಯರ್ಥವಾಗುವ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಸದುದ್ದೇಶದಿಂದ ಯೋಜನೆ ಬಗ್ಗೆ ಪ್ರಸ್ತಾಪಿಸಿದ್ದೇನೆ. ಇದಕ್ಕೆ ಕೊಡಗಿನ ಜನರು ಸಹಕಾರ ನೀಡಬೇಕೆಂದು ಹುಣಸೂರು ಶಾಸಕ ಎಚ್.ಪಿ. ಮಂಜುನಾಥ್ ಕೋರಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ನೀರಿಗೆ ಕೇವಲ ಚಿಕ್ಕ ಚೆಕ್‍ಡ್ಯಾಂ ಕಟ್ಟಿ, ಸ್ವಾಭಾವಿಕ ವಾಗಿರುವ ಹಳ್ಳದ ಮೂಲಕ ಲಕ್ಷ್ಮಣತೀರ್ಥ ನದಿಗೆ ನೀರು ಹರಿಸಲಾಗುವದು. ಇದರಿಂದ ಕೊಡಗಿನಲ್ಲಿ 17 ಕಿ.ಮೀನಷ್ಟು ಹರಿಯಲಿದ್ದು, ಕೆರೆ, ಕಟ್ಟೆಗಳಿಗೆ, ಕುಡಿಯಲು ಇದೇ ನೀರನ್ನು ಬಳಸಬಹುದಾಗಿದೆ. ಇದರಿಂದ ಪೊನ್ನಂಪೇಟೆ ಭಾಗದ ಜನರಿಗೆ ಹೆಚ್ಚು ಅನುಕೂಲವಾಗಲಿದ್ದು, ಉಳಿದ ನೀರನ್ನು ಮಾತ್ರ ನಾವು ಬಳಸಿಕೊಳ್ಳುತ್ತೇವೆ. ಅಲ್ಲದೆ ನಾಗರಹೊಳೆ ಅರಣ್ಯ ಪ್ರದೇಶದ ವನ್ಯಜೀವಿಗಳಿಗೂ ನೆರವಾಗಲಿದೆ ಎಂದು ಹೇಳಿದರು. ಕೊಡಗಿನ ಒಬ್ಬ ಪ್ರಜೆಗೆ ಅನ್ಯಾಯವಾದರೂ ಈ ಯೋಜನೆಯನ್ನು ವಿರೋಧಿಸುವಲ್ಲಿ ಮೊದಲಿಗ ತಾನು, ಇಲ್ಲಿ ಯಾವದೇ ಮರ ಹನನವಾಗುವದಿಲ್ಲ, ಭೂಮಿ ಮುಳುಗಡೆಯಾಗುವದಿಲ್ಲ, ಎಲ್ಲರ ಧಣಿವನ್ನು ಆರಿಸುವ ಈ ಯೋಜನೆಯಲ್ಲಿ ಎಲ್ಲರೂ ಸದ್ಬಳಕೆ ಮಾಡಿಕೊಳ್ಳೋಣ, ಇದರ ಸಾಧಕ-ಬಾಧಕ ಕುರಿತು ಎಲ್ಲ ಶಾಸಕರು, ಸಂಸದ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸೋಣ. ನಮ್ಮೆಲ್ಲರ ಒಳಿತಿಗಾಗಿ ಈ ಯೋಜನೆಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.