ಚೆಟ್ಟಳ್ಳಿ, ಡಿ. 30: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಮೂರ್ನಾಡು ಕೊಡವ ಸಮಾಜ ಸಂಯುಕ್ತ ಆಶ್ರಯದಲ್ಲಿ ಕೊಡವ ಸಮಾಜದಲ್ಲಿ ಆಟ್ ಪಾಟ್ ಸಮಾರೋಪ ಸಮಾರಂಭ ನಡೆಯಿತು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮೂರ್ನಾಡು ಕೊಡವ ಸಮಾಜದ ಮಾಜಿ ಅಧ್ಯಕ್ಷ, ಮೂರ್ನಾಡು ಜೂನಿಯರ್ ಕಾಲೇಜು ವಿದ್ಯಾಸಂಸ್ಥೆಯ ಮಾಜಿ ಅಧ್ಯಕ್ಷ ಅವರೇಮಾದಂಡ ಮಂದಣ್ಣ ದೀಪ ಬೆಳಗುವದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಆಚಾರ ವಿಚಾರವನ್ನು ತಿಳಿದ ಹಿರಿಯರು ಮುಂದೆ ಬಂದು ಯುವ ಪೀಳಿಗೆಗೆ ಕಲಿಸಬೇಕಿದೆ, ಪ್ರತಿಯೊಬ್ಬ ಕೊಡವರು ಗದ್ದೆಯನ್ನು ಹೊಂದಿದ್ದು ಕಾಫಿಗೆ ಬೆಲೆ ಬಂದಕೂಡಲೇ ಕೆಲವರು ಗದ್ದೆಯನ್ನು ತಿರುಗಿಯೂ ನೋಡದೆ ಹಾಳುಗೆಡವಿ ಅಂಗಡಿಯಿಂದ ಅಕ್ಕಿ ಖರೀದಿಸುವ ಪರಿಸ್ಥಿತಿಯಿದ್ದು, ಹುತ್ತರಿ ಹಬ್ಬದಲ್ಲಿ ಕದಿರನ್ನು ಹೂಕುಂಡ ಅಥವಾ ಇನ್ಯಾರದೋ ಗದ್ದೆಯಿಂದ ಕದಿರನ್ನು ತಂದು ಹುತ್ತರಿ ಆಚರಿಸುವ ಪರಿಸ್ಥಿತಿಯಿದೆ ಎಂದು ವಿಷಾದಿಸಿದರು.
ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಮಾತನಾಡಿ ಕೊಡಗಿನಲ್ಲಿ ಎಲ್ಲಾ ಕೊಡವ ಸಮಾಜಗಳು ಹೆಚ್ಚಿನ ಮುತುವರ್ಜಿ ವಹಿಸಿ ಕೊಡವ ಆಟ್ ಪಾಟ್ ತರಬೇತಿಯನ್ನು ಕಲಿಸುವಂತಾಗಬೇಕೆಂದರು. ಒಂದೊಂದು ಊರಿನಲ್ಲೂ ಒಂದೊಂದು ತರಹದ ಆಟ್ ಪಾಟ್ ಸಂಸ್ಕøತಿ ಇರುತ್ತದೆ.
ಮೂರ್ನಾಡ್ ಕೊಡವ ಸಮಾಜದ ವತಿಯಿಂದ ಉಮ್ಮತಾಟ್, ಬೊಳಕಾಟ್, ಕತ್ತಿಯಾಟ್ ಪ್ರದರ್ಶನ ಏರ್ಪಡಿಸಲಾಗಿ ಕೋಟೆರ ರಾಣಿ ಮುತ್ತಣ್ಣ, ಅನ್ನಚಂಡ ಸಾಕ್ಷಿ ಕಾವೇರಮ್ಮ, ಬಡುವಂಡ ಸೀತಾದೇವಿ ಕಾರ್ಯಪ್ಪ ಅವರು ಕೊಡವ ಹಾಡನ್ನು ಹಾಡಿದರು.
ಮುಖ್ಯ ಅಥಿತಿಗಳಾಗಿ ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷ ಪಳಂಗಂಡ ಗಣೇಶ್, ಉಪಾಧ್ಯಕ್ಷ ನಂದೇಟಿರ ದೇವಯ್ಯ, ಗೌರವ ಕಾರ್ಯದರ್ಶಿ ಬಡುವಂಡ ಚಂಗಪ್ಪ, ಖಜಾಂಚಿ ಬಾಚೆಟ್ಟಿರ ಸುಬ್ಬಯ್ಯ, ಮಂಡೇಪಂಡ ಶಶಿ ಮುತ್ತಪ್ಪ, ಕುಂಜಿಲಂಡ ಗ್ರೇಸಿ ಪೂಣಚ್ಚ, ಅವರೆ ಮಾದಂಡ ಪ್ರಿಯಾನಾ ಸುಬ್ಬಯ್ಯ, ಪಾಂಡಂಡ ಸ್ವಾತಿ ಗಣಪತಿ ವೇದಿಕೆಯಲ್ಲಿ ಆಸೀನರಾಗಿದ್ದರು.
ಮಂಡೇಪಂಡ ಶಶಿ ಪ್ರಾರ್ಥಿಸಿ, ಪಳಂಗಂಡ ಗಣೇಶ್ ಸ್ವಾಗತಿಸಿ, ಕಂಬೀರಂಡ ಗೌತಮ್ ವಂದಿಸಿದರು.