ಸುಂಟಿಕೊಪ್ಪ, ಅ. 2: ಕುಡಿಯುವ ನೀರು, ಚರಂಡಿ, ಸ್ವಚ್ಛತೆ ವಸತಿ ನಿರ್ಮಿಸಿಕೊಡಿ ಎಂದು ಹರದೂರು ಗ್ರಾಮ ಪಂಚಾಯಿತಿ 2015-16ನೇ ಜಮಾಬಂದಿ ಹಾಗೂ ವಿಶೇಷ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಹಕ್ಕೊತ್ತಾಯ ಮಂಡಿಸಿದರು.

ಹರದೂರು ಗ್ರಾಮ ಪಂಚಾಯಿತಿಯ ಜಮಾಬಂದಿ ವಿಶೇಷ ಗ್ರಾಮಸಭೆ ಗ್ರಾ.ಪಂ. ಅಧ್ಯಕ್ಷೆ ಕೆ.ಸಿ. ಶೈಲಜಾ ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಪಮಚಾಯಿತಿ ಸಭಾಂಗಣದಲ್ಲಿ ನಡೆಯಿತು.

ಗರಗಂದೂರಿನಲ್ಲಿ ಕಳೆದ 4 ತಿಂಗಳಿನಿಂದ ಕುಡಿಯುವ ನೀರು ಸಿಗುತ್ತಿಲ್ಲ. ಊರಿನಲ್ಲಿ ರಾಜ್ಯ ರಾಜಧಾನಿಯವರೆಗೆ ನೀರು ಪೂರೈಸುವ ಜಲಮೂಲ ಈ ಗ್ರಾಮದಲ್ಲಿಯೇ ಹರಿಯುತ್ತಿದ್ದರೂ ಇಲ್ಲಿನ ಜನತೆಗೆ ನೀರು ಸಿಗುತ್ತಿಲ್ಲ. ಪೈಪ್ ಒಡೆದು ಹೋಗಿದೆ ಎಂದು ಪಂಚಾಯಿತಿಯವರು ಸಬೂಬು ಹೇಳುತ್ತಿದ್ದಾರೆ. ನಮಗೆ ಕುಡಿಯುವ ನೀರು ಕೊಡಿ ಅಧ್ಯಕ್ಷರೇ ಎಂದು ಗ್ರಾಮಸ್ಥರಾದ ಪದ್ಮಮ್ಮ ಅವಲತ್ತುಕೊಂಡರು.

ಚರಂಡಿ ನೀರು ಕಲುಷಿತಗೊಂಡು ಎಲ್ಲೆಡೆ ಹರಿದಾಡುತ್ತಿದೆ. ಶುಚಿಗೊಳಿಸುವ ಕೆಲಸ ಮಾಡಬೇಕು ಊರುಡುವೆ ಪೈಸಾರಿಯಲ್ಲಿ ಮನೆ ನಿರ್ಮಿಸಿಕೊಂಡವರಿಗೆ ವಿದ್ಯುತ್ ಸೌಲಭ್ಯಕ್ಕೆ ಪರವಾನಗಿ ನೀಡಲು ಪಂಚಾಯಿತಿಯವರು ಮೀನಾಮೇಷ ಎಣಿಸುವದು ಸರಿಯಲ್ಲ ಎಂದು ಮುಸ್ತಾಫ, ಕೀಚನ ಲಕ್ಷ್ಮಣ ಪ್ರಸ್ತಾಪಿಸಿದರು.

ಮಲ್ಲಿಕಾರ್ಜುನ ಕಾಲೋನಿಯಲ್ಲಿ ಚರಂಡಿಯ ಕಲುಷಿತ ತ್ಯಾಜ್ಯದಿಂದ ಈ ವಿಭಾಗದ ಮನೆಯವರು ನರಕಯಾತನೆ ಅನುಭವಿಸುವಂತಾಗಿದೆ ಎಂದು ಮುಸ್ತಾಫ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮ ಪಂಚಾಯಿತಿಯ ನೀರು ಪೋಲಾಗುತ್ತಿದೆ. ನೀರು ಪೋಲಾಗುತ್ತಿರುವ ಬಗ್ಗೆ ನಿಗಾವಹಿಸುವದು ಸೂಕ್ತ ಎಂದು ಸುರೇಶ್ ಸಲಹೆ ನೀಡಿದರು. ಸ್ವಚ್ಛತೆಗೆ ಆದ್ಯತೆ ನೀಡುವ ಗ್ರಾಮ ಪಂಚಾಯಿತಿಯವರು ಕಾಡು ಕಡಿದ ಬಿಲ್ ಸರಿಯಾಗಿ ನೀಡಲಿಲ್ಲ ಎಂದು ಗ್ರಾಮಸ್ಥ ಲವ ಆರೋಪಿಸಿದರು.

ಊರುಡುವೆ ಪೈಸಾರಿಯಲ್ಲಿ ಮನೆ ಕಟ್ಟಿದವರಿಗೆ ಪಂಚಾಯಿತಿಯಿಂದ ಪರವಾನಗಿ ನೀಡುತ್ತಿಲ್ಲ. ಇದರಿಂದ ಅವರಿಗೆ ವಿದ್ಯುತ್ ಸೌಲಭ್ಯ ಸಿಗುತ್ತಿಲ್ಲ. ಬದುಕಲು ಅವಕಾಶ ಕೊಡಿ ಎಂದು ಗರಗಂದೂರಿನ ಕೀಚನ ಎಂ. ಲಕ್ಷ್ಮಣ ಹೇಳಿದರು.

ಅಧ್ಯಕ್ಷೆ ಕೆ.ಸಿ. ಶೈಲಜಾ ಅವರು ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸಿ ಸರಕಾರದ ಕಾನೂನು ಅನುಸಾರ ಕೆಲಸ ಮಾಡಬೇಕಾಗಿದೆ. ಕುಡಿಯುವ ನೀರು, ಚರಂಡಿ ದುರಸ್ತಿ ಊರುಡುವೆ ಜಾಗದಲ್ಲಿ ಮನೆ ನಿರ್ಮಿಸಿದವರಿಗೆ ಸರಕಾರದ ಆದೇಶದಂತೆ ಸ್ಪಂದಿಸುವದಾಗಿ ಹೇಳಿದರು.

ಗರಗಂದೂರಿನ ಕೀಚನ ಲಕ್ಷ್ಮಣ ಮಾತನಾಡಿ ರೂ. 3.40 ಲಕ್ಷ ವೆಚ್ಚದಲ್ಲಿ ರೈತರಿಗೆ ನಿರ್ಮಿಸಲಾದ ಗೋದಾಮು ಅನಾಥವಾಗಿದೆ ಇದರಿಂದ ಯಾರಿಗೂ ಪ್ರಯೋಜನವಾಗಿಲ್ಲ ದನದ ಕೊಟ್ಟಿಗೆಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಸಹಾಯಧನ ನೀಡಲಾಗಿದೆ ಎಂದು ಆರೋಪಿಸಿದರು.

ಸಭೆಯಲ್ಲಿ ಹರದೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕುಸುಮಾವತಿ ತಾಲೂಕು ಪಂಚಾಯಿತಿ ಸದಸ್ಯೆ ಹೆಚ್.ಡಿ. ಮಣಿ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಗೌತಮ್ ಶಿವಪ್ಪ, ಎಂ.ಪಿ. ದೇವಪ್ಪ, ಕಾವೇರಿ, ಗಂಗೆ, ಪಿ. ಸುಮೊ, ಎಂ. ಫೌಸಿಯ, ಪಿಡಿಓ ರಾಜಶೇಖರ್, ನಿರ್ಗಮಿತ ಪಿಡಿಓ ಬಾಲಕೃಷ್ಣ ರೈ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.