ಗೋಣಿಕೊಪ್ಪಲು, ನ.17: ಕಾನೂರು ಗ್ರಾಮ ಪಂಚಾಯಿತಿಗೆ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ 2ಎ ಪ್ರವರ್ಗ ಅಭ್ಯರ್ಥಿ ಆಯ್ಕೆ ಕಡ್ಡಾಯವಾಗಿದ್ದರೂ ನಿಯಮ ಬಾಹಿರವಾಗಿ ಸಾಮಾನ್ಯ ವರ್ಗದವರನ್ನು ಆಯ್ಕೆ ಮಾಡಿ ಕಾನೂನನ್ನು ಅಲ್ಲಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಣಪತಿ ಉಲ್ಲಂಘಿಸಿದ್ದಾರೆ ಎಂದು ಕಾನೂರು ಲಕ್ಕುಂದ ವಾರ್ಡ್ ಸದಸ್ಯ ಕಾಡ್ಯಮಾಡ ಬೋಪಣ್ಣ ಆರೋಪಿಸಿದ್ದಾರೆ.

ಈ ಬಗ್ಗೆ ವೀರಾಜಪೇಟೆ ತಾ.ಪಂ.ಕಾರ್ಯನಿರ್ವಹಣಾಧಿಕಾರಿಗಳು ತಾ.4-10-2016ರಂದು ನಿಯಮ ಬಾಹಿರ ಆಯ್ಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಪಿಡಿಓಗೆ ಪತ್ರ ಬರೆದಿದ್ದರೂ,

ಮತ್ತೆ ಉದ್ಧಟತನದ ವರ್ತನೆ ತೋರಿರುವದಾಗಿ ಬೋಪಣ್ಣ ಆರೋಪಿಸಿದ್ದಾರೆ.

ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದ ನೇಮಕಾತಿಯಲ್ಲಿ ಉಲ್ಲೇಖದ ಪತ್ರ(2) ರನ್ವಯ ಸರ್ಕಾರದ ಸುತ್ತೋಲೆಯನ್ನು ಉಲ್ಲಂಘಿಸಿ ನಿಯಮಬಾಹಿರವಾಗಿ ನೇಮಕಾತಿ ಮಾಡಿಕೊಂಡು ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಿದ್ದ ಗ್ರಾಮ ಪಂಚಾಯಿತಿಯ ಕ್ರಮ ನಿಯಮಬಾಹಿರವೆಂದು ತಾ.ಪಂ.ಇ ಓ ನೇಮಕಾತಿ ಅನುಮೋದನೆ ಕೋರಿದ ಕಡತವನ್ನು ಕಾನೂರು ಗ್ರಾ.ಪಂ. ಗೆ ಹಿಂತಿರುಗಿಸಿದ್ದಾರೆ.

ಯಾವದೇ ಪಂಚಾಯಿತಿ ಸಿಬ್ಬಂದಿ ನೇಮಕಾತಿಗೆ ಕೊಡಗು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಪೂರ್ವಾನುಮೋದನೆ ಕಡ್ಡಾಯ. ಪೂರ್ವಾನುಮತಿ ಪಡೆಯದೆ ನೇಮಕಾತಿ ಮಾಡಿಕೊಂಡಿರುವ ಸಂಬಂಧಿಸಿದ ಗ್ರಾ.ಪಂ.ನ ಪಿಡಿಓ, ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‍ರಾಜ್ ಅಧಿನಿಯಮ 2015ರ ಪ್ರಕರಣ 48(5) ರನ್ವಯ ಹೊಣೆಗಾರರಾಗಿದ್ದು ಆಯ್ಕೆಯನ್ನು ತತ್‍ಕ್ಷಣದಿಂದಲೇ ಜಾರಿಗೆ ಬರುವಂತೆ ರದ್ಧುಪಡಿಸಿ, ಕಾನೂನಿನಂತೆ ನೇಮಕ ಮಾಡಲು ತಾ.4 ರಂದೆ ಸೂಚನೆ ನೀಡಲಾಗಿದ್ದರೂ ಪಿಡಿಓ ಹಾಗೂ ಅಧ್ಯಕ್ಷರು ಡಾಟಾ ಎಂಟ್ರಿ ಆಪರೇಟರ್ ಅನ್ನು ಮತ್ತೆ ಮುಂದುವರೆಸಿದ್ದಾರೆ ಎಂದು ಆರೋಪ ವ್ಯಕ್ತವಾಗಿದೆ.

ಅಧ್ಯಕ್ಷರು ಹಾಗೂ ಕೆಲವು ಸದಸ್ಯರು ಶಾಮೀಲಾಗಿ ದೇವಸ್ಥಾನ ತಡೆಗೋಡೆಗೆ ಅನುಮತಿ ಇಲ್ಲದಿದ್ದಾಗ್ಯೂ ಉದ್ಯೋಗಖಾತ್ರಿ ಹಣವನ್ನು ಬಳಸಿಕೊಳ್ಳಲು ತೀರ್ಮಾನಿಸಿ, ಅಂತಿಮವಾಗಿ ಪಂಚಾಯಿತಿ ಹಣವನ್ನು ದುರುಪಯೋಗಮಾಡಿಕೊಂಡಿದ್ದಾರೆ. ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ಯಾವದೇ ಪ್ರಸ್ತಾಪ ಮಾಡದೆ, ಅನುಮೋದನೆ ಪಡೆಯದೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷರು ಹಾಗೂ ಕೋತೂರುವಿನ ಓರ್ವ ಸದಸ್ಯರು ಪಂಚಾಯಿತಿ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ.

ಕಾನೂರು ಗ್ರಾ.ಪಂ.ಯಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ತಾ.ಪಂ.ಕಾರ್ಯನಿರ್ವಹಣಾಧಿಕಾರಿಗಳು, ಜಿ.ಪಂ.ಸಿಇಓ ಅವರುಗಳು ಕೂಡಲೇ ತನಿಖೆಗೆ ಒಳಪಡಿಸಿ ಕ್ರಮ ಜರುಗಿಸದಿದ್ದಲ್ಲಿ ಪಂಚಾಯತ್ ರಾಜ್ ಇಲಾಖೆಗೆ ಹಾಗೂ ಉಸ್ತುವಾರಿ ಮಂತ್ರಿಗಳಿಗೆ ದೂರು ನೀಡಲಾಗುವದು ಎಂದು ಬೋಪಣ್ಣ ತಿಳಿಸಿದ್ದಾರೆ.