ಸಿದ್ದಾಪುರ, ನ. 17: ಸಮೀಪದ ನೆಲ್ಯಹುದಿಕೇರಿಯ ಮುಖ್ಯ ರಸ್ತೆ ಬದಿಯಲ್ಲಿ ಅವೈಜ್ಞಾನಿಕ ಕಸ ವಿಲೇವಾರಿಯಿಂದ ಸಾರ್ವಜನಿಕರು ನಡೆದಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಹಿನ್ನೆಲೆಯಲ್ಲಿ ಗ್ರಾ.ಪಂ. ವಿರುದ್ಧ ಸಿ.ಪಿ.ಐ (ಎಂ) ಪ್ರತಿಭಟನೆ ನಡೆಸಿತು.

ನೆಲ್ಯಹುದಿಕೇರಿಯ ಮೀನು ಮಾರುಕಟ್ಟೆ ಸಮೀಪ ಕಸ ಸುರಿಯುತ್ತಿದ್ದ ಜಾಗದಲ್ಲಿ ಬಟ್ಟೆಯಿಂದ ಮೂಗು ಮುಚ್ಚಿಕೊಂಡು ಪ್ರತಿಭಟನೆ ಮಾಡಿದ ಪ್ರತಿಭಟನಾಕಾರರು ಗ್ರಾ.ಪಂ. ವಿರುದ್ಧ ಘೋಷಣೆ ಕೂಗಿದರು. ಕಾರ್ಮಿಕ ಮುಖಂಡ ಎನ್.ಡಿ ಕುಟ್ಟಪ್ಪ ಮಾತನಾಡಿ, ಗ್ರಾಮದಲ್ಲಿ ಅಶುಚಿತ್ವ ತಾಂಡವವಾಡುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಗ್ರಾ.ಪಂ. ವೈಜ್ಞಾನಿಕ ಕಸ ವಿಲೇವಾರಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ತದನಂತರ ಗ್ರಾ.ಪಂ. ಅಧ್ಯಕ್ಷೆ ಪದ್ಮಾವತಿ, ಉಪಾಧ್ಯಕ್ಷೆ ಸಫಿಯಾರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭ ಪಕ್ಷದ ಪ್ರಮುಖರಾದ ಜೋಸ್, ಉದಯ್ ಸೇರಿದಂತೆ ಇನ್ನಿತರರು ಇದ್ದರು.