ಮೂರ್ನಾಡು, ನ. 24: ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ 2016-17ನೇ ಸಾಲಿನ ಮಹಿಳಾ ಗ್ರಾಮಸಭೆ ಹಾಗೂ ವಿಶೇಷ ಗ್ರಾಮಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಲ್ಲುಮುಟ್ಲು ಜಮುನ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಮಹಿಳಾ ಗ್ರಾಮಸಭೆಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮೋಹನ್ ಪ್ರಭು ಆಗಮಿಸಿ ಮಾತನಾಡಿ, ಮಹಿಳೆ ಮತ್ತು ಮಕ್ಕಳ ರಕ್ಷಣೆಗೆ ವಿಶೇಷ ಕಾನೂನು ವ್ಯವಸ್ಥೆಗಳಿವೆ. ಅಂತಹ ಕಾನೂನುಗಳ ಅರಿವು ಮೂಡಿಸಿಕೊಳ್ಳುವದು ನಮ್ಮೆಲ್ಲರ ಕರ್ತವ್ಯ. ಸಂಕಷ್ಟಗಳು ಎದುರಾದಾಗ ಕಾನೂನಿನ ನೆರವು ಅಗತ್ಯ ಆಗ ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಮಡಿಕೇರಿ ವಕೀಲೆ ಮೀನಾಕುಮಾರಿ ಮಾತನಾಡಿ, ಕಾನೂನು ಎಂಬದು ಸಾಗರ ಇದ್ದಂತೆ. ಪ್ರತಿಯೊಂದು ಕಾನೂನುಗಳನ್ನು ನಮಗೆ ತಿಳಿದುಕೊಳ್ಳಲು ಸಾಧ್ಯವಿಲ್ಲ. ಜೀವನದಲ್ಲಿ ನಮಗೆ ಉಪಯೋಗ ವಾಗುವಂತಹ ಕಾನೂನುಗಳ ಕುರಿತು ಅರಿವು ಮೂಡಿಸಿಕೊಳ್ಳಬೇಕು. ಮಹಿಳೆಯರಿಗೆ ವ್ಯಕ್ತಿತ್ವ ವಿಕಾಸನ ಗೊಳಿಸಿಕೊಳ್ಳಲು ಅನೇಕ ಕಾನೂನುಗಳಿವೆ ಅವುಗಳನ್ನು ದುರುಪಯೋಗಪಡಿಸಿಕೊಳ್ಳದೆ ಅದನ್ನರಿತುಕೊಂಡು ನ್ಯಾಯವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿ ಮಹಿಳೆಯರು ಮತ್ತು ಮಕ್ಕಳು ತಮ್ಮ ಮೇಲೆ ದೌರ್ಜನ್ಯವಾಗದಂತೆ ಮೊದಲೇ ಮುಂಜಾಗ್ರತೆ ವಹಿಸಿಕೊಳ್ಳುವದು ಉತ್ತಮ ಎಂದು ಕರೆ ನೀಡಿದರು.

ಸಭೆಯಲ್ಲಿ ಅಂಗನವಾಡಿ ಕೇಂದ್ರ ಮೇಲ್ವಿಚಾರಕಿ ಸವಿತ, ತಾಲೂಕು ಪಂಚಾಯಿತಿ ಸದಸ್ಯೆ ಶಶಿ ಪ್ರಕಾಶ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪವಿತ್ರ ಕುಂಞಪ್ಪ, ಪಿಡಿಓ ಲೋಕೇಶ್, ಸದಸ್ಯರು ಹಾಜರಿದ್ದರು.

ಬಳಿಕ ನಡೆದ ವಿಶೇಷ ಗ್ರಾಮ ಸಭೆಯಲ್ಲಿ ವಸತಿ ಯೋಜನೆಯಡಿ ಫಲಾನುಭವಿಗಳ ಆಯ್ಕೆಗೆ ಅರ್ಜಿ ಸ್ವೀಕರಿಸಲಾಯಿತು.