ಸೋಮವಾರಪೇಟೆ, ಜು. 25: ಕಾಂಗ್ರೆಸ್ ಮುಕ್ತ ಕೊಡಗು ಮಾಡುವದಾಗಿ ಜಿಲ್ಲೆಯ ಶಾಸಕದ್ವ ಯರು ಪದೇ ಪದೇ ಹೇಳಿಕೆ ನೀಡು ತ್ತಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿಯ ಈರ್ವರೂ ಸೋಲನುಭವಿ ಸಲಿದ್ದಾರೆ. ಕಾಂಗ್ರೆಸ್ ಮುಕ್ತ ಕೊಡಗು ಶಾಸಕ ರಂಜನ್ ಹಾಗೂ ಕೆ.ಜಿ. ಬೋಪಯ್ಯ ಅವರ ಹಗಲುಗನಸಾಗಿದೆ ಎಂದು ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಪ್ರತಿಕ್ರಿಯಿಸಿದೆ.

ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬ್ಲಾಕ್ ಅಧ್ಯಕ್ಷ ಕೆ.ಎಂ. ಲೋಕೇಶ್, ಜಿಲ್ಲೆಯ 100 ಗ್ರಾಮ ಪಂಚಾಯಿತಿಗಳ ಪೈಕಿ 50ಕ್ಕೂ ಅಧಿಕ ಪಂಚಾಯಿತಿಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಜಿ.ಪಂ. ಹಾಗೂ ತಾ.ಪಂ. ಚುನಾವಣೆಯಲ್ಲೂ ಮತಗಳಿಕೆಯ ಪ್ರಮಾಣ ಹೆಚ್ಚಿದೆ. ಕೆಲವೊಂದು ಕ್ಷೇತ್ರದಲ್ಲಿ ಅತೀ ಕಡಿಮೆ ಅಂತರದಲ್ಲಿ ಸೋಲು ಅನುಭವಿಸಿ ದ್ದೇವೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಬಲಿಷ್ಠ ವಾಗಿದ್ದು, ಮುಂದಿನ ಚುನಾವಣೆಯಲ್ಲಿ ಈಗಿರುವ ಈರ್ವರು ಶಾಸಕರುಗಳು ಸೋಲಲಿದ್ದು, ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಹೇಳಿದರು.

ಬಿಜೆಪಿ ಪಕ್ಷದವರು ಸಾವಿನ ಮನೆಯಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಗಣಪತಿ ಆತ್ಮಹತ್ಯೆ, ಟಿಪ್ಪು ಜಯಂತಿ ಸಂದರ್ಭ ಮಾತ್ರ ಬೀದಿಗಿಳಿದ ನಾಯಕರು ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ತಟಸ್ಥರಾಗಿದ್ದಾರೆ. ಸಮಸ್ಯೆಯ ಬಗ್ಗೆ ಶಾಸಕರುಗಳು ವಿಧಾನ ಸಭೆಯಲ್ಲಿ ಒಂದೇ ಒಂದು ಪ್ರಶ್ನೆಯನ್ನೂ ಕೇಳಿಲ್ಲ. ಆತ್ಮಹತ್ಯೆ ಮಾಡಿಕೊಂಡ ತಾಲೂಕಿನ ಈರ್ವರು ರೈತರಿಗೆ ಪರಿಹಾರ ಕೊಡಿಸಲು ಕಿಂಚಿತ್ತೂ ಪ್ರಯತ್ನ ಮಾಡಿಲ್ಲ ಎಂದು ದೂರಿದರು. ಸಣ್ಣಪುಟ್ಟ ಘಟನೆಗಳನ್ನೇ ದೊಡ್ಡದು ಮಾಡಿ ಕೋಮು ಭಾವನೆ ಕೆರಳಿಸಿ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ ಎಂದು ದೂರಿದರು.

ಉಸ್ತುವಾರಿ ಸಚಿವರು ಹಾಗೂ ಶಾಸಕರಿಂದ ಹಾರಂಗಿ ಜಲಾಶಯಕ್ಕೆ ಬಾಗಿನ ಅರ್ಪಣೆ ಸಂದರ್ಭ ಬಿಜೆಪಿ ಕಾರ್ಯಕರ್ತರು ಪಕ್ಷದ ಬಾವುಟ ಹಿಡಿದು ಬಿಜೆಪಿಗೆ ಜೈಕಾರ ಹಾಕಿದ್ದಾರೆ. ಯಾವ ಸಮಯದಲ್ಲಿ ಪಕ್ಷದ ಬಾವುಟ ಹಿಡಿಯಬೇಕು, ಜೈಕಾರ ಹಾಕಬೇಕು ಎಂಬ ಪರಿಜ್ಞಾನವೂ ಇವರಿಗಿಲ್ಲ ಎಂದು ಲೋಕೇಶ್ ಟೀಕಿಸಿದರು. ಉತ್ತರ ಪ್ರದೇಶದಲ್ಲಿ ಬಿಜೆಪಿಯವರು ದಲಿತರು ಹಾಗೂ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಈ ಬಗ್ಗೆ ಬಿಜೆಪಿಗರು ಪ್ರತಿಕ್ರಿಯಿಸಲಿ ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಮುಕ್ತ ಮಾಡುವ ಹೇಳಿಕೆ ನೀಡುತ್ತಿರುವ ಶಾಸಕರು ಬಡ ರೈತರ ಪರ ಯಾವದೇ ಕಾಳಜಿ ಹೊಂದಿಲ್ಲ. ಚುನಾವಣೆ ಸಂದರ್ಭ ಕೋಮು ಭಾವನೆ ಕೆರಳಿಸಿ ಅದರ ಲಾಭ ಪಡೆದು ಜಯಗಳಿಸುವ ಇವರ ತಂತ್ರ ಬಯಲಾಗಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷದವರೇ ಈರ್ವರನ್ನು ಸೋಲಿಸಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಸಣ್ಣಪುಟ್ಟ ವಿಚಾರಗಳಿಗೆ ಆತ್ಮಹತ್ಯೆ ಯಂತಹ ಹೇಡಿತನಕ್ಕೆ ಯಾರೂ ಕೈಹಾಕಬಾರದು. ಇದರೊಂದಿಗೆ ಆತ್ಮಹತ್ಯೆಯ ಬೆದರಿಕೆ ತಂತ್ರವನ್ನೂ ಅನುಸರಿಸಬಾರದು. ಇಂತಹ ಪ್ರಕರಣಗಳಿಗೆ ಯಾರೂ ಬೆಂಬಲ ನೀಡಬಾರದು ಎಂದ ಲೋಕೇಶ್, ಗಣಪತಿ ಅವರ ಘಟನೆಗೆ ಸಂಬಂಧಿಸಿ ದಂತೆ ಹಿರಿಯ ರಾಜಕಾರಣಿ ಎ.ಕೆ. ಸುಬ್ಬಯ್ಯ ಅವರ ಹೇಳಿಕೆಯನ್ನು ಬ್ಲಾಕ್ ಕಾಂಗ್ರೆಸ್ ಸ್ವಾಗತಿಸುತ್ತದೆ ಎಂದು ಲೋಕೇಶ್ ಹೇಳಿದರು.

ಗೋಷ್ಠಿಯಲ್ಲಿದ್ದ ಪಕ್ಷದ ಜಿಲ್ಲಾ ಕಾರ್ಯದರ್ಶಿ ಚಂಗಪ್ಪ ಮಾತನಾಡಿ, ಜಿಲ್ಲೆಯ ದೇವಟಿ ಪರಂಬು ವಿವಾದದ ಬಗ್ಗೆ ಬಿಜೆಪಿ ತನ್ನ ನಿಲುವು ಸ್ಪಷ್ಟಪಡಿಸಲಿ. ಕಸ್ತೂರಿ ರಂಗನ್ ವರದಿಯ ಅನುಷ್ಠಾನ ಬಗೆಗಿನ ಮಾಹಿತಿಯನ್ನು ಜನತೆಯ ಮುಂದಿಡಲಿ ಎಂದು ಆಗ್ರಹಿಸಿದರಲ್ಲದೆ, ಜಿಲ್ಲೆಯ ಶಾಸಕರು ಮುಂದಿನ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬ ಚಿಂತನೆ ನಡೆಸುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಕಾಂಗ್ರೆಸ್ ಮುಕ್ತ ಹೇಳಿಕೆಯೇ ಅಪ್ರಸ್ತುತ ಎಂದರು. ಗೋಷ್ಠಿಯಲ್ಲಿ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಕೆ.ಎ. ಯಾಕೂಬ್, ತಾ.ಪಂ. ಸದಸ್ಯ ಬಿ.ಬಿ. ಸತೀಶ್, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್, ಪ.ಪಂ. ನಾಮನಿರ್ದೇಶಿತ ಸದಸ್ಯ ಉದಯಶಂಕರ್ ಅವರುಗಳು ಉಪಸ್ಥಿತರಿದ್ದರು.