ಸುಂಟಿಕೊಪ್ಪ, ಜ. 1: ಪ್ರತಿಯೊಬ್ಬ ವ್ಯಕ್ತಿಯು ತನ್ನ ಕಣ್ಣಿನ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮಡಿಕೇರಿ ನೇತ್ರ ತಜ್ಞ ಡಾ. ಸಿ.ಆರ್. ಪ್ರಶಾಂತ್ ಹೇಳಿದರು.

ಇಲ್ಲಿಗೆ ಸಮೀಪದ ಬೊಯಿಕೇರಿ ಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಎನ್‍ಎಸ್‍ಎಸ್ ಶಿಬಿರದಲ್ಲಿ “ ನೇತ್ರ ಸಂರಕ್ಷಣೆ ಮುನ್ನೆಚ್ಚರಿಕೆ ಕ್ರಮಗಳು” ಎಂಬ ವಿಷಯದ ಕುರಿತು ಮಾತನಾಡಿದರು.

ಕಣ್ಣಿನಲ್ಲಿ ಏನಾದರೂ ತೊಂದರೆ ಕಂಡುಬಂದಲ್ಲಿ ತಾವೇ ಸ್ವಯಂ ಪ್ರೇರಿತವಾಗಿ ಚಿಕಿತ್ಸೆ ಮಾಡಿಕೊಳ್ಳದೇ ನುರಿತ ನೇತ್ರ ತಜ್ಞರಲ್ಲಿ ತೋರಿಸಬೇಕು. ಅಂತಹ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ಮಾಡಬಾರದು. ಅಲ್ಲದೇ ಮಧುಮೇಹ ಕಾಯಿಲೆಯು ಕಣ್ಣಿಗೆ ಹೆಚ್ಚಿನ ಹಾನಿಯನ್ನು ಉಂಟುಮಾಡುತ್ತದೆ. ಕಣ್ಣಿನ ಒತ್ತಡ ಖಾಯಿಲೆಯಾದ ಗ್ಲಾಕೋಮಾ ಕಣ್ಣಿನ ದೃಷ್ಟಿಯನ್ನು ಶಾಶ್ವತವಾಗಿ ನಾಶ ಮಾಡಬಹುದು.ಇದರ ಎಚ್ಚರವಿರಲಿ ಎಂದರಲ್ಲದೇ, ಸೂರ್ಯನ ಅತಿ ನೇರಳೆ ಕಿರಣಗಳಿಂದ ಕಣ್ಣಿಗೂ ಹಾನಿ ಉಂಟಾಗುತ್ತದೆ. ಈ ಬಗ್ಗೆ ಹೆಚ್ಚಿನ ಕಾಳಜಿ ಇರಲಿ ಎಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿ ಮಡಿಕೇರಿಯ ಆರ್ಥಿಕ ಸಲಹೆಗಾರರಾದ ಗೀತಾ ಗಿರೀಶ್ ಅವರು ‘ವಿದ್ಯಾರ್ಥಿಗಳಲ್ಲಿ ಆರ್ಥಿಕತೆಯ ಅರಿವು ಮತ್ತು ನಿರ್ವಹಣೆ’ ಕುರಿತು ಉಪನ್ಯಾಸ ನೀಡಿ, ಎಲ್ಲರೂ ಆರ್ಥಿಕವಾಗಿ ಸಬಲರಾಗಿರಬೇಕು. ಆಪತ್ಕಾಲದಲ್ಲಿ ಸಂಪತ್ತು ಸಂಗ್ರಹಿಸುವದು ಅಗತ್ಯವಾಗಿದ್ದು, ಉಳಿತಾಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೇ ಹೊರತು ದುಂದುವೆಚ್ಚಕ್ಕೆ ಅವಕಾಶ ನೀಡಬಾರದು ಎಂದರು.

ಬೊಯಿಕೇರಿ ಕಾಫಿ ಬೆಳೆಗಾರ ನಂದಿನೆರವೆಂಡ ಅಪ್ಪಯ್ಯ ಮಾತನಾಡಿ, ಆರ್ಥಿಕ ನಿರ್ವಹಣೆಯಲ್ಲಿ ಜಾಗೃತಿ ಇರಬೇಕು. ಆಧುನಿಕ ಸಂಪರ್ಕ ಸಾಧನವಾದ ಮೊಬೈಲ್ ಅನವಶ್ಯಕ ಆರ್ಥಿಕ ನಷ್ಟಕ್ಕೆ ದಾರಿಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕೆದಕಲ್ ಗ್ರಾ.ಪಂ. ಅಧ್ಯಕ್ಷ ಬಾಲಕೃಷ್ಣ ರೈ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯಲ್ಲೂ ಆರ್ಥಿಕ ಶಿಸ್ತು ಇರಬೇಕು. ಮೊಬೈಲ್ ಬಳಕೆ ಒಳ್ಳೆಯದು ಆದರೆ ಅದು ಮಿತಿಯಿರಲಿ ಎಂದ ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಶಿಸ್ತನ್ನು ರೂಪಿಸಿಕೊಳ್ಳಬೇಕು. ಅದಕ್ಕೆ ಎನ್‍ಎಸ್‍ಎಸ್ ಉತ್ತಮ ಅಡಿಪಾಯವಾಗಿದೆ. ಇಂತಹ ಶಿಬಿರಗಳು ಜ್ಞಾನಗಳಿಕೆಯನ್ನು ಹೆಚ್ಚಿಸುತ್ತದೆ. ಅಲ್ಲದೇ ನಾಯಕತ್ವದ ಗುಣವನ್ನು ಕಲಿಸುತ್ತದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಸಹನೆ, ಸಹಬಾಳ್ವೆಯ ಪಾಠವನ್ನು ಕಲಿಯಿರಿ ಎಂದು ಹೇಳಿದರು.

ವೇದಿಕೆಯಲ್ಲಿ ಬೊಯಿಕೇರಿ ಸ.ಮಾ.ಪ್ರಾ. ಶಾಲೆಯ ಶಿಕ್ಷಕಿ ಪಿ.ಟಿ. ಪಾರ್ವತಿ, ಶಿಬಿರಾಧಿಕಾರಿ ಬಿ.ಆರ್. ಶಶಿಧರ್ ಇತರರು ಇದ್ದರು.