ಮಡಿಕೇರಿ, ಜ. 30: ಅಭಿವೃದ್ಧಿ ಎಂಬ ಹೆಸರಿನಲ್ಲಿ ಮಡಿಕೇರಿ ನಗರ ಗುಡಿಸಿ ಗುಂಡಾಂತರವಾಗುತ್ತಿದೆ. ಎಲ್ಲಿ ಯಾವ ಕೆಲಸ ಆಗಬೇಕೋ ಅದು ಆಗುತ್ತಿಲ್ಲ. ಸಾರ್ವಜನಿಕರ ಬೇಡಿಕೆಗಳ ಕಾಮಗಾರಿಗೆ ಇಲ್ಲಿ ಸೊಪ್ಪು ಹಾಕುವವರೇ ಇಲ್ಲ. ಆದರೆ, ಪುರ ನಗರವಾಗುವದಕ್ಕಿಂತ ಮುನ್ನವೇ ಆಗಬೇಕಿದ್ದ ಒಳಚರಂಡಿ ಎಂಬ ಕಾಮಗಾರಿ ಇದೀಗ ನಗರದಲ್ಲಿ ಹರಿದಾಡುತ್ತಿದೆ. ಸುಸಜ್ಜಿತ ರಸ್ತೆ, ಬಡಾವಣೆಗಳೆಲ್ಲ ನಿರ್ಮಾಣವಾದ ಮೇಲೆ ಇದೀಗ ಮತ್ತೆ ರಸ್ತೆಗಳನ್ನು ಅಗೆದು ಒಳಚರಂಡಿ ನಿರ್ಮಿಸಲಾಗುತ್ತಿದೆ. ಇದೀಗ ಗಲ್ಲಿ-ಗಲ್ಲಿಗಳ ರಸ್ತೆಗಳು ಈ ಕಾಮಗಾರಿಗೆ ಬಲಿಯಾಗಿವೆ. ಮುಂದಕ್ಕೆ ಮುಖ್ಯ ರಸ್ತೆಗಳಲ್ಲಿರುವ ಕಾಂಕ್ರೀಟ್ ರಸ್ತೆಗಳಿಗೆ ಗತಿ ಕಾಣಿಸಲಾಗುತ್ತದೆ.

ಅವೈಜ್ಞಾನಿಕ ಹಾಗೂ ಅಪೂರ್ಣ ಕಾಮಗಾರಿಗಳಿಂದಾಗಿ ನಾಗರಿಕರು ಪ್ರತಿನಿತ್ಯ ಹಿಂಸೆ ಅನುಭವಿಸುವಂತಾಗಿದೆ. ಹೇಳುವವರು, ಕೇಳುವವರಿಲ್ಲದೆ ಯಾರೋ ಹೊರ ಜಿಲ್ಲೆಯ ಕಾರ್ಮಿಕರು ಬಂದು ತಮಗಿಷ್ಟಬಂದಂತೆ ರಸ್ತೆಯನ್ನು ಅಗೆದು ಪೈಪ್ ಹಾಕಿ ತೆರಳಿದರೆ ಮತ್ತೆ ಯಾರೂ ಕೂಡ ತಿರುಗಿ ನೋಡುವವರಿಲ್ಲ. ಗುಂಡಿ ತೋಡಿದ ರಸ್ತೆಗಳನ್ನು ಸರಿಯಾದ ರೀತಿಯಲ್ಲಿ ಮುಚ್ಚದೇ ಇರುವದರಿಂದ ಹೊಂಡ-ಗುಂಡಿಗಳಾಗಿ ನಡೆದಾಡಲು ಕೂಡ ತ್ರಾಸದಾಯಕವಾಗಿದೆ.

ಮೊನ್ನೆ ಸುರಿದ ಮಳೆಗೆ ಕಾನ್ವೆಂಟ್ ರಸ್ತೆ ಕಾವೇರಿ ಬಡಾವಣೆಗೆ ತೆರಳುವ ರಸ್ತೆಗಳು ಸೇರಿದಂತೆ ಬಹುತೇಕ ರಸ್ತೆಗಳು ಗುಂಡಿ ಬಿದ್ದಿದ್ದು, ವಾಹನ ಚಲಾಯಿಸಲು, ನಡೆದಾಡಲು ಕಷ್ಟಕರವಾಗಿ ಪರಿಣಮಿಸಿದೆ. ಬೆಳಗ್ಗಿನ ವಾಯು ವಿಹಾರಕ್ಕೆಂದು ತೆರಳಿದವರು, ದ್ವಿಚಕ್ರ ವಾಹನ ಸವಾರರು ಗುಂಡಿ ಯನ್ನರಿಯದೆ ಬಿದ್ದು ಎಡವಟ್ಟು ಮಾಡಿ ಕೊಂಡಿದ್ದಾರೆ.

(ಮೊದಲ ಪುಟದಿಂದ)

ಇದೀಗ ಎರಡು ದಿನ ಕಳೆದರೂ ಒಳಚರಂಡಿಯರಾಗಲೀ, ನಗರದ ಜನಪ್ರತಿನಿಧಿಗಳಾಗಲೀ ಈ ಬಗ್ಗೆ ಗಮನ ಹರಿಸದಿರುವದಂತೂ ದುರಂತವೇ ಸರಿ. ಅಷ್ಟಕ್ಕೂ ಒಳಚರಂಡಿ ಕಾಮಗಾರಿ ಬಗ್ಗೆ ನಗರಸಭೆಯವರಿಗೆ ಯಾವದೇ ಮಾಹಿತಿ ಇಲ್ಲವೆಂಬದಂತೂ ಸತ್ಯ...! -ಸಂತೋಷ್