ಮಡಿಕೇರಿ, ಜ 30: ಅಭಿವೃದ್ಧಿಯ ನಾಗಾಲೋಟದ ನಡುವೆ ಪರಿಸರಕ್ಕೆ ಹಾನಿಯಾಗದಂತೆ ಎಚ್ಚರವಹಿಸುವದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಸ್ವಚ್ಚ ಮನಸ್ಸಿನೊಂದಿಗೆ ನಿರಂತರವಾಗಿ ಕಾರ್ಯಕ್ರಮಗಳು ನಡೆದಲ್ಲಿ ಮಾತ್ರ ಉದ್ದೇಶದ ಗುರಿಮುಟ್ಟಲು ಸಾಧ್ಯ ಎಂದು ಕೊಡಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮೋಹನ್ ಪ್ರಭು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ರಾಷ್ಟ್ರೀಯ ಶುಚಿತ್ವ ದಿನಾಚರಣೆ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಮಡಿಕೇರಿ ವಕೀಲರ ಸಂಘ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ, ಗ್ರಾ.ಪಂ. ಸಂಯುಕ್ತ ಆಶ್ರಯದಲ್ಲಿ ಭಾಗಮಂಡಲದಲ್ಲಿ ನಡೆದ ಸ್ವಚ್ಛತಾ ಆಂದೋಲನದ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಹರಿಯುವ ನೀರಿನ ಸದ್ಭಳಕೆ ಯೊಂದಿಗೆ ಸ್ವಚ್ಛವಾಗಿ ಹರಿಯಲು ಪ್ರತಿಯೊಬ್ಬರೂ ಕೈಜೋಡಿಸುವದ ರೊಂದಿಗೆ ಸ್ವಚ್ಛ ಕಾವೇರಿ ಕನಸು ನನಸಾಗಲು ಸಾಧ್ಯ ಎಂದರು. ಮುಂದಿನ ದಿನಗಳಲ್ಲಿ ನೀರಿನ ಕೊರತೆ ಎದುರಾಗುವ ಆತಂಕವಿದ್ದು ನೀರಿನ ಸಂರಕ್ಷಣೆಗೆ ಸ್ವಯಂಪ್ರೇರಿತರಾಗಿ ಪ್ರತಿಯೊಬ್ಬರೂ ಜಾಗೃತರಾಗ ಬೇಕಾಗಿದೆ ಎಂದರು.
(ಮೊದಲ ಪುಟದಿಂದ)
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೊಡಗು ಜಿಲ್ಲಾ ಪಂಚಾಯ್ತಿ ಸದಸ್ಯರಾದ ಕವಿತಾ ಪ್ರಭಾಕರ್ ಮಾತನಾಡಿ, ಕಾವೇರಿಯ ಮೂಲದಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಸರಕಾರ ವಿಶೇಷ ಅನುದಾನ ಕಲ್ಪಿಸುವದರೊಂದಿಗೆ ನದಿಯ ಸಂರಕ್ಷಣೆಯಾಗಬೇಕಾಗಿದೆ ಎಂದರು. ಕ್ಷೇತ್ರಕ್ಕೆ ಭೇಟಿ ನೀಡುವ ಪ್ರವಾಸಿಗರು ಸ್ವಚ್ಛತೆ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಈ ನಿಟ್ಟಿನಲ್ಲಿ ಅವರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕಾಗಿದೆ ಎಂದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಜಿ.ಆರ್. ಗಣೇಶನ್ ಮಾತನಾಡಿ, ಸಂಘಸಂಸ್ಥೆಗಳು ಪರಿಸರ ಹಾಗೂ ಜಲಮೂಲಗಳ ಸಂರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ, ನದಿಗೆ ನೇರವಾಗಿ ಕಲುಷಿತ ಹರಿಸುತ್ತಿರುವ ಬಗ್ಗೆ ಪರಿಶೀಲನೆ ನಡೆಸಿ ಸಂಬಂಧಿಸಿದವರಿಗೆ ಎಚ್ಚರಿಕೆ ನೀಡುವದರೊಂದಿಗೆ ಕ್ರಮ ಕೈಗೊಳ್ಳಲಾಗುವದು ಎಂದರು.
ಭಾಗಮಂಡಲ ಗ್ರಾಮಪಂಚಾಯ್ತಿ ಅಧ್ಯಕ್ಷೆ ಜೆ. ಸುಮಿತ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯ್ತಿ ಸದಸ್ಯರಾದ ಸಂಧ್ಯಾ, ತಲಕಾವೇರಿ ಕ್ಷೇತ್ರದ ಮುಖ್ಯ ಅರ್ಚಕ ನಾರಾಯಣಾಚಾರ್, ಕಾವೇರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ಕಾವ್ಯ ಮಾತನಾಡಿದರು.
ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯ ನದಿ ತಟಗಳ ಗ್ರಾಮಗಳಲ್ಲಿ ಮುಂದಿನ 100 ದಿನಗಳ ಅವಧಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜೀವನದಿ ಕಾವೇರಿ ಸಂರಕ್ಷಣೆಗೆ ಸಮಿತಿ ಕಾರ್ಯಕ್ರಮಗಳನ್ನು ರೂಪಿಸಿರುವ ಬಗ್ಗೆ ಮಾಹಿತಿ ಒದಗಿಸಿ ನದಿ ಸಂರಕ್ಷಣೆಗೆ ಕೈಜೋಡಿಸುವಂತೆ ಕೋರಿದರು. ಸ್ವಚ್ಛತಾ ಆಂದೋಲನದ ಅಂಗವಾಗಿ ಭಾಗಮಂಡಲ ಸಂಗಮ ಆವರಣದಲ್ಲಿ ನದಿ ತಟದ ಸ್ವಚ್ಚತಾ ಕಾರ್ಯ ನಡೆಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಮಹಾತ್ಮಾ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ 2 ನಿಮಿಷ ಕಾಲ ಮೌನಾಚರಣೆ ನಡೆಸಲಾಯಿತು. ಭಗಂಡೇಶ್ವರ ದೇವಾಲಯದ ಆವರಣದಲ್ಲಿ ಗಿಡ ನೆಡಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಭಗಂಡೇಶ್ವರ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಕುಮಾರ್, ಭಾಗಮಂಡಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕಾಳನ ಭವಾನಿ ಹರೀಶ್ ಮತ್ತು ಸದಸ್ಯರಾದ ಸುನಿತಾ, ಪೆರುಬಾಯಿ ಪ್ರಮೀಳ ವಿಜಯ, ದೇವಂಗೋಡಿ ಭಾಸ್ಕರ್, ಕುದುಕುಳಿ ಯೋಗಾನಂದ, ರಾಜಾ ರೈ, ಕೆ.ಸಿ.ಪುರುಷೋತ್ತಮ್, ಮತ್ತಾರಿ ಎಂ.ರಾಜ, ಮನೋಜ್‍ಕುಮಾರ್, ಕುಶಾಲನಗರ ಮಾಜಿ ಸೈನಿಕ ಸಂಘದ ಸ್ಥಾಪಕ ಅಧ್ಯಕ್ಷ ನಿವೃತ್ತ ಕ್ಯಾ.ಎಂ.ವಿ.ಭಾಸ್ಕರ್, ಕೂರ್ಗ್ ಗ್ರೀನ್ ಸಿಟಿ ಫೋರಂ ಸಂಚಾಲಕ ಚೈಯಂಡ ಸತ್ಯ, ಕಾವೇರಿ ನದಿ ಸ್ವಚ್ಚತಾ ಆಂದೋಲನ ಸಮಿತಿ ಜಿಲ್ಲಾ ಸಂಚಾಲಕಿ ರೀನಾ ಪ್ರಕಾಶ್, ಪ್ರಮುಖರಾದ ಡಿ.ಆರ್. ಸೋಮಶೇಖರ್, ಜಗದೀಶ್, ಆಶಾ ಸುಬ್ಬಯ್ಯ, ಸ್ಥಳೀಯ ಪ್ರಮುಖರು, ಕಾವೇರಿ ಪದವಿಪೂರ್ವ ಕಾಲೇಜು ಹಾಗೂ ಕೆವಿಜಿ ಐಟಿಐ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಿಆರ್‍ಪಿ ಶ್ರೀಧರ್ ಕಾರ್ಯಕ್ರಮ ನಿರೂಪಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಶೋಕ್ ಕುಮಾರ್ ಸ್ವಾಗತಿಸಿ ವಂದಿಸಿದರು.