ಸೋಮವಾರಪೇಟೆ,ಸೆ.15: ತಾಲೂಕಿನ ಶನಿವಾರಸಂತೆ ಹೋಬಳಿ ವ್ಯಾಪ್ತಿಗೆ ಒಳಪಡುವ ಗೆಜ್ಜೆಹಣಕೋಡು ಗ್ರಾಮದಲ್ಲಿ ಕೆಲವರು ಊರುಡುವೆ ಜಾಗವನ್ನು ಒತ್ತುವರಿ ಮಾಡಿಕೊಂಡು ತೋಟ, ಮನೆ ನಿರ್ಮಿಸಿಕೊಳ್ಳುತ್ತಿದ್ದು, ತಕ್ಷಣ ಇದನ್ನು ಸ್ಥಗಿತಗೊಳಿಸಿ ಒತ್ತುವರಿ ಯನ್ನು ತೆರವುಗೊಳಿಸ ಬೇಕೆಂದು ಗ್ರಾಮಸ್ಥರು ಹಾಗೂ ಸೋಮೇಶ್ವರ ಯುವಕ ಸಂಘದ ಪದಾಧಿಕಾರಿಗಳು ತಾಲೂಕು ತಹಶೀಲ್ದಾರ್‍ಗೆ ಮನವಿ ಸಲ್ಲಿಸಿದ್ದಾರೆ.

ಕಳೆದ ಹಲವು ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ಗೆಜ್ಜೆಹಣಕೋಡು ಗ್ರಾಮದ ಸರ್ವೆ ನಂ. 39/1ರ 31.20 ಏಕರೆ ಊರುಡುವೆ ಜಾಗವನ್ನು ಇತ್ತೀಚೆಗೆ ಕೆಲವರು ಅತಿಕ್ರಮಣ ಮಾಡಿ ಕೊಂಡು, ಕಾಫಿ ತೋಟ ಹಾಗೂ ಮನೆಗಳನ್ನು ನಿರ್ಮಿಸಿ ಕೊಳ್ಳುತ್ತಿದ್ದಾರೆ. ಈ ಜಾಗವು ಊರುಡುವೆಗೆ ಸೇರಿದ್ದು, ಖಾತೆಯು ಗ್ರಾಮಸ್ಥರ ಹೆಸರಿನಲ್ಲಿದೆ. ಇದೀಗ ಬೇರೆಯವರು ಜಾಗವನ್ನು ಒತ್ತುವರಿ ಮಾಡಿಕೊಳ್ಳುತ್ತಿದ್ದು, ತಕ್ಷಣ ತೆರವುಗೊಳಿಸಬೇಕೆಂದು ತಹಶೀಲ್ದಾರ್ ಕೃಷ್ಣ ಅವರನ್ನು ಆಗ್ರಹಿಸಿ, ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ತಹಶೀಲ್ದಾರ್ ಕೃಷ್ಣ ಅವರು, ಜಾಗದ ಸರ್ವೆ ನಡೆಸಿ, ಊರುಡುವೆ ಒತ್ತುವರಿಯಾಗಿದ್ದರೆ, ತಕ್ಷಣ ತೆರವುಗೊಳಿಸಲಾಗುವದು. ಈ ಬಗ್ಗೆ ವರದಿ ನೀಡುವಂತೆ ಕಂದಾಯ ನಿರೀಕ್ಷಕರಿಗೆ ಸೂಚಿಸಲಾಗುವದು ಎಂದು ಭರವಸೆ ನೀಡಿದರು.

ಈ ಸಂದರ್ಭ ಗೆಜ್ಜೆ ಹಣಕೋಡು ಗ್ರಾಮದ ಸೋಮೇಶ್ವರ ಯುವಕ ಸಂಘದ ಅಧ್ಯಕ್ಷ ಪ್ರಕಾಶ್, ಕಾರ್ಯದರ್ಶಿ ಪ್ರಶಾಂತ್, ಗ್ರಾಮದ ಪ್ರಮುಖರುಗಳಾದ ದರ್ಶನ್, ಪೊನ್ನಪ್ಪ, ಸೋಮಯ್ಯ, ಗಣೇಶ್, ಪರಮೇಶ್, ಉದಯ್ ಸೇರಿದಂತೆ 50ಕ್ಕೂ ಅಧಿಕ ಮಂದಿ ಗ್ರಾಮಸ್ಥರು ಉಪಸ್ಥಿತರಿದ್ದರು.