ಪೊನ್ನಂಪೇಟೆ, ಸೆ. 15: 1928ನೇ ಇಸವಿಯಲ್ಲಿ ಸ್ಥಾಪನೆಯಾದ ಪೊನ್ನಂಪೇಟೆ ಪಟ್ಟಣ ಸಹಕಾರ ಬ್ಯಾಂಕ್ ರಿಸರ್ವ್ ಬ್ಯಾಂಕಿನ ನೇರ ಪರವಾನೆ ಪಡೆದಿದ್ದು, ಇದರ 65ನೇ ವಾರ್ಷಿಕ ಮಹಾಸಭೆಯನ್ನು ತಾ. 19ರಂದು ಪೊನ್ನಂಪೇಟೆ ಸಹಕಾರ ಭವನದ ಸಭಾಂಗಣದಲ್ಲಿ ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷ ಚಿರಿಯಪಂಡ ಕೆ. ಉತ್ತಪ್ಪ ಅವರು ಬ್ಯಾಂಕ್ 2015-16 ಸಾಲಿಗೆ ದುಡಿಯುವ ಬಂಡವಾಳ 44 ಕೋಟಿಗಳಾಗಿದ್ದು, ವಾರ್ಷಿಕ ವ್ಯವಹಾರ ಧನ 138 ಕೋಟಿ ಯಾಗಿದ್ದು, ವರದಿ ವರ್ಷದಲ್ಲಿ 80.73ಲಕ್ಷ ಒಟ್ಟು ಲಾಭವಿದ್ದು, ಆದಾಯ ತೆರಿಗೆ ಶೇ. 33 ರಂತೆ 26.02 ಲಕ್ಷ ಕಾದಿರಿಸಲಾಗಿದೆ. ನಿವ್ವಳ ಲಾಭ 54.71ಲಕ್ಷಗಳಾಗಿದೆ. ಈ ವರ್ಷದ ಲಾಭದಲ್ಲಿ ಸದಸ್ಯರಿಗೆ ಡಿವಿಡೆಂಟ್ ಪಾವತಿಗೆ ಶೇ. 14ರಂತೆ ನೀಡಲು ಶಕ್ತರಾಗಿದೆ.

ಸದಸ್ಯರ ಹಿತದೃಷ್ಟಿಯಿಂದ ಮರಣ ನಿಧಿ ಸ್ಥಾಪಿಸಿದ್ದು, ಒಟ್ಟು ಸದಸ್ಯರ ಪೈಕಿ 654 ಸದಸ್ಯರುಗಳು ಮರಣ ನಿಧಿ ಸದಸ್ಯರಾಗಿದ್ದು, ಪ್ರಸ್ತುತ ರೂ. 1,38,27,990 ಇದೆ. ಸದಸ್ಯರು ಮರಣ ಹೊಂದಿದ ಸಂದರ್ಭ ಸದಸ್ಯರ ನಾಮಿನಿಗೆ 1,10,000 ಪಾವತಿಸಲಾಗುತ್ತದೆ ಎಂದರು. ಬ್ಯಾಂಕಿನ ಸದಸ್ಯರಿಗೆ ವೈದ್ಯಕೀಯ ಸಹಾಯಧನ, ಧರ್ಮಾರ್ಥ ನಿಧಿಯಿಂದ ಗರಿಷ್ಠ ರೂ 15,000 ದವರೆಗೆ ಮುಂದಕ್ಕೆ ನೀಡಲಾಗುತ್ತದೆ ಹಾಗೂ ಬ್ಯಾಂಕ್‍ನ ಸದಸ್ಯರ ಮಕ್ಕಳಿಗೆ ಮುಂದಿನ ವರ್ಷದಿಂದ ದ್ವಿತೀಯ ಪಿಯುಸಿಯ ಕಲಾ ವಿಭಾಗ ವಾಣಿಜ್ಯ ವಿಭಾಗ ಹಾಗೂ ವಿಜ್ಞಾನ ವಿಭಾಗದಲ್ಲಿ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನಗಳಿಸಿದವರಿಗೆ ಬಹುಮಾನ ನೀಡಲಾಗುತ್ತದೆ.

ಅಲ್ಲದೆ ಪ್ರಸ್ತುತ ಬ್ಯಾಂಕ್‍ನಿಂದ ನೀಡುತ್ತಿರುವ ಜಾಮೀನು ಸಾಲವನ್ನು ರೂ. 60,000 ದಿಂದ ರೂ. 1,00,000 ಕ್ಕೆ, ವ್ಯಾಪಾರ ಸಾಲವನ್ನು ರೂ. 1,50,000 ದಿಂದ ರೂ. 2,00,000ಕ್ಕೆ, ಆಭರಣ ಸಾಲವನ್ನು ರೂ. 1,00,000 ದಿಂದ ರೂ. 2,00,000ಕ್ಕೆ, ಗಿರ್ವಿ ಸಾಲವನ್ನು ರೂ. 15,00,000 ದಿಂದ ರೂ. 20,00,000 ಕ್ಕೆ ಏರಿಸಲಾಗಿದೆ.

ಲೆಕ್ಕ ಸಂಶೋಧನಾ ವರದಿಯಂತೆ ನಮ್ಮ ಬ್ಯಾಂಕ್ ‘ಎ’ ತರಗತಿಯಲ್ಲಿದೆ. ಬ್ಯಾಂಕ್‍ನ ಕಾನೂನು ಸಲಹೆಗಾರರಾಗಿ ವಕೀಲರಾದ ಕೆ.ಕೆ. ಭೀಮಯ್ಯ, ಎಂ.ಬಿ. ನಾಣಯ್ಯ, ಎಸ್.ಡಿ. ಕಾವೇರಪ್ಪ ಕಾರ್ಯನಿರ್ವ ಹಿಸುತ್ತಿದ್ದಾರೆ. ಬ್ಯಾಂಕಿನ ಗಿರವಿ ಸಾಲದ ಅರ್ಜಿಗಳು ಬಂದಲ್ಲಿ ಕಟ್ಟಡ ಮೌಲ್ಯಮಾಪನ ಮಾಡಲು ನಿವೃತ್ತ ಇಂಜಿನಿಯರ್‍ಗಳಾದ ಮಲ್ಲಂಗಡ ಕೆ. ಪೂಣಚ್ಚ ಹಾಗೂ ಸಿ.ಬಿ. ಉತ್ತಪ್ಪ ಅವರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಮಾಹಿತಿಯಿತ್ತರು. ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಎಂ.ಪಿ. ಅಪ್ಪಚ್ಚು, ನಿರ್ದೇಶಕರಾದ ಸಿ.ಎಂ. ಪೊನ್ನಪ್ಪ, ಸಿ.ಕೆ. ದೇವಯ್ಯ, ಐ.ಕೆ. ಬೋಪಣ್ಣ, ಸಿ.ಎಸ್. ಉತ್ತಪ್ಪ, ಕೆ. ದಯಾ ಚಂಗಪ್ಪ, ಎಂ.ಎಸ್. ದೇವಕ್ಕಿ, ಎಂ. ಬೀಟಾ ಲಕ್ಷ್ಮಣ, ಎನ್.ಎಸ್. ಸುಬ್ರಮಣಿ, ಹೆಚ್. ಎ. ಪ್ರಭು, ಬ್ಯಾಂಕಿನ ವೃತ್ತಿಪರ ನಿರ್ದೇಶಕ ಎಂ.ಬಿ. ನಂಜಪ್ಪ ಹಾಗೂ ಪಿ.ಬಿ. ಪೂಣಚ್ಚ, ಬ್ಯಾಂಕಿನ ವ್ಯವಸ್ಥಾಪಕ ಎಸ್.ಎಂ. ಗಂಗಮ್ಮ ಹಾಜರಿದ್ದರು.