ಮಡಿಕೇರಿ, ಅ. 26: ಟಿಪ್ಪು ಜಯಂತಿ ಆಚರಿಸದಂತೆ ಕೋರಿ ಯುಕೊ ಸಂಘಟನೆಯ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅವರು ಸಲ್ಲಿಸಿದ್ದ ರಿಟ್ ಅರ್ಜಿ ಇಂದು ವಿಚಾರಣೆಗೆ ಬಂದಿದ್ದು, ರಿಟ್ ಬದಲು ರಾಜ್ಯ ಉಚ್ಚ ನ್ಯಾಯಾಲಯ ಪೀಠದ ಮುಂದೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವಂತೆ ಜಸ್ಟಿಸ್ ಎ.ಎಸ್. ಬೋಪಣ್ಣ ಸೂಚಿಸಿದ್ದಾರೆ. ಅರ್ಜಿ ವಿಚಾರಣೆಯನ್ನು ನವೆಂಬರ್ ಮೊದಲ ವಾರಕ್ಕೆ ಇರಿಸಿದ್ದಾರೆ.ಕೊಡವ ಜನಾಂಗದ ಅವಕೃಪೆಗೆ ಪಾತ್ರನಾಗಿರುವ ಟಿಪ್ಪುವಿನ ಜಯಂತಿ ಆಚರಿಸಕೂಡದೆಂದು ಮಂಜು ಚಿಣ್ಣಪ್ಪ ರಾಜ್ಯ ಸರ್ಕಾರಕ್ಕೆ ಈ ಹಿಂದೆ ಮನವಿ ಸಲ್ಲಿಸಿದ್ದರು. ಅದಕ್ಕೆ ಪ್ರತಿಕ್ರಿಯೆ ಬಾರದುದರಿಂದ ಏಕಸದಸ್ಯ ಪೀಠದೆದುರು ರಿಟ್ ಸಲ್ಲಿಸಿದ್ದರು. ಇಂದು ರಿಟ್ ವಿಚಾರಣೆಗೆ ಬಂದಿದ್ದು, ರಿಟ್ ಬದಲು ಸಾರ್ವಜನಿಕ ಹಿತಾಸಕ್ತಿ ಸಲ್ಲಿಸುವಂತೆ ಸೂಚನೆ ಬಂದಿದೆ.

ಬೆಳವಣಿಗೆಯನ್ನು ಸ್ವಾಗತಿಸಿರುವ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅವರು ಟಿಪ್ಪು ಜಯಂತಿಯ ವಿರುದ್ಧ ತಾತ್ವಿಕ ಅಂತ್ಯ ಕಾಣುವವರೆಗೆ ಸುಪ್ರೀಂ ಕೋರ್ಟಿಗೆ ತೆರಳಲೂ ಸಿದ್ಧರಿರುವದಾಗಿ ‘ಶಕ್ತಿ'ಗೆ ತಿಳಿಸಿದ್ದಾರೆ. ಮಂಜು ಪರ ಅವರ ವಕೀಲರಾದ ಪವನಚಂದ್ರ ಶೆಟ್ಟಿ ಅವರು ‘ಶಕ್ತಿ'ಯೊಂದಿಗೆ ಮಾತನಾಡಿ ಟಿಪ್ಪು ಹತ್ಯಾಕಾಂಡಕ್ಕೆ ಸಂಬಂಧಿಸಿದ ಎಲ್ಲಾ ಐತಿಹಾಸಿಕ ದಾಖಲೆಗಳನ್ನು ನ್ಯಾಯಾಲಯಕ್ಕೆ ಕನ್ನಡದಲ್ಲಿ ನೀಡಲಾಗಿತ್ತು. ಮುಂದೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಮುಂದೆ ಸಲ್ಲಿಸಬೇಕಾಗಿದೆ. ಮುಖ್ಯ ನ್ಯಾಯಾಧೀಶರು ಇದನ್ನು ಓದಬೇಕಾದರೆ ಈಗ ಕನ್ನಡದಲ್ಲಿರುವ ರಿಟ್ ಅರ್ಜಿಯಲ್ಲಿ ನೀಡಲಾದ ಎಲ್ಲಾ ದಾಖಲೆಗಳನ್ನು ಇಂಗ್ಲೀಷ್‍ಗೆ ತರ್ಜುಮೆ ಮಾಡಬೇಕಾಗಿದೆ ಎಂದು ವಕೀಲರು ತಿಳಿಸಿದರು. ಇದಕ್ಕೆ ಒಂದೆರಡು ದಿನಗಳ ಕಾಲಾವಕಾಶ ಅಗತ್ಯವಿರುವದಾಗಿ ಅವರು ಮಾಹಿತಿಯಿತ್ತರು.