ಗೋಣಿಕೊಪ್ಪಲು, ಡಿ. 3: ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಬಿಪಿಎಲ್ ಕಾರ್ಡುದಾರರಿಗೆ ಇಲ್ಲಿನ ಪರಿಮಳ ಮಂಗಳ ವಿಹಾರದಲ್ಲಿ ನಡೆದ ವಿಶೇಷ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸುಮಾರು 500 ಕ್ಕೂ ಹೆಚ್ಚು ಫಲಾನುಭವಿಗಳು ಪಾಲ್ಗೊಂಡರು.

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಡೆದ ಆರೋಗ್ಯ ಶ್ರೀ ಯೋಜನೆಯಲ್ಲಿ ಬರುವ ಸುಮಾರು ಏಳು ವಿಧದ ಕಾಯಿಲೆಗೆ ಚಿಕಿತ್ಸೆ ನೀಡುವ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಕಾರ್ಯಕ್ರಮವನ್ನು ಆರೊಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ಶಶಿ ಸುಬ್ರಮಣಿ ಉದ್ಘಾಟಿಸಿ ಮಾತನಾಡಿ, ನಾವು ತಿನ್ನುವ ಆಹಾರ ವಿಷಪೂರಿತವಾಗಿರುವದರಿಂದ ಹೆಚ್ಚಿನ ಕಾಯಿಲೆಗಳು ಬರುತ್ತವೆ. ಇದರಿಂದಾಗಿ ಸರ್ಕಾರದಿಂದ ಸಿಗುವ ಯೋಜನೆಗಳನ್ನು ನಾವು ಬಳಸಿಕೊಳ್ಳಬೇಕು. ಅಲ್ಲದೆ ಆದಷ್ಟು ವಿಮೆ ಮಾಡಿಸಿಕೊಳ್ಳುವ ಮೂಲಕ ನಮ್ಮ ರಕ್ಷಣೆಗೆ ಮುಂದಾಗಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಶ್ರೀರಂಗಪ್ಪ ಮಾತನಾಡಿ, ಎಷ್ಟೆ ಹಣವಂತನಾಗಿದ್ದರೂ ಕಾಯಿಲೆ ಬರುವ ಸಂದರ್ಭದಲ್ಲಿ ಆರ್ಥಿಕ ಸಮಸ್ಯೆ ತೊಂದರೆಯಾಗಲಿದೆ. ಆದ್ದರಿಂದಾಗಿ ಸರ್ಕಾರದ ಯೋಜನೆಗಳನ್ನು ಬಳಸಿಕೊಳ್ಳಬೇಕು. ವಾಜಪೇಯಿ ಆರೋಗ್ಯಶ್ರೀ ಯೋಜನೆಯಲ್ಲಿ ಗಂಭೀರ 7 ಕಾಯಿಲೆಗಳಿಗೆ ಚಿಕಿತ್ಸೆಗಳಿವೆ. ನರರೋಗ, ಕ್ಯಾನ್ಸರ್, ಗಂಭೀರ ಪ್ರಮಾಣದ ಅಪಘಾತ, ಸರ್ಜರಿ, ಹೃದಯದ ಕಾಯಿಲೆ ಹಾಗೂ ಮೂತ್ರಪಿಂಡಗಳ ತೊಂದರೆಗೆ ಚಿಕಿತ್ಸೆ ಪಡೆಯಬಹುದು ಎಂದರು.

ಈ ಸಂದರ್ಭ ತಾ.ಪಂ. ಉಪಾಧ್ಯಕ್ಷ ನೆಲ್ಲಿರ ಚಲನ್, ಸದಸ್ಯ ಜಯ ಪೂವಯ್ಯ, ತಾಲೂಕು ಆರೋಗ್ಯ ಅಧಿಕಾರಿ ಡಾ. ಯತಿರಾಜ್, ಕಾರ್ಯಕ್ರಮ ಸಂಯೋಜಕ ಹರ್ಷ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಿರ್ದೇಶಕ ಡಾ. ಲೋಹಿತ್, ಡಾ. ರಮೇಶ್, ಡಾ. ಶಿವಕುಮಾರ್, ಡಾ. ಕೋಮಲೇಶ್ ಹಾಗೂ ಡಾ. ಬುಲ್ಜರ್ ಉಪಸ್ಥಿತರಿದ್ದರು.