ಸುಂಟಿಕೊಪ್ಪ, ಡಿ. 3: ಮನೆ, ಅಂಗಡಿ, ವಾಣಿಜ್ಯ ಕಟ್ಟಡಗಳ ತೆರಿಗೆ ಹೆಚ್ಚಳದ ಪ್ರಸ್ತಾಪ, ಕಲುಷಿತ ನೀರು ಗದ್ದೆಗೆ ನುಗ್ಗಿ ಕೃಷಿ ಚಟುವಟಿಕೆ ಹಿನ್ನಡೆ, ಚೆಕ್ ಡ್ಯಾಂ ನಿರ್ಮಾಣ, ಭೂ ಪರಿವರ್ತನೆಯಿಂದ ಪಂಚಾಯಿತಿಗೆ ಲಭಿಸದ ಜಾಗ, ಕಂದಾಯ ಇಲಾಖೆ ಪೈಸಾರಿ ಜಾಗ ವಶಕ್ಕೆ ತೆಗೆದುಕೊಂಡಿರುವ ಬಗ್ಗೆ ಗ್ರಾಮಸ್ಥರು ತೀವ್ರ ವಾಕ್ಸಮರ ನಡೆಸಿದ ಪರಿಣಾಮ ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯಿಂದ ನಡೆದ ಗ್ರಾಮಸಭೆ ಗೊಂದಲದ ಗೂಡಾಗಿ ಪರಿವರ್ತನೆಗೊಂಡಿತು.

ಇಲ್ಲಿನ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಗ್ರಾ.ಪಂ.ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್ ಅವರ ಅಧ್ಯಕ್ಷತೆಯಲ್ಲಿ 2016-17ನೇ ಸಾಲಿನ ಗ್ರಾಮಸಭೆ ನಡೆಯಿತು.

ಮನೆ, ಅಂಗಡಿ ಮಳಿಗೆಗಳ, ಹೋಂಸ್ಟೇ, ಲಾಡ್ಜ್‍ಗಳ ತೆರಿಗೆಯನ್ನು ಗ್ರಾ.ಪಂ. ಹೆಚ್ಚಿಸಿರುವ ಮಾಹಿತಿ ಅರಿತ ಗ್ರಾಮಸ್ಥರು ಭಾರೀ ಸಂಖ್ಯೆಯಲ್ಲಿ ಗ್ರಾಮಸಭೆಗೆ ಆಗಮಿಸಿದ್ದರು. ಪ್ರಾರ್ಥನೆ ನಂತರ ಈ ಬಗ್ಗೆ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಡಿ.ನರಸಿಂಹ ಮಾಜಿ ಅಧ್ಯಕ್ಷ ಸುದರ್ಶನ ನಾಯ್ಡು ಅವರು ಗ್ರಾಮಸಭೆಯ ಅಜೆಂಡಾವನ್ನು ಕೈ ಬಿಟ್ಟು ಮನೆ, ಅಂಗಡಿ ಮಳಿಗೆ ಹೋಂಸ್ಟೇಗಳ ತೆರಿಗೆಯನ್ನು ಶೇಕಡ 1000 ಪಟ್ಟು ಹೆಚ್ಚಿಸಿರುವದು ಯಾವ ಮಾನದಂಡದ ಮೇರೆಗೆ ಜನರ ಹೊಟ್ಟೆಮೇಲೆ ಗದಾಪ್ರಹಾರ ನಡೆಸಲು ನಿಮಗೆ ಯಾವ ಹಕ್ಕಿದೆ 500 ರೂ ವಾರ್ಷಿಕ ಮನೆ ಕಂದಾಯವಿರುವದು 5,000 ರಿಂದ 10,000 ದವರೆಗೆ ಅಂಗಡಿ ಮಳಿಗೆಗೆ ನವೀಕರಣ ತೆರಿಗೆ 10,000 ರಿಂದ 12,000 ವರೆಗೆ ಹೆಚ್ಚಿಸಿರುವದು ಸರಿಯೇ ಎಂದು ಪ್ರಶ್ನಿಸಿದರು. ಸಭೆಗೆ ಸೇರಿದ್ದ ಗ್ರಾಮಸ್ಥರು ಒಮ್ಮೆಲೆ ಧ್ವನಿಗೂಡಿಸಿ ಈ ಆದೇಶವನ್ನು ಸಾರಾಸಾಗಟಾಗಿ ಕೈಬಿಡಬೇಕೆಂದು ಪಟ್ಟು ಹಿಡಿದರು.

ಪಿಡಿಓ ಎಂಆರ್ ಸುಮೇಶ್ ಉತ್ತರಿಸಿ ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಬೈಲಾವನ್ನು 1992 ರಿಂದ ಪರಿಷ್ಕರಿಸಲಿಲ್ಲ, ಹಳೆಯ ಕಂದಾಯ ತೆರಿಗೆಯನ್ನೇ ವಸೂಲಿ ಮಾಡಲಾಗುತ್ತಿದೆ. ಗ್ರಾ.ಪಂ.ಸಿಬ್ಬಂದಿ ವೇತನವೇ 36ಲಕ್ಷ ರೂ ತಗಲುತ್ತಿದ್ದು ಸರಕಾರದ ಅನುದಾನದಲ್ಲಿ ಶೇಕಡ 40 ರಷ್ಟು ಕುಡಿಯುವ ನೀರಿನ ವಿದ್ಯುತ್ ಖರ್ಚಿಗೆ ವ್ಯಯವಾಗುತ್ತಿದೆ. ತಿಂಗಳಿಗೆ 13 ಲಕ್ಷ ರೂ. ಗ್ರಾ.ಪಂ. ಅನುದಾನವನ್ನು ಕ್ರೋಡೀಕರಿಸಿ ವೇತನ ನೀಡಬೇಕಾಗುತ್ತದೆ ಗ್ರಾಮದ ಅಭಿವೃದ್ಧಿಗಳಿಗೆ ತೊಡಕಾಗುತ್ತಿದೆ. ಸರಕಾರ ರಾಜಪತ್ರದ ಅನ್ವಯ ತೆರಿಗೆ ಹೆಚ್ಚಿಸುವದು ಅನಿವಾರ್ಯವಾಗಿದೆ. ಅದರಲ್ಲೂ ರಾಜಪತ್ರದ ಅನುಸಾರ ತೆರಿಗೆ ಹೆಚ್ಚಿಸಿದರೆ ಮತ್ತಷ್ಟು ಹೊರೆ ಜನತೆಗೆ ಬೀಳಲಿದೆ ಎಂದು ವಿವರಿಸಿದರು.

ಗ್ರಾಮಸ್ಥರಾದ ಎಂ.ಎ .ವಸಂತ, ಶಾಂತರಾಮ್, ಎಸ್.ಜಿ. ಶ್ರೀನಿವಾಸ್, ವಹೀದ್‍ಜಾನ್, ಮಂಜುನಾಥ್, ಮಮತಾ ಮಾತನಾಡಿ ಈಗ ಬರಗಾಲದಿಂದ ಜನತೆ, ಅಂಗಡಿ ಮಾಲೀಕರು, ಕಾರ್ಮಿಕರು ಕಂಗಲಾಗಿದ್ದಾರೆ. ಇಷ್ಟೊಂದು ತೆರಿಗೆ ವಿಧಿಸಿದರೆ ಜೀವನ ನಡೆಸುವದೇ ಕಷ್ಟವಾಗುತ್ತದೆ. ತೆರಿಗೆ ಪರಿಷ್ಕರಣೆ ಸದ್ಯಕ್ಕೆ ಕೈ ಬಿಡಬೇಕೆಂದರು.

ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್ ಮಾತನಾಡಿ ತೆರಿಗೆ ಹೆಚ್ಚಳ ಪಂಚಾಯಿತಿ ಅಭಿವೃದ್ಧಿ ದೃಷ್ಟಿಯಿಂದ ಅನಿವಾರ್ಯವಾಗಿದೆ ಗ್ರಾಮಸ್ಥರು ಸಹಕರಿಸಬೇಕು ಅಲ್ಲದೆ ಆನೇಕರು ಮನೆಗಳನ್ನು ವಿಸ್ತರಿಸಿರುವದರಿಂದ ಹಳೆ ಕಂದಾಯವನ್ನೇ ತೆಗೆದುಕೊಳ್ಳುತ್ತ್ತಿದ್ದೇವೆ. ಡಿಸೆಂಬರ್‍ನಲ್ಲಿ ಮನೆ ಅಳತೆ ಮಾಡಿ ನೂತನ ತೆರಿಗೆ ವಿಧಿಸಲಾಗುವದು ಎಂದು ಉತ್ತರಿಸಿದರು. ಸಭೆಗೆ ಬಂದಿದ್ದ ಗ್ರಾಮಸ್ಥರು ಯಾವ ಪಂಚಾಯಿತಿಯಲ್ಲೂ ನಿಗದಿಪಡಿಸದ ತೆರಿಗೆ ಇಲ್ಲಿ ಮಾಡಿರುವದು ಸರಿಯಲ್ಲ, ಯಾವ ಮಾನದಂಡದಲ್ಲಿ ತೆರಿಗೆ ವಿಧಿಸುತ್ತೀರಾ ಇದನ್ನು ಕೈಬಿಟ್ಟು ಅಲ್ಪ ಪ್ರಮಾಣದ ತೆರಿಗೆ ಹೆಚ್ಚಳ ಮಾಡಿ ಎಂದು ಒಕ್ಕೊರಲಿನಿಂದ ಆಗ್ರಹಿಸಿದಾಗ ಅಧ್ಯಕ್ಷರ ಮನೆ ಆಳತೆ ಮಾಡಿ ನಂತರ ತೆರಿಗೆ ಪರಿಷ್ಕರಿಸುವದಾಗಿ ಠರಾವು ನೀಡಿದರು.

ನಿರ್ಣಯಕ್ಕೆ ಬೆಲೆಯಿಲ್ಲ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಕೈಗೊಂಡ ಯಾವದೇ ನಿರ್ಣಯ ಪುಸ್ತಕದಲ್ಲಿ ಮಾತ್ರ ಉಳಿಯುತ್ತದೆ. ಆದರೆ ಅದು ಅನುಷ್ಠಾನಕ್ಕೆ ಬರುತ್ತಿಲ್ಲ. ಕಳೆದ 15 ವರ್ಷಗಳಿಂದ ನಿರ್ಣಯ ಪುಸ್ತಕದಲ್ಲಿ ದಾಖಲಾದ ಎಷ್ಟು ನಿರ್ಣಯ ಅನುಷ್ಠಾನಗೊಂಡಿದೆ ಎಂದು ಎ.ಎಂ.ರಘು ಆಕ್ರೋಶ ವ್ಯಕ್ತಪಡಿಸಿದರು.

ಗುಡ್ಡಪ್ಪ ರೈ ಬಡಾವಣೆಯಲ್ಲಿ ಭೂ ಪರಿವರ್ತನೆಯಾಗಿದ್ದು ಅನೇಕರು ಮನೆ ನಿರ್ಮಿಸಿಕೊಂಡಿದ್ದಾರೆ. ಆದರೆ ಪಂಚಾಯಿತಿ ಖಾತೆಗೆ ಇಲ್ಲಿ ಅಂಗನವಾಡಿ ರಸ್ತೆಗೆ ಜಾಗವನ್ನೇ ನೀಡಲಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಬಿ.ಕೆ. ಮೋಹನ್ ರಘು ಆಗ್ರಹಿಸಿದರು.

ಪಂಚಾಯಿತಿಯ ಚರಂಡಿಯನ್ನು ಗ್ರಾ.ಪಂ. ಸದಸ್ಯೆಯ ಪತಿಯೋರ್ವರು ಜಖಂಗೊಳಿಸಿದ್ದಾರೆ.ಅದನ್ನು ಸರಿಪಡಿಸಿಕೊಡಲಿಲ್ಲ. ಪಂಚಾಯಿತಿ ಆಸ್ತಿನಾಶವಾದರೂ ಏಕೆ ಸುಮ್ಮನಿದ್ದೀರಾ ಎಂದು ಪಿ.ಆರ್. ಸುನಿಲ್ ಕುಮಾರ್, ನಾಗೇಶ್ ಪೂಜಾರಿ ಪ್ರಶ್ನಿಸಿದರು.

ಉಲುಗುಲಿ ರಸ್ತೆಯಲ್ಲಿ ಬಾರ್ ಮಾಲೀಕರು ಅವೈಜ್ಞಾನಿಕವಾಗಿ ಟ್ರಾನ್ಸ್‍ಫಾರಂ ಅಳವಡಿಸಿದ್ದು ಇದರಿಂದ ಆಗಾಗ್ಗೆ ಸ್ಫೋಟವಾಗುತ್ತಿದೆ. ತೆರವುಗೊಳಿಸಲು ಕಳೆದ ಗ್ರಾಮ ಸಭೆಯಲ್ಲಿ ಸೂಚಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ಎಂ.ಎಸ್. ಸುನಿಲ್, ಶಶಿಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಸುಂಟಿಕೊಪ್ಪ ಸರ್ವೆ ನಂ. 140ರಲ್ಲಿ ಕಂದಾಯ ಇಲಾಖೆ ಈ ಹಿಂದೆ ಗ್ರಾಂಟ್ ಮಾಡಿರುವ ಜಾಗ ಈಗ ಬೇರೆಯವರ ಕೈವಶವಾಗಿದೆ.

ಕಂದಾಯ ಇಲಾಖೆಯವರು ಸರ್ವೆ ನಡೆಸಿ ಈಗ 035 ಸೆಂಟು ಜಾಗ ಪೈಸಾರಿಯೆಂದು ಗುರುತಿಸಿ ಕೊಂಡಿರುವದರಲ್ಲಿ ಅವ್ಯವಹಾರ ನಡೆದಿರುವ ಶಂಕೆ ಇದೆ ಎಂದು ಹಸಕುಂಞ, ಶರೀಫ್, ಪಿ.ಎಂ. ಶೌಕತ್, ಉಸ್ಮಾನ್ ಹೇಳಿದರು.

ಈ ಜಾಗ ಗ್ರಾಮದ ದೇವತೆ ಬನಕ್ಕೆ ವರ್ಗಾವಣೆ ಮಾಡಿ ಚಾಮುಂಡೇಶ್ವರಿ ದೇವಾಲಯಕ್ಕೆ ಜಾಗ ಮೀಸರಿಸಲಾಗಿದೆ ಎಂದು ಗ್ರಾ.ಪಂ. ಉಪಾಧ್ಯಕ್ಷ ಪಿ.ಆರ್. ಸುಕುಮಾರ್ ಉತ್ತರಿಸಿದರು.

ಜಿ.ಪಂ.ಸದಸ್ಯೆ ಕೆ.ಪಿ. ಚಂದ್ರಕಲಾ ಮಾತನಾಡಿ ಹಳೆಯ ವಿಷಯಗಳನ್ನು ಇಲ್ಲಿ ಚರ್ಚಿಸುವದರಿಂದ ಪ್ರಯೋಜನವಿಲ್ಲ ಗ್ರಾಮದ ಅಭಿವೃದ್ಧಿ ದೃಷ್ಟಿಯನ್ನು ಇಟ್ಟುಕೊಂಡು ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳುವ ಎಂಬ ಸಲಹೆ ನೀಡಿದರು. ರೂ. 2000 ಮುಖಬೆಲೆಯ ಹೊಸನೋಟು ಬಂದಿದೆ ಇದರಿಂದ ಶ್ರೀಸಾಮಾನ್ಯರಿಗೆ ಈ ನೋಟು ಚಿಲ್ಲರೆ ಮಾಡಿಸಲು ಕಷ್ಟವಾಗಿದೆ ಬಿಜೆಪಿ ಪಕ್ಷದವರು ಸಿಹಿ ಹಂಚಿ ಸಂತಸ ಪಡುತ್ತಿರುವದು ಸರಿಯಲ್ಲ ಎಂದು ಅವರು ಹೇಳಿದರು.

ಗ್ರಾಮಸಭೆಗೆ ನೋಡಲ್ ಅಧಿಕಾರಿ ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಆನಂದ್, ಜಿ.ಪಂ. ಇಂಜಿನಿಯರ್ ಗ್ರಾ.ಪಂ. ಸದಸ್ಯರುಗಳಾದ ಕೆ.ಇ. ಕರೀಂ, ಶಾಹಿದ್, ಸಿ. ಚಂದ್ರ, ಹೇಮಂತ್ ಕುಮಾರ್, ಎ. ಶ್ರೀಧರ್ ಕುಮಾರ್, ರಜಾಕ್, ಸೋಮಯ್ಯ, ಈಶ್ವರ, ನಾಗರತ್ನ, ಗಂಗಮ್ಮ, ಶಿವಮ್ಮ ಮಹೇಶ್, ಶೋಭಾ ರವಿ, ಗಿರಿಜಾ ಉದಯ ಕುಮಾರ್, ರಹೆನಾ ಫೈರೋಜ್, ವಳ್ಳಿ, ರತ್ನಾ ಜಯನ್, ಜ್ಯೋತಿ ಭಾಸ್ಕರ್, ಇಂಜಿನೀಯರ್ ಫಯಾಜ್ ಅಹ್ಮದ್ ಅಂಗನವಾಡಿ ಕಾರ್ಯಕರ್ತೆಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಜಯಂತಿ ಪ್ರಾರ್ಥಿಸಿ, ಪಂಚಾಯಿತಿ ಸಿಬ್ಬಂದಿ ಪುನೀತ್ ಕುಮಾರ್ ಸುರೇಶ್ ಸ್ವಾಗತಿಸಿ, ವರದಿ ವಾಚಿಸಿ, ವಂದಿಸಿದರು.