ಸಿದ್ದಾಪುರ, ಆ. 5: ಜಿಲ್ಲೆಯ ಕಾಫಿ ತೋಟಗಳಲ್ಲಿ ನಿವೇಶನ ರಹಿತರಾಗಿ ನೆಲೆಸಿರುವ ಕುಟುಂಬಗಳಿಗೆ ಕೂಡಲೇ ಮೂಲ ಸೌಕರ್ಯದೊಂದಿಗೆ ನಿವೇಶನ ನೀಡಬೇಕೆಂದು ಕರ್ನಾಟಕ ಆದಿ ದ್ರಾವಿಡ ಮಹಾ ಮಂಡಲದ ತಾಲೂಕು ಅಧ್ಯಕ್ಷ ಶಿವಪ್ಪ ತಿಳಿಸಿದ್ದಾರೆ

ಸಿದ್ದಾಪುರ ವ್ಯಾಪ್ತಿಯ ಕಾಫಿ ತೊಟಗಳಲ್ಲಿ ನೆಲೆಸಿರುವ ಸಮುದಾಯ ಬಾಂಧವರು ಕಳೆದ 50 ವರ್ಷಗಳಿಂದ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದು, ಯಾವದೇ ಸೌಲಭ್ಯವಿಲ್ಲದೆ ಜೀವನ ನಡೆಸುತ್ತಿದ್ದಾರೆ. ಕೆಲಸ ನಿರ್ವಹಿಸುವ ಸಂದರ್ಭ ಕಾಡಾನೆ ಹಾವಳಿಯಿಂದ ಭಯಭೀತರಾಗಿದ್ದು ಹೊಟ್ಟೆ ಪಾಡಿನ ಜೀವನಕ್ಕೆ ಆನೆ ಹಾವಳಿಯೊಂದಿಗೆ ಕೆಲಸ ನಿರ್ವಹಿಸಬೇಕಾಗಿದೆ. ಶಾಲೆಗೆ ತೆರಳುವ ವಿದ್ಯಾರ್ಥಿಗಳು ಮನೆಯಲ್ಲಿ ಇರುವಂತಾಗಿದೆ. ಇಂತಹ ಹಲವು ಸಮಸ್ಯೆಗಳು ಕಾರ್ಮಿಕರಲ್ಲಿದ್ದು, ಯಾವದೇ ಸೌಲಭ್ಯಗಳಿಲ್ಲದೆ ವಂಚಿತರಾಗಿದ್ದಾರೆ. ಕೂಡಲೇ ನಿವೇಶನ ನೀಡಬೇಕೆಂದು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿ ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ 50ಕ್ಕೂ ಹೆಚ್ಚು ಮಂದಿಯ ನಿವೇಶನದ ಅರ್ಜಿಗಳನ್ನು ನೀಡಿದ ಅವರು ಸೌಲಭ್ಯ ನೀಡದಿದ್ದಲ್ಲಿ ಜಿಲ್ಲೆಯಿಂದ ವಲಸೆ ಹೋಗುವದಾಗಿ ಎಚ್ಚರಿಸಿದರು.

ಈ ಸಂದರ್ಭ ಸಂಘಟನೆ ಪ್ರಮುಖರಾದ ವಿಜಯ, ವಿಶ್ವನಾಥ್, ಶಶಿ, ರಮೇಶ್, ರವಿ, ಪ್ರಮೀಳ, ಶಾಂತಿ, ಸುಂದರ, ಜಾನಕಿ ಗುರುವಮ್ಮ ಸೇರಿದಂತೆ ಮತ್ತಿತರರು ಹಾಜರಿದ್ದರು.