ಕೂಡಿಗೆ, ಆ. 5: ಜಿಲ್ಲೆಯ ಪ್ರಮುಖ ಅಣೆಕಟ್ಟೆಯನ್ನು ಕೇಂದ್ರ ಜಲ ಆಯೋಗದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹಾರಂಗಿ ಅಣೆಕಟ್ಟು ಪ್ರಾರಂಭಗೊಂಡು 38 ವರ್ಷಗಳು ಕಳೆಯುತ್ತಾ ಬಂದಿದೆ. ಈ ಅಣೆಕಟ್ಟೆ ಯಿಂದ ಕೆ.ಆರ್.ಎಸ್. ಅಣೆಕಟ್ಟೆಗೆ ಅಲ್ಲದೆ, ಜಿಲ್ಲೆಯ ಗಡಿಭಾಗ ಶಿರಂಗಾಲದವರೆಗೆ ಅಚ್ಚುಕಟ್ಟು ಪ್ರದೇಶದ ರೈತರಿಗೆ ಬೆಳೆ ಮಾಡಲು ಉಪಯೋಗವಾಗುವದು.

ಮೈಸೂರು ಹಾಗೂ ಹಾಸನ ಜಿಲ್ಲೆಯ ಸಾವಿರಾರು ಹೆಕ್ಟರ್ ಪ್ರದೇಶಕ್ಕೆ ಪ್ರಯೋಜನ ವಾಗುತ್ತಿರುವ ಹಿನ್ನೆಲೆಯಲ್ಲಿ ನೀರಿನ ಸಂಗ್ರಹ ಹಾಗೂ ಅಣೆಕಟ್ಟೆಯನ್ನು ಅಭಿವೃದ್ಧಿಪಡಿಸುವ ಯೋಜನೆಯ ಅಡಿಯಲ್ಲಿ ಈಗಾಗಲೇ ವಿಶ್ವ ಬ್ಯಾಂಕ್‍ನಿಂದ ರೂ. 8 ಕೋಟಿ ಮಂಜೂರಾಗಿದ್ದು, ಇದರ ಕಾಮಗಾರಿ ಈಗಾಗಲೇ ನಡೆಯುತ್ತಿದೆ. ನೀರಿನ ಸಂಗ್ರಹ ಹಾಗೂ ಅಣೆಕಟ್ಟೆಯ ಭದ್ರತೆಗೆ ಸಂಬಂಧಿಸಿದಂತೆ ಕೇಂದ್ರ ಜಲ ಆಯೋಗದ ಗುಣ ನಿಯಂತ್ರಣ ತಂಡ ಪರಿಶೀಲನೆ ನಡೆಸಿತು.

ಅಣೆಕಟ್ಟೆ ಭರ್ತಿಯಾಗಿರುವ ಈ ಸಂದರ್ಭದಲ್ಲಿ ಕಟ್ಟೆಯ ಒಳ ಗ್ಯಾಲರಿಯಲ್ಲಿ ನೀರಿನ ಸೋರುವಿಕೆಗೆ ಹಾಗೂ ಮುಖ್ಯ ದ್ವಾರಗಳ ಭದ್ರತೆ ಯನ್ನು ಪರಿಶೀಲಿಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಮುಂದಿನ ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ಅಣೆಕಟ್ಟೆಯ ನೀರು ಸಂಗ್ರಹದ ಮಟ್ಟ ಕಡಿಮೆಗೊಂಡಾಗ ಅಣೆಕಟ್ಟೆಯ ಒಳಭಾಗದ ನೀರಿನ ಸೋರಿಕೆಯನ್ನು ನಿಲ್ಲಿಸಲು ವಿವಿಧ ಕ್ರಮ ಕೈಗೊಳ್ಳು ವದರ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು.

ಅಲ್ಲದೆ, ಬೇಸಿಗೆಯ ಸಂದರ್ಭ ಇನ್ನುಳಿದ ಅಭಿವೃದ್ಧಿ ಕಾಮಗಾರಿ ಗಳನ್ನು ನಡೆಸಲಾಗುವದು ಎಂದು ಕಾರ್ಯಪಾಲಕ ಅಭಿಯಂತರ ರಂಗಸ್ವಾಮಿ ತಿಳಿಸಿದ್ದಾರೆ.

ಕೇಂದ್ರ ತಂಡದಲ್ಲಿ ರಘುನಾಥನ್ ಹಾಗೂ ಸಿಬ್ಬಂದಿಗಳು ಸೇರಿದಂತೆ ಹಾರಂಗಿ ನೀರಾವರಿ ಇಲಾಖೆಯ ಅಧಿಕಾರಿಗಳಾದ ಸಹಾಯಕ ಕಾರ್ಯಪಾಲಕ ಅಭಿಯಂತರ ಧರ್ಮರಾಜ್, ಸಹಾಯಕ ಇಂಜಿನಿಯರ್ ನಾಗರಾಜ್ ಇದ್ದರು.

- ಕೆ.ಕೆ. ನಾಗರಾಜಶೆಟ್ಟಿ.