ಆಲೂರುಸಿದ್ಧಾಪುರ, ಡಿ. 22: ಬಾಲಕನೊಬ್ಬ ಎಂದಿನಂತೆ ಶಾಲೆಗೆ ಬರುತ್ತಿದ್ದ ವೇಳೆ ರಸ್ತೆಯನ್ನು ದಾಟುತ್ತಿದ್ದ ಸಂದರ್ಭ ಎದುರಿಗೆ ಕಾರೊಂದು ಅಡ್ಡ ಬಂದಾಗ ಬಾಲಕ ತಬ್ಬಿಬ್ಬಾಗಿ ಇನ್ನೇನು ಕಾರಿನ ಚಕ್ರಕ್ಕೆ ಸಿಕ್ಕಿಹಾಕಿಕೊಳ್ಳಬೇಕಿತ್ತು. ಅಷ್ಟರಲ್ಲಿ ಪಕ್ಕದಲ್ಲಿ ಬೇರೆ ಶಾಲೆಗೆ ಹೋಗುತ್ತಿದ್ದ ಬಾಲಕನೊಬ್ಬ ತನ್ನ ಸಮಯಪ್ರಜ್ಞೆಯಿಂದ ಕಾರಿಗೆ ಅಡ್ಡ ಬಂದ ಬಾಲಕನ್ನು ರಕ್ಷಿಸಿದ ಘಟನೆ ಗುರುವಾರ ಬೆಳಿಗ್ಗೆ ಶನಿವಾರಸಂತೆ ಪಟ್ಟಣದಲ್ಲಿ ನಡೆದಿದೆ.

ನೇಪಾಳಿ ಮೂಲದ ಕುಟುಂಬವೊಂದು ಅನೇಕ ವರ್ಷಗಳಿಂದ ಶನಿವಾರಸಂತೆ ಪಟ್ಟಣದಲ್ಲಿ ವಾಸಮಾಡುತ್ತಿದೆ. ಈ ಕುಟುಂಬದ ಬಾಲಕ ಧನ್‍ಬಹೂದ್ದೂರ್ ಸಿಂಗ್ ಪಟ್ಟಣದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಇಂದು ಬೆಳಿಗ್ಗೆ ಎಂದಿನಂತೆ ಧನ್‍ಬಹೂದ್ದೂರ್ ಸಿಂಗ್ ತನ್ನ ಸಹಪಾಠಿಯ ಜೊತೆಯಲ್ಲಿ ಶಾಲೆಗೆ ಬರುತ್ತಿದ್ದ ವೇಳೆಯಲ್ಲಿ ಇನ್ನೇನು ಶಾಲೆಯ ಸನಿಹ ಬರುತ್ತಿದ್ದ ಸಂದರ್ಭ ಇವರ ಪಕ್ಕದಲ್ಲೆ ನಡೆದುಕೊಂಡು ಬರುತ್ತಿದ್ದ ಸರಕಾರಿ ಉರ್ದು ಪ್ರಾಥಮಿಕ ಶಾಲೆಯ 3ನೇ ತರಗತಿ ವಿದ್ಯಾರ್ಥಿ ಮಹಮದ್ ಅರ್ಫಾನ್ ತನ್ನ ಶಾಲೆಗೆ ಹೋಗಲು ರಸ್ತೆದಾಟುತ್ತಿದ್ದ, ಇದೆ ಸಮಯದಲ್ಲಿ ಎದುರಿಗೆ ಕಾರೊಂದು ಬಂದಾಗ ತಬ್ಬಿಬ್ಬಾದ ಬಾಲಕ ಮಹಮದ್ ಅರ್ಫಾನ್ ರಸ್ತೆ ಮೇಲೆ ಬಿದ್ದಿದ್ದಾನೆ, ಸ್ವಲ್ಪದರಲ್ಲೆ ಕಾರು ಬಾಲಕ ಮೇಲೆ ಹರಿಯುವದರಲ್ಲಿತ್ತು. ಇದನ್ನು ಗಮನಿಸಿದ ಧನ್‍ಬಹೂದ್ದೂರ್ ಸಿಂಗ್ ತನ್ನ ಸಮಯಪ್ರಜ್ಞೆಯಿಂದ ಚಲಿಸುತ್ತಿದ್ದ ಕಾರಿಗೆ ಅಡ್ಡಲಾಗಿ ಬಿದ್ದ ಬಾಲಕ ಮಹಮದ್ ಅರ್ಫಾನ್‍ನ ಕೈಯನ್ನು ಜೋರಾಗಿ ತನ್ನೆಡೆಗೆ ಎಳೆದುಕೊಂಡು ಕಾರಿಗೆ ಸಿಕ್ಕಿಹಾಕೊಳ್ಳುತ್ತಿದ್ದ ಬಾಲಕನನ್ನು ರಕ್ಷಣೆ ಮಾಡಿದ್ದಾನೆ.

ಈ ವೇಳೆಯಲ್ಲಿ ಬಾಲಕ ಮಹಮದ್ ಅರ್ಫಾನಿನ ಕಾಲು ತರಚಿ ಹೋಗಿದೆ. ಈ ಘಟನೆ ನಡೆದ ನಂತರವೂ ಅಪರಿಚಿತ ಕಾರು ಚಾಲಕ ಕಾರನ್ನು ನಿಲ್ಲಿಸದೆ ಪರಾರಿಯಾಗಿದ್ದಾನೆ. ಧನ್‍ಬಹೂದ್ದೂರ್ ಸಿಂಗ್ ಮಹಮದ್ ಅರ್ಫಾನ್‍ನನ್ನು ಸಮಿಪದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೋಡಿಸುವದರ ಮೂಲಕ ಮಾನವೀಯತೆ ಮೆರೆದಿದ್ದಾನೆ.

ಘಟನೆಯ ಮಾಹಿತಿ ತಿಳಿದ ಸಾರ್ವಜನಿಕರು ಹಾಗೂ ಧನ್‍ಬಹೂದ್ದೂರ್ ಸಿಂಗ್ ಓದುತ್ತಿರುವ ಶಾಲೆಯ ಶಿಕ್ಷಕರು ಮತ್ತು ಉರ್ದು ಶಾಲೆಯ ಶಿಕ್ಷಕರು ಧನ್‍ಬಹೂದ್ದೂರ್ ಸಿಂಗ್‍ನನ್ನು ಪ್ರಶಂಸಿದ್ದಾರೆ. ಈ ಮೂಲಕವಾಗಿ ಧನ್‍ಬಹೂದ್ದೂರ್ ಸಿಂಗ್ ಉಳಿದ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾನೆ. ತನ್ನನ್ನು ರಕ್ಷಣೆ ಮಾಡಿದ ಧನ್‍ಬಹೂದ್ದೂರ್ ಸಿಂಗ್‍ಗೆ ಮಹಮದ್ ಅರ್ಫಾನ್ ಮತ್ತು ಪೋಷಕರು ಧನ್ಯವಾದ ಹೇಳೆದ್ದಾರೆ.