ಕುಶಾಲನಗರ, ಡಿ. 22: ಕಾಡಿನಿಂದ ನಾಡಿಗೆ ಲಗ್ಗೆಯಿಡುತ್ತಿದ್ದ 4 ಪುಂಡಾನೆಗಳು ಇದೀಗ ದುಬಾರೆ ಸಾಕಾನೆ ಶಿಬಿರದಲ್ಲಿ ಮಾವುತ, ಕಾವಾಡಿಗರ ತರಬೇತಿಯೊಂದಿಗೆ ಶಿಬಿರದ ವಾತಾವರಣಕ್ಕೆ ಒಗ್ಗಿಕೊಳ್ಳುತ್ತಿರುವ ದೃಶ್ಯ ಕಂಡುಬಂದಿದೆ. ಕಳೆದ 1 ತಿಂಗಳ ಹಿಂದೆ ಚೆಟ್ಟಳ್ಳಿ, ಸಿದ್ದಾಪುರ ವ್ಯಾಪ್ತಿಯಿಂದ ಅರಣ್ಯ ಇಲಾಖೆಯ ಕಾರ್ಯಾಚರಣೆ ಮೂಲಕ ಹಿಡಿದು ದುಬಾರೆಯಲ್ಲಿ ಈ 4 ಆನೆಗಳನ್ನು ಪಳಗಿಸುವ ಕಾರ್ಯದಲ್ಲಿ ಶಿಬಿರದ ಮಾವುತ ಕಾವಾಡಿಗರ ತಂಡದ ಸದಸ್ಯರು ತೊಡಗಿಸಿಕೊಂಡಿದ್ದಾರೆ.
ಆನೆ-ಮಾನವ ಸಂಘರ್ಷದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಇದೀಗ ನೂತನ ನಾಮಕರಣಗೊಂಡಿರುವ ಶ್ರೀರಾಮ ಅಲಿಯಾಸ್ ಸುಭಾಷ್, ಕುಶ, ಲವ, ಲಕ್ಷ್ಮಣ ಸ್ವಚ್ಚಂದ ಕಾಡಿನ ವಿಹಾರವನ್ನು ಸ್ವಲ್ಪ ಮಟ್ಟಿಗೆ ಮರೆತು ದುಬಾರೆ ಸಾಕಾನೆ ಶಿಬಿರದ ವಾತಾವರಣಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ ಎಂದು ಕಾವಾಡಿಗರಾದ ಗಣೇಶ್, ರಾಜು ಮತ್ತು ರವಿ ಮಾಹಿತಿ ನೀಡಿದ್ದಾರೆ.
ದುಬಾರೆ ಶಿಬಿರಕ್ಕೆ ಭೇಟಿ ನೀಡಿದ ಸಂದರ್ಭ ಪ್ರತ್ಯೇಕ ಕಿರಾಲುಗಳಲ್ಲಿ ಬಂಧಿತರಾಗಿರುವ ನಾಲ್ವರು ಅತಿಥಿಗಳು ಆರೈಕೆ ಸಂದರ್ಭ ನೀಡುತ್ತಿರುವ ಆಹಾರಗಳನ್ನು ಸೇವಿಸುತ್ತಿದ್ದು ಆರೋಗ್ಯವಾಗಿದ್ದಾರೆ ಎನ್ನುವದು ಈ ಕಾವಾಡಿಗರ ಅನಿಸಿಕೆ. ಆಗಾಗ್ಗೆ ವನ್ಯಜೀವಿ ತಜ್ಞರು ಭೇಟಿ ನೀಡಿ ಆರೈಕೆ ಮಾಡುತ್ತಿದ್ದಾರೆ. ಇನ್ನೊಂದೆಡೆ ಸಾಕಾನೆಗಳಿಂದ ಪುಂಡಾನೆಗಳಿಗೆ ತರಬೇತಿ. ಅದೇ ರೀತಿ ಆನೆ ಭಾಷೆಗಳಲ್ಲಿ ಸಂಕೇತಗಳೊಂದಿಗೆ ಈ ಎಲ್ಲಾ ಚಟುವಟಿಕೆಗಳಿಗೆ ಕಾಡಾನೆಗಳು ಸ್ಪಂದನ ನೀಡುತ್ತಿವೆ. ಶಿಬಿರದಲ್ಲಿ 29 ಸಾಕಾನೆಗಳು ಸೇರಿದಂತೆ ಇದೀಗ ಒಟ್ಟು 33 ಸಂಖ್ಯೆಗೆ ಏರಿದೆ ಎಂದು ದುಬಾರೆ ಶಿಬಿರದ ಉಸ್ತುವಾರಿ ಅಧಿಕಾರಿ ಕೆ.ಪಿ. ರಂಜನ್ ಮಾಹಿತಿ ನೀಡಿದ್ದಾರೆ.
ಇನ್ನೂ ಕೆಲವು ತಿಂಗಳುಗಳ ಕಾಲ ತರಬೇತಿ ನೀಡಿ ನಂತರ ಕಿರಾಲಿನಿಂದ ಹೊರಬಿಡಲು ಕ್ರಮಕೈಗೊಳ್ಳಲಾಗಿದೆ ಎಂದು ರಂಜನ್ ಸ್ಥಳಕ್ಕೆ ತೆರಳಿದ `ಶಕ್ತಿ' ಗೆ ತಿಳಿಸಿದ್ದಾರೆ.