ಸೋಮವಾರಪೇಟೆ, ಜು. 27: ಅರಣ್ಯ ನಾಶದಿಂದ ಮನುಕುಲದ ವಿನಾಶ ಶತಃಸಿದ್ಧ. ಭೂಗ್ರಹದ ಶ್ವಾಸಕೋಶವೆ ಅರಣ್ಯಗಳಾಗಿದ್ದು, ಅದನ್ನು ಉಳಿಸಿ ಬೆಳೆಸಿದ್ದಲ್ಲಿ ಮಾತ್ರ ಮಾನವರ ಶ್ವಾಸಕೋಶಗಳು ಕಾರ್ಯನಿರ್ವಹಿಸಲಿದೆ ಎಂದು ಬಾಣವಾರದ ಉಪ ವಲಯಾರಣ್ಯಾಧಿಕಾರಿ ಎಚ್.ಎಸ್. ಶ್ರೀನಿವಾಸ್ ಹೇಳಿದರು.

ಇಲ್ಲಿನ ಅಲೋಕ ಸಭಾಂಗಣದಲ್ಲಿ ರೋಟರಿ ಸಂಸ್ಥೆ ಆಯೋಜಿಸಿದ್ದ ಮಾಸಿಕ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಪರಿಸರ ಹಾಗೂ ಅರಣ್ಯ ವಿಷಯವಾಗಿ ಉಪನ್ಯಾಸ ನೀಡಿದರು.

ಅರಣ್ಯಗಳು ಮಾನವನಿಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಉಪಯೋಗವಾಗುವದಲ್ಲದೆ, ಕೋಟ್ಯಾಂತರ ವನ್ಯಜೀವಿಗಳಿಗೆ ಆವಾಸ ಸ್ಥಾನವಾಗಿದೆ. ಮನುಷ್ಯರು ತೋರುವ ವಿಕೃತ ಚಟುವಟಿಕೆಗಳಿಂದ ಇಂದು ಅರಣ್ಯ ನಾಶದ ಅಂಚಿಗೆ ತಳ್ಳಲ್ಪಡುತ್ತಿದೆ. ಇದರಿಂದ ಹವಾಮಾನ ವೈಪರಿತ್ಯ ಉಂಟಾಗಿ, ಮನುಕುಲದ ಮೇಲೆ ಭಾರೀ ಪರಿಣಾಮ ಬೀರುವ ದಲ್ಲದೆ, ದೇಶದ ಆರ್ಥಿಕ ಸ್ಥಿತಿಗೂ ಹೊಡೆತ ಬೀಳುತ್ತದೆ ಎಂದರು.

ರೋಟರಿ ಜಿಲ್ಲಾ ಮಾಜಿ ಸಹಾಯಕ ರಾಜ್ಯಪಾಲ ಬಿ.ಎಸ್. ಸದಾನಂದ್ ಮಾತನಾಡಿ, ರೋಟರಿ ಸಂಸ್ಥೆಯಲ್ಲಿ ಸದಸ್ಯತ್ವ ಪಡೆದುಕೊಳ್ಳುವದರಿಂದ ಸ್ನೇಹಾಚಾರ ವೃದ್ಧಿ, ಗುಣ ನಡತೆ, ನಾಯಕತ್ವ, ವಿವಿಧ ಸ್ತರಗಳ ಜನರೊಂದಿಗೆ ಒಡನಾಟ, ಇದರಿಂದ ತಮ್ಮ ವ್ಯಾಪಾರ ವಹಿವಾಟು ವೃದ್ಧಿಯಾಗಲಿದೆ. ಇಲ್ಲಿ ಸಾಂಸ್ಕøತಿಕ ವಿಚಾರಗಳ ವಿನಿಮಯ ಸೇರಿದಂತೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವದರೊಂದಿಗೆ ತಮ್ಮ ಸೇವಾ ಮನೋಭಾವದಿಂದ ಸಮಾಜದ ಗೌರವಕ್ಕೂ ಪಾತ್ರರಾಗಲು ಸಂಸ್ಥೆಯ ಸದಸ್ಯತ್ವ ನೆರವಾಗಲಿದೆ ಎಂದು ಮಾಹಿತಿ ನೀಡಿದರು.

ಸಭಾ ಅಧ್ಯಕ್ಷತೆಯನ್ನು ವಹಿಸಿದ್ದ ಅಧ್ಯಕ್ಷ ಭರತ್ ಭೀಮಯ್ಯ ಸಂಸ್ಥೆ ಕಳೆದ ಒಂದು ತಿಂಗಳು ಆಯೋಜಿಸಿದ್ದ ವಿವಿಧ ಜನಪರ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆಯ ಮಾಸಿಕ ವರದಿಯನ್ನು ಕಾರ್ಯದರ್ಶಿ ವನಮಾಲಿ ಹೆಬ್ಬಾರ್ ಮಂಡಿಸಿದರು.