ಸೋಮವಾರಪೇಟೆ, ಜು. 27: ಮಳೆಗಾಲದಲ್ಲಿ ಸೋರುವ, ತಾಲೂಕು ಕಚೇರಿ ಸೇರಿದಂತೆ ಇತರ ಉಪ ಕಚೇರಿಗಳನ್ನು ಹೊಂದಿರುವ ಇಲ್ಲಿನ ಮಿನಿ ವಿಧಾನ ಸೌಧಕ್ಕೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಂಪೂರ್ಣ ಕಟ್ಟಡವನ್ನು ವೀಕ್ಷಿಸಿದ ಶಾಸಕ ರಂಜನ್ ಅಲ್ಲಿನ ವಸ್ತು ಸ್ಥಿತಿಯನ್ನು ಗಮನಿಸಿ ತಕ್ಷಣವೇ ದುರಸ್ತಿಗೊಳಿಸದಿದ್ದರೆ ಮುಖ್ಯ ಕಡತ ಸೇರಿದಂತೆ ಹಲವು ದಾಖಲಾತಿಗಳು ಹಾನಿಯಾಗುವ ಆತಂಕ ವ್ಯಕ್ತಪಡಿಸಿದರಲ್ಲದೆ, ತಕ್ಷಣ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು. ನೆಮ್ಮದಿ ಕೇಂದ್ರ, ಕಡತ ಕೊಠಡಿ, ಚುನಾವಣಾ ಶಾಖೆಯ ಕೊಠಡಿಗಳು ಸಂಪೂರ್ಣವಾಗಿ ಸೋರುತ್ತಿದ್ದು, ಚುನಾವಣೆ ಶಾಖೆಯ ಒಳಗೆ ನೀರು ಒಳ ಬರದಂತೆ ತಾತ್ಕಾಲಿಕ ಕಟ್ಟೆಯನ್ನು ಕಟ್ಟಿಕೊಂಡಿರುವದನ್ನು ತೋರಿಸಿದ ತಹಶೀಲ್ದಾರ್ ಶಿವಪ್ಪ, ಮಳೆಗಾಲದಲ್ಲಿ ಇಲಾಖೆಯ ಸಿಬ್ಬಂದಿಗಳು ಕಷ್ಟದಿಂದ ಕರ್ತವ್ಯ ನಿರ್ವಹಿಸಬೇಕಾಗಿದೆ. ನೀರು ಸೋರದಂತೆ ತಲೆಯ ಮೇಲೆ ಟಾರ್ಪಲ್ ಕಟ್ಟಿಕೊಂಡು ಕೆಲಸ ಮಾಡುವಂತಾಗಿದೆ. ಆದರೆ ಕಟ್ಟಡದ ಜವಾಬ್ಧಾರಿ ಹೊತ್ತಿರುವ ಲೋಕೋಪಯೋಗಿ ಇಲಾಖೆ ಗಮನಹರಿಸುತ್ತಿಲ್ಲವೆಂದು ದೂರಿದರು.

ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರ ಮಾತನಾಡಿ ಸರ್ಕಾರದ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆ ಕಟ್ಟಡ ನಿರ್ಮಿಸಿದ್ದರೂ ಇದರ ನಿರ್ವಹಣೆ ನಮ್ಮ ಇಲಾಖೆಗೆ ಸೇರಿದ್ದಲ್ಲ. ಆದ್ದರಿಂದ ದುರಸ್ತಿ ಕಾರ್ಯ ಕಷ್ಟಸಾಧ್ಯವಾಗಿದೆ. ಆದರೆ ಜಿಲ್ಲಾಧಿಕಾರಿಗಳ ಸೂಚನೆಯಂತೆ ದುರಸ್ತಿ ಕಾರ್ಯಕ್ಕಾಗಿ 25 ಲಕ್ಷ ರೂಪಾಯಿಗಳ ಯೋಜನೆ ರೂಪಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದರು.

ಈ ಸಂದರ್ಭ ಚರ್ಚೆ ನಡೆಸಿದ ಶಾಸಕರು ಕಟ್ಟಡ ಮೇಲ್ಬಾಗದಲ್ಲಿ ಶೀಟ್ ಅಳವಡಿಸುವಂತೆ ಹಾಗೂ ಕಿಟಕಿಗಳಿಗೆ ಸಜ್ಜೆಗಳನ್ನು ನಿರ್ಮಿಸುವಂತೆ ಹಾಗೂ ಇದಕ್ಕಾಗಿ ಹೊಸ ಯೋಜನೆ ತಯಾರಿಸಿ ತಕ್ಷಣ ಕಳುಹಿಸಿ ಕೊಡುವಂತೆ ಲೋಕೋಪಯೋಗಿ ಅಧಿಕಾರಿಗಳಿಗೆ ಸೂಚಿಸಿದರು. ಈ ಬಗ್ಗೆ ಕಂದಾಯ ಸಚಿವರು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳೊಡನೆ ಚರ್ಚಿಸಿ ಅವರ ಗಮನ ಸೆಳೆದು ಮಿನಿ ವಿಧಾನಸೌಧ ದುರಸ್ತಿಗೆ ಕ್ರಮ ಕೈಗೊಳ್ಳುವದಾಗಿ ತಿಳಿಸಿದರು. ಈ ಸಂದರ್ಭ ಗ್ರೇಡ್ 2 ತಹಶೀಲ್ದಾರ್ ನರಗುಂದ್, ಜಿ.ಪಂ. ಮಾಜಿ ಸದಸ್ಯ ರಾಜಾರಾವ್, ತಾಲೂಕು ಬಿಜೆಪಿ ಅಧ್ಯಕ್ಷ ಕುಮಾರಪ್ಪ, ತಾಲೂಕು ಯುವ ಮೋರ್ಚಾ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ನಗರ ಬಿಜೆಪಿ ಅಧ್ಯಕ್ಷ ಸೋಮೇಶ್, ಪ್ರಮುಖರಾದ ರಮೇಶ್, ಗಂಗಾಧರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.